ADVERTISEMENT

ತಾಂತ್ರಿಕ ದೋಷ ಹಿನ್ನೆಲೆ: ಪಾರ್ಕಿಂಗ್ ಜಾಗಕ್ಕೆ ಮರಳಿದ ವಿಮಾನ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2021, 19:13 IST
Last Updated 12 ಸೆಪ್ಟೆಂಬರ್ 2021, 19:13 IST
   

ಬೆಂಗಳೂರು: ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ‌ ನಿಲ್ದಾಣದಿಂದ ಹೈದರಾಬಾದ್‌ಗೆ ಹೊರಡಲು ಸಿದ್ಧವಾಗಿದ್ದ ವಿಮಾನ, ತಾಂತ್ರಿಕ ದೋಷ‌ದಿಂದಾಗಿ ರನ್‌ವೇಯಿಂದ ಪಾರ್ಕಿಂಗ್ ಜಾಗಕ್ಕೆ ಮರಳಿದ ಘಟನೆ ಭಾನುವಾರ ನಡೆದಿದೆ.

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವರು ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು ಎಂದು ಗೊತ್ತಾಗಿದೆ.

‘ಏರ್ ಇಂಡಿಯಾ 9ಐ 517 ವಿಮಾನವು ಸಂಜೆ 6.45ಕ್ಕೆ ನಿಲ್ದಾಣ
ದಿಂದ ಟೇಕಾಫ್ ಆಗಬೇಕಿತ್ತು. ರಾತ್ರಿ 8.15ಕ್ಕೆ ಹೈದರಾಬಾದ್ ತಲುಪಬೇಕಿತ್ತು. ಟೇಕಾಫ್‌ಗಾಗಿ ರನ್‌ವೇಯಲ್ಲಿ ವಿಮಾನ ನಿಲ್ಲಿಸಿದ್ದಾಗ, ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಮುಂಜಾಗ್ರತಾ ಕ್ರಮವಾಗಿ ವಿಮಾನವನ್ನು ವಾಪಸು ನಿಲ್ದಾಣದ ಪಾರ್ಕಿಂಗ್ ಜಾಗಕ್ಕೆ ತಂದು ನಿಲ್ಲಿಸಲಾಯಿತು’ ಎಂದು ಮೂಲಗಳು ಹೇಳಿವೆ.

ADVERTISEMENT

ವಿಮಾನದಲ್ಲಿ ಕುಳಿತಿದ್ದ ಶೋಭಾ ಕರಂದ್ಲಾಜೆ ಬಳಿ ಹೋಗಿದ್ದ ಅಧಿಕಾರಿಗಳು, 'ನಿಮಗೆ ಪ್ರತ್ಯೇಕ ವಿಮಾನದ ವ್ಯವಸ್ಥೆ ಮಾಡಲಾಗುವುದು. ಸದ್ಯ ವಿಮಾನದಿಂದ ಕೆಳಗೆ ಇಳಿದು, ಅತೀ ಗಣ್ಯರ ಕೊಠಡಿಯಲ್ಲಿ ವಿಶ್ರಾಂತಿ ಪಡೆಯಿರಿ’ ಎಂದಿದ್ದರು.

ವಿಮಾನದಿಂದ ಇಳಿಯಲು ಒಪ್ಪದ ಶೋಭಾ ಕರಂದ್ಲಾಜೆ, 'ವಿಮಾನದಲ್ಲಿ ಪ್ರಯಾಣಿಸುವ ಎಲ್ಲರೂ ಸಮಾನರು. ಯಾವುದೇ ತಾರತಮ್ಯ‌ ಮಾಡಬೇಡಿ. ಎಲ್ಲರನ್ನೂ ಸುರಕ್ಷಿತವಾಗಿ ಕಳುಹಿಸಲು ಪ್ರತ್ಯೇಕ ವಿಮಾನದ ವ್ಯವಸ್ಥೆ ‌ಮಾಡಿ. ಎಲ್ಲರೂ ಹೊರಟ ನಂತರವೇ ನಾನು ಕೊನೆಯದಾಗಿ ವಿಮಾನದಿಂದ ಇಳಿಯುವೆ' ಎಂದರು.

ಕೆಲ ಹೊತ್ತಿನ ನಂತರ, ಪ್ರತ್ಯೇಕ ವಿಮಾನದ ಮೂಲಕ ಪ್ರಯಾಣಿಕರನ್ನು ಹೈದಾರಾಬಾದ್‌ಗೆ ಕಳುಹಿಸಲಾಯಿತೆಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.