ADVERTISEMENT

ಕೋವಿಡ್‌ ಹೆಚ್ಚಳ: ಬೆಂಗಳೂರಿನಲ್ಲಿ 10 ಲಕ್ಷ ದಾಟಿದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 13 ಮೇ 2021, 21:33 IST
Last Updated 13 ಮೇ 2021, 21:33 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ನಗರದಲ್ಲಿ ಕೆಲ ದಿನಗಳಿಂದ ಕೋವಿಡ್ ಪ್ರಕರಣಗಳ ಸಂಖ್ಯೆ ಏರುಗತಿ ಪಡೆದುಕೊಂಡಿದ್ದು, ಈ ತಿಂಗಳು 13 ದಿನಗಳಲ್ಲಿಯೇ 2.58 ಲಕ್ಷ ಮಂದಿ ಸೋಂಕಿತರಾಗಿರುವುದು ದೃಢಪಟ್ಟಿದೆ. ಇದರಿಂದಾಗಿ ಈವರೆಗೆ ಸೋಂಕಿತರಾದವರ ಒಟ್ಟು ಸಂಖ್ಯೆ 10 ಲಕ್ಷದ ಗಡಿ ದಾಟಿದೆ.

ಕಳೆದ ವರ್ಷ ಮಾ.8ರಂದು ವಿದೇಶದಿಂದ ನಗರಕ್ಕೆ ಮರಳಿದ್ದ 40 ವರ್ಷದ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರು ಕೋವಿಡ್‌ ಪೀಡಿತರಾಗಿದ್ದರು. ಇದು ನಗರದಲ್ಲಿ ವರದಿಯಾದ ಪ್ರಥಮ ಕೋವಿಡ್‌ ಪ್ರಕರಣವಾಗಿತ್ತು. ಸೋಂಕಿತರ ಸಂಖ್ಯೆ 1 ಲಕ್ಷದ ಗಡಿ ದಾಟಲು ಐದೂವರೆ ತಿಂಗಳು ಬೇಕಾಗಿದ್ದವು. ತದನಂತರ ಪ್ರಕರಣಗಳ ಸಂಖ್ಯೆ ಏರುಗತಿ ‍ಪಡೆದ ಕಾರಣ ಒಂದು ತಿಂಗಳ ಅವಧಿಯಲ್ಲಿ ಮತ್ತೊಂದು ಲಕ್ಷ ಮಂದಿ ಸೋಂಕಿತರಾಗಿದ್ದರು.

ಅಕ್ಟೋಬರ ಬಳಿಕ ಸೋಂಕಿತರ ಸಂಖ್ಯೆ ಇಳಿಕೆಯಾಗಿತ್ತು. ಈ ವರ್ಷ ಫೆಬ್ರವರಿಯಲ್ಲಿ ಕೆಲ ದಿನಗಳು ಹೊಸ ಪ್ರಕರಣ 200ರ ಗಡಿಯ ಆಸುಪಾಸಿನಲ್ಲಿದ್ದವು. ಆದರೆ, ಮಾರ್ಚ್‌ ಬಳಿಕ ಏರುಗತಿ ಪಡೆದುಕೊಂಡಿತು. ಕೆಲ ದಿನಗಳು 24 ಗಂಟೆಗಳ ಅವಧಿಯಲ್ಲಿ 20 ಸಾವಿರಕ್ಕೂ ಅಧಿಕ ಪ್ರಕಣಗಳು ವರದಿಯಾಗಿವೆ. ಈ ವರ್ಷ ನಾಲ್ಕುವರೆ ತಿಂಗಳಲ್ಲಿಯೇ 6.26 ಲಕ್ಷ ಮಂದಿ ಸೋಂಕಿತರಾಗಿದ್ದಾರೆ. ಇದರಿಂದಾಗಿ ಮೊದಲ ಪ್ರಕರಣ ವರದಿಯಾಗಿ ಒಂದು ವರ್ಷದ ಎರಡು ತಿಂಗಳು ಕಳೆಯುವ ಮುನ್ನವೆ ಒಟ್ಟು ಸೋಂಕಿತರಾದವರ ಸಂಖ್ಯೆ 10 ಲಕ್ಷ ದಾಟಿದೆ.

ADVERTISEMENT

ನಗರದಲ್ಲಿ ಗುರುವಾರ 15,191 ಕೋವಿಡ್‌ ಪ್ರಕರಣಗಳು ದೃಢಪಟ್ಟಿವೆ. ಕಳೆದೊಂದು ವಾರದಿಂದ ಪ್ರತಿನಿತ್ಯ ಸರಾಸರಿ 15 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿವೆ. ಇದರಿಂದಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆ 3.59 ಲಕ್ಷಕ್ಕೆ ಏರಿಕೆಯಾಗಿದೆ. ಕೋವಿಡ್‌ಗೆ ಸಾವಿಗೀಡಾಗುವವರ ಸಂಖ್ಯೆ ಕೂಡ ಹೆಚ್ಚಳ ಕಂಡಿದೆ. ಮತ್ತೆ 161 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. ಈವರೆಗೆ ಕೊರೊನಾ ಸೋಂಕಿಗೆ ಸಾವಿಗೀಡಾದವರ ಸಂಖ್ಯೆ 9,125ಕ್ಕೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.