ADVERTISEMENT

ವೃದ್ಧನನ್ನು ಎಳೆದೊಯ್ದ ಪ್ರಕರಣ | ಭಯದಿಂದ ಎಳೆದೊಯ್ದೆ ಎಂದು ಆರೋಪಿ ತಪ್ಪೊಪ್ಪಿಗೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2023, 23:22 IST
Last Updated 18 ಜನವರಿ 2023, 23:22 IST
   

ಬೆಂಗಳೂರು: ‘ನಾನು ಮಾಡಿದ್ದು ಅಮಾನವೀಯ ಕೃತ್ಯ. ಸ್ಥಳದಲ್ಲಿದ್ದ ಜನರು ನನ್ನ ಮೇಲೆಯೇ ದಾಳಿಮಾಡುವ ಭಯದಿಂದ ಪರಾರಿಯಾಗಲು ಯತ್ನಿಸಿದೆ’ ಎಂದು ವಾಹನಕ್ಕೆ ಜೋತುಬಿದ್ದ ವೃದ್ಧ ಮುತ್ತಪ್ಪ ತೋಂಟಾಪುರ (71) ಅವರನ್ನು ರಸ್ತೆಯಲ್ಲೇ ಎಳೆದೊಯ್ದು ಕೊಲೆಗೆ ಯತ್ನಿಸಿದ್ದ ಆರೋಪಿ ಸಾಹಿಲ್‌ ಪೊಲೀಸರ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ’ ಎಂದು ಮೂಲಗಳು ಹೇಳಿವೆ.

ವಿಜಯನಗರದ ಹೊಸಹಳ್ಳಿ ಮೆಟ್ರೊ ನಿಲ್ದಾಣ ಬಳಿ ಮಂಗಳವಾರ ಈ ಘಟನೆ ನಡೆದಿತ್ತು.

‘ಮುತ್ತಪ್ಪ ಅವರು ಬೈಕ್‌ ಬ್ಯಾಕ್‌ ರೆಸ್ಟ್‌ (ಹಿಂಬದಿಯ ಹಿಡಿಕೆ) ಹಿಡಿದಿಕೊಂಡಿದ್ದು ಆರಂಭದಲ್ಲಿ ತಿಳಿಯಲಿಲ್ಲ. ಬೊಲೆರೊ ಪಿಕ್‌ಅಪ್‌ ವಾಹನಕ್ಕೆ ಡಿಕ್ಕಿಯಾದ ಮೇಲೆ ವಯಸ್ಕರಾದ ಮುತ್ತಪ್ಪ ಕಿರುಚಿದರು. ನನ್ನನ್ನು ತಡೆದು ನಿಲ್ಲಿಸಲು ಮುಂದಾದರು. ಈ ಘಟನೆಯಿಂದ ಕೆಲಕ್ಷಣ ವಿಚಲಿತನಾಗಿ ಪರಾರಿಯಾಗಲು ಯತ್ನಿಸಿದೆ’ ಎಂದು ವಿಚಾರಣೆ ವೇಳೆ ಹೇಳಿದ್ದಾನೆ.

ADVERTISEMENT

‘ಬೈಕ್‌ ಮುಂದೆ ಕಾರೊಂದು ಚಲಿಸುತ್ತಿದ್ದರಿಂದ ಜೀಪನ್ನು ಗಮನಿಸಲಿಲ್ಲ. ಕಾರು ಚಾಲಕ ದಿಢೀರ್‌ ಬಲಕ್ಕೆ ತಿರುವು ಪಡೆದು ವೇಗವಾಗಿ ಚಲಾಯಿಸಿದ. ಆಗ ಈ ಘಟನೆ ನಡೆಯಿತು. ಜನರು ದಾಳಿ ಮಾಡಬಹುದೆಂದು ಹೆದರಿ ವೇಗವಾಗಿ ಬೈಕ್‌ ಅನ್ನು ಚಲಾಯಿಸಿದೆ’ ಎಂದು ತಿಳಿಸಿದ್ದಾನೆ.

‘ಆರೋಪಿಯ ವಿರುದ್ಧ ಈ ಹಿಂದೆ ಯಾವುದೇ ಪ್ರಕರಣಗಳು ಇರಲಿಲ್ಲ. ಈಗ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಆರೋಪಿಯನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಜ.31ರ ತನಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.