ADVERTISEMENT

ಡ್ರಗ್ಸ್ ಪ್ರಕರಣ: ಹೆಡ್ ಕಾನ್‌ಸ್ಟೆಬಲ್ ಪ್ರಭಾಕರ್ ಬಂಧನ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2020, 5:03 IST
Last Updated 20 ನವೆಂಬರ್ 2020, 5:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕಾಂಗ್ರೆಸ್ ಮುಖಂಡರೂ ಆದ ಮಾಜಿ ಸಚಿವ ಹಾವೇರಿಯ ರುದ್ರಪ್ಪ ಲಮಾಣಿ ಅವರ ಪುತ್ರ ದರ್ಶನ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ ಎನ್ನಲಾದ ಡ್ರಗ್ಸ್ ಪ್ರಕರಣದಲ್ಲಿ ಇದೀಗ ಹೆಡ್ ಕಾನ್‌ಸ್ಟೆಬಲ್ ಪ್ರಭಾಕರ್ ಅವರನ್ನು ಬಂಧಿಸಲಾಗಿದೆ.

ಡಾರ್ಕ್ ನೆಟ್ ಮೂಲಕ ಡ್ರಗ್ಸ್ ಖರೀದಿಸಿ ಅಂಚೆ ಮೂಲಕ ನಗರಕ್ಕೆ ತರಿಸಿ ಮಾರಾಟ ಮಾಡುತ್ತಿದ್ದ ಆರೋಪದಡಿ ಇತ್ತೀಚೆಗಷ್ಟೇ ಎಂ. ಸುಜಯ್ ಎಂಬುವರನ್ನು ಕೆಂಪೇಗೌಡ ನಗರ ಠಾಣೆ ಪೊಲೀಸರು ಬಂಧಿಸಿದ್ದರು. 500 ಗ್ರಾಂ ಹೈಡ್ರೊ ಗಾಂಜಾ ಜಪ್ತಿ ಮಾಡಿದ್ದರು.

ಈ ಡ್ರಗ್ಸ್ ಜಾಲದಲ್ಲಿದ್ದ ಹೇಮಂತ್ ಮುದ್ದಪ್ಪ, ಪ್ರಸಿದ್ ಶೆಟ್ಟಿ, ಸುನೀಷ್, ದರ್ಶನ್ ಲಮಾಣಿ ಹಾಗೂ ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅವರನ್ನೂ ಬಂಧಿಸಲಾಗಿತ್ತು.

ಈ ಡ್ರಗ್ಸ್ ಜಾಲದ ಜೊತೆ ಕೈ ಜೋಡಿಸಿ, ಪೊಲೀಸರ ತನಿಖಾ ಮಾಹಿತಿಯನ್ನು ಆರೋಪಿಗಳಿಗೆ ತಿಳಿಸುತ್ತಿದ್ದ ಆರೋಪ ಸದಾಶಿವನಗರ ಠಾಣೆ ಹೆಡ್ ಕಾನ್‌ಸ್ಟೆಬಲ್ ಮೇಲಿತ್ತು. ಹೀಗಾಗಿ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿತ್ತು.

ಇದೀಗ ಪ್ರಕರಣದ ತನಿಖೆಯನ್ನು ಸಿಸಿಬಿ ವಹಿಸಿಕೊಂಡಿದೆ. ಡ್ರಗ್ಸ್ ಮಾರಾಟಕ್ಕೆ ಸಹಕರಿಸಿದ್ದ ಹಾಗೂ ಆರೋಪಿಗಳಿಗೆ ತನಿಖಾ ಮಾಹಿತಿ ಸೋರಿಕೆ ಮಾಡುತ್ತಿದ್ದ ಆರೋಪದಡಿ ಪ್ರಭಾಕರ್ ಅವರನ್ನು ಸಿಸಿಬಿ ಶುಕ್ರವಾರ ಬಂಧಿಸಿದೆ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆಗಾಗಿ ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.