ಬೆಂಗಳೂರು: ಶಿವಮೊಗ್ಗ, ಉಡುಪಿ ಹಾಗೂ ನಗರದ ಬನಶಂಕರಿ ದೇವಸ್ಥಾನವೊಂದರಲ್ಲಿ ಚಿನ್ನ ಹಾಗೂ ನಗದು ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಬನಶಂಕರಿ ಪೊಲೀಸರು ಆರೋಪಿಗಳ ವಿಚಾರಣೆ ತೀವ್ರಗೊಳಿಸಿದ್ದಾರೆ.
ಅರ್ಚಕ ಪ್ರವೀಣ್ ಭಟ್ ಮತ್ತು ಸಂತೋಷ್ ಅವರ ವಿಚಾರಣೆ ವೇಳೆ ಆರೋಪಿಗಳು ಹೇಗೆ ಕೃತ್ಯ ಎಸಗುತ್ತಿದ್ದರು ಎಂಬ ಸಂಗತಿ ಗೊತ್ತಾಗಿದೆ.
ಪ್ರವೀಣ್ ಭಟ್ ಎಂಬಾತ ದೇವಸ್ಥಾನದಲ್ಲಿ ಬೆಳಿಗ್ಗೆ ಪೂಜೆ ಮಾಡುವುದು, ರಾತ್ರಿ ವೇಳೆ ಅದೇ ದೇವಸ್ಥಾನದಲ್ಲಿ ಚಿನ್ನ, ಬೆಳ್ಳಿ ಆಭರಣ ಹಾಗೂ ನಗದು ಕಳ್ಳತನ ಮಾಡುತ್ತಿದ್ದ ಎಂಬ ಸಂಗತಿ ಗೊತ್ತಾಗಿದೆ.
ಕಳ್ಳತನ ಪ್ರಕರಣವೊಂದರಲ್ಲಿ ಪ್ರವೀಣ್ ಭಟ್ ಕಾರಾಗೃಹಕ್ಕೆ ಹೋಗಿದ್ದ. ಅದೇ ಜೈಲಿನಲ್ಲಿ ಪರಿಚಯವಾಗಿದ್ದ ಮತ್ತೊಬ್ಬ ಕಳ್ಳನ ನೆರವಿನಿಂದ ಚಿನ್ನಾಭರಣ ಕದ್ದು ಮಾರಾಟ ಮಾಡುತ್ತಿದ್ದ. ಪ್ರತಿಸಲ ಕಳ್ಳತನ ಮಾಡಿದ ನಂತರ ಆರೋಪಿಗಳು ದೇವರ ಮುಂದೆ ಕ್ಷಮಿಸಿ ಎಂಬುದಾಗಿ ಕೈಮುಗಿಯುತ್ತಿದ್ದರು ಎಂದು ಮೂಲಗಳು ಹೇಳಿವೆ.
‘ಪ್ರವೀಣ್ ಭಟ್ ಶಿವಮೊಗ್ಗ, ಉಡುಪಿಯಲ್ಲಿ ಅರ್ಚಕನಾಗಿದ್ದ. ಅಲ್ಲಿ ಹೋಮ, ಹವನ, ಪೂಜೆ ಮಾಡಿಕೊಂಡಿದ್ದ. ರಾತ್ರಿ ಅದೇ ದೇವಾಲಯದಲ್ಲಿ ದೇವರ ಬೆಳ್ಳಿ ಸಾಮಗ್ರಿಗಳು, ಹಿತ್ತಾಳೆ ವಸ್ತುಗಳು, ಚಿನ್ನಾಭರಣ ಕದ್ದು ಮಾರಾಟ ಮಾಡುತ್ತಿದ್ದ’ ಎಂದು ಪೊಲೀಸರು ಹೇಳಿದರು.
‘ಬನಶಂಕರಿ ದೇವಾಲಯದಲ್ಲಿ ಅರ್ಚಕನಾಗಿದ್ದ ವೇಳೆ ಕಳ್ಳತನ ಮಾಡಿದ್ದ. ದೇವಾಲಯದ ಆಡಳಿತ ಮಂಡಳಿ ಸದಸ್ಯರು, ಪರಿಶೀಲನೆ ನಡೆಸಿ ಬಳಿಕ ದೂರು ನೀಡಿದ್ದರು. ದೂರು ಆಧರಿಸಿ ಬನ್ನೇರುಘಟ್ಟ ಸಮೀಪದ ಗೊಟ್ಟಿಗೇರೆ ಬಳಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಆರೋಪಿಯನ್ನು ಬಂಧಿಸಲಾಗಿತ್ತು’ ಎಂದು ಮೂಲಗಳು ಹೇಳಿವೆ.
₹14 ಲಕ್ಷ ಮೌಲ್ಯದ ಸಾಮಗ್ರಿಗಳು ವಶ
ಆರೋಪಿಗಳಿಂದ ₹14 ಲಕ್ಷ ಮೌಲ್ಯದ ವಿವಿಧ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಇಬ್ಬರ ವಿರುದ್ಧವೂ ಬನಶಂಕರಿ, ಜಯನಗರ, ಕುಮಾರಸ್ವಾಮಿ, ಜೆ.ಪಿ ನಗರ ಸೇರಿ 11 ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.