
ಬೆಂಗಳೂರು: ಕ್ಯಾನ್ಸರ್ ಪೀಡಿತರಿಗೆ ರೊಬೊಟಿಕ್ ತಂತ್ರಜ್ಞಾನ ವರದಾನವಾಗಿದ್ದು, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಸಾವಿರಕ್ಕೂ ಅಧಿಕ ಮಂದಿಗೆ ಈ ತಂತ್ರಜ್ಞಾನದ ನೆರವಿನಿಂದ ಶಸ್ತ್ರಚಿಕಿತ್ಸೆ ಮಾಡಲಾಗಿದೆ.
ಖಾಸಗಿ ವ್ಯವಸ್ಥೆಯಡಿ ರೊಬೊಟಿಕ್ ಶಸ್ತ್ರಚಿಕಿತ್ಸೆ ದುಬಾರಿ ಆಗಿರುವ ಕಾರಣ, ಸಂಸ್ಥೆಯಲ್ಲಿ 2017ರಲ್ಲಿ ಈ ಆಧುನಿಕ ಶಸ್ತ್ರಚಿಕಿತ್ಸೆಯನ್ನು ಪರಿಚಯಿಸಲಾ ಯಿತು. ಡಾ.ವಿನ್ಸಿ ರೊಬೊಟಿಕ್ ತಂತ್ರಜ್ಞಾನವನ್ನು ಅಳವಡಿಸಿಕೊಂಡು, ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗುತ್ತಿದೆ. ಅಮೆರಿಕದ ಇನ್‌ಸ್ಟಿಟ್ಯೂಟ್ ಆಫ್ ಸರ್ಜಿಕಲ್ ರಿಸರ್ಚ್ ಸಂಸ್ಥೆಯು ಡಾ.ವಿನ್ಸಿ ರೊಬೊಟಿಕ್ ಯಂತ್ರವನ್ನು ಅಭಿವೃದ್ಧಿಪಡಿಸಿದೆ.
ರಾಜ್ಯದಲ್ಲಿ ಸರ್ಕಾರಿ ವ್ಯವಸ್ಥೆಯಡಿ ಕಿದ್ವಾಯಿ ಸಂಸ್ಥೆಯಲ್ಲಿ ಮಾತ್ರ ಈ ರೊಬೊಟ್ ಯಂತ್ರ ಕಾರ್ಯಾಚರಣೆ ಮಾಡುತ್ತಿದೆ. ಈ ಯಂತ್ರದ ನೆರವಿನಿಂದ ವರ್ಷದಿಂದ ವರ್ಷಕ್ಕೆ ರೊಬೊಟಿಕ್ ಶಸ್ತ್ರಚಿಕಿತ್ಸೆ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ವರ್ಷ ಜನವರಿಯಲ್ಲಿಯೇ 23 ಮಂದಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ಈ ರೊಬೊಟಿಕ್ ತಂತ್ರಜ್ಞಾನ ವ್ಯವಸ್ಥೆಯನ್ನು ಸಂಸ್ಥೆಯು ₹ 16.5 ಕೋಟಿ ವೆಚ್ಚದಲ್ಲಿ ಹಿಂದೆ ಅಳವಡಿಸಿಕೊಂಡಿತ್ತು. 2021ರಲ್ಲಿ ಪ್ರತಿ ತಿಂಗಳು ಸರಾಸರಿ ಆರು ರೊಬೊಟಿಕ್ ಶಸ್ತ್ರಚಿಕಿತ್ಸೆ ನಡೆಸಿದರೆ, ಕಳೆದ ವರ್ಷ ಈ ಸಂಖ್ಯೆ 23ಕ್ಕೆ ಏರಿದೆ. ಈವರೆಗೆ ಒಟ್ಟು 1,069 ರೊಬೊಟಿಕ್ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಪ್ರಾಸ್ಪೇಟ್ (ಮೂತ್ರನಾಳ) ಕ್ಯಾನ್ಸರ್, ಗರ್ಭಕಂಠ ಕ್ಯಾನ್ಸರ್, ತಲೆ ಮತ್ತು ಕುತ್ತಿಗೆ ಕ್ಯಾನ್ಸರ್, ಎದೆಗೂಡಿನ ಕ್ಯಾನ್ಸರ್‌ಗಳು ಸೇರಿ ಆಯ್ದ ಕ್ಯಾನ್ಸರ್ ಪ್ರಕರಣಗಳಲ್ಲಿ ರೋಗಿಗಳಿಗೆ ಈ ತಂತ್ರಜ್ಞಾನದ ನೆರವಿನಿಂದ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ.
ನಿಖರ ಶಸ್ತ್ರಚಿಕಿತ್ಸೆ: ಈ ಅತ್ಯಾಧುನಿಕ ತಂತ್ರಜ್ಞಾನವು ರೋಗಿ ಹಾಗೂ ವೈದ್ಯರಿಗೆ ಸಹಕಾರಿಯಾಗಿದೆ. ಸಣ್ಣದಾಗಿ ರಂಧ್ರ ಮಾಡಿ, ರೋಗಕಾರಕ ಭಾಗವನ್ನು ಮಾತ್ರ ಹೊರ ತೆಗೆಯಲಾಗುತ್ತದೆ. ಇದರಿಂದ ನಿಖರ ಶಸ್ತ್ರಚಿಕಿತ್ಸೆಯ ಜತೆಗೆ, ರೋಗಿಯು ಅಲ್ಪಾವಧಿಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಸಾಂಪ್ರದಾಯಿಕ ಶಸ್ತ್ರಚಿಕಿತ್ಸಾ ವಿಧಾನದಲ್ಲಿ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗುವ ಜತೆಗೆ, ಶಸ್ತ್ರಚಿಕಿತ್ಸೆ ಹಾಗೂ ರೋಗಿ ಚೇತರಿಸಿಕೊಳ್ಳಲು ಹೆಚ್ಚಿನ ಅವಧಿ ಬೇಕಾಗುತ್ತದೆ.
‘ಬದಲಾದ ಜೀವನಶೈಲಿ ಹಾಗೂ ಧೂಮಪಾನದಂತಹ ವ್ಯಸನ, ತಂಬಾಕು ಉತ್ಪನ್ನ ಸೇವನೆ, ಒತ್ತಡದ ಜೀವನ, ಕಲುಷಿತ ವಾತಾವರಣ ಸೇರಿ ವಿವಿಧ ಕಾರಣಗಳಿಂದ ಕ್ಯಾನ್ಸರ್ ಪ್ರಕರಣಗಳು ಹೆಚ್ಚಳವಾಗುತ್ತಿವೆ. ರೊಬೊಟಿಕ್ ತಂತ್ರಜ್ಞಾನವನ್ನು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುತ್ತಿರುವುದರಿಂದ ಹೆಚ್ಚು ನಿಖರತೆ ಸೇರಿ ಹಲವು ಪ್ರಯೋಜನಗಳಾಗುತ್ತಿವೆ. ರೋಗಿಯ ಆಸ್ಪತ್ರೆ ಅವಧಿಯೂ ಕಡಿತವಾಗುತ್ತಿದೆ’ ಎಂದು ಸಂಸ್ಥೆ ನಿರ್ದೇಶಕ ಡಾ.ಟಿ.ನವೀನ್ ತಿಳಿಸಿದರು.
ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಕ್ಯಾನ್ಸರ್ ಪೀಡಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ರೊಬೊಟಿಕ್ ತಂತ್ರಜ್ಞಾನದಿಂದ ಸಂಕೀರ್ಣ ಶಸ್ತ್ರಚಿಕಿತ್ಸೆ ಸುಲಭಸಾಧ್ಯವಾಗುತ್ತಿದೆಡಾ.ಟಿ.ನವೀನ್ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕ
ಶಸ್ತ್ರಚಿಕಿತ್ಸೆಗೆ ನೆರವು
ಹೊಂಬೇಗೌಡ ನಗರದಲ್ಲಿರುವ ಈ ಸಂಸ್ಥೆಗೆ ರಾಜ್ಯದ ವಿವಿಧ ಭಾಗಗಳ ಜತೆಗೆ ಹೊರ ರಾಜ್ಯಗಳಿಂದಲೂ ರೋಗಿಗಳು ಭೇಟಿ ನೀಡುತ್ತಿದ್ದಾರೆ. ಇದರಿಂದಾಗಿ ಚಿಕಿತ್ಸೆಗಾಗಿ ಸಂಸ್ಥೆಗೆ ಬರುವ ರೋಗಿಗಳ ಸಂಖ್ಯೆ ಏರುಗತಿ ಪಡೆದಿದೆ. ಆದ್ದರಿಂದ ಇನ್ನೊಂದು ರೊಬೊಟ್ ಯಂತ್ರ ಅಳವಡಿಕೆಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುತ್ತಿದೆ ಎಂದು ಸಂಸ್ಥೆಯ ಮೂಲಗಳಿಂದ ತಿಳಿದುಬಂದಿದೆ. ರೊಬೊಟಿಕ್ ಶಸ್ತ್ರಚಿಕಿತ್ಸೆಯಲ್ಲಿ ಬಳಸುವ ವಸ್ತುಗಳು ದುಬಾರಿಯಾಗಿರುವುದರಿಂದ ವೆಚ್ಚ ಅಧಿಕವಾಗಲಿದೆ. ಕೆಲ ಶಸ್ತ್ರಚಿಕಿತ್ಸಾ ಪ್ರಕ್ರಿಯೆಯನ್ನು ಬಿಪಿಎಲ್ ಕುಟುಂಬದವರಿಗೆ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆ–ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಯೋಜನೆಯಡಿ ನಡೆಸಿದರೆ ಯೋಜನೆಯಡಿ ಬಾರದ ಕೆಲ ಶಸ್ತ್ರಚಿಕಿತ್ಸಾ ಪ್ರಕ್ರಿಯೆಗಳನ್ನು ದಾನಿಗಳ ನೆರವಿನಿಂದ ಮಾಡಲಾಗುತ್ತಿದೆ.
ಅಂಕಿ–ಅಂಶಗಳು
874 - ರೋಗಿಗಳ ಚಿಕಿತ್ಸೆಗೆ ಸಂಸ್ಥೆ ಹೊಂದಿರುವ ಬೆಡ್‌ಗಳು
800–1,000 ನಿತ್ಯ ಭೇಟಿ ನೀಡುವ ಸರಾಸರಿ ಹೊರ ರೋಗಿಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.