ADVERTISEMENT

ಪ್ರವಾಸೋದ್ಯಮ: ದ್ವಂದ್ವದಿಂದ ಹೊರಬನ್ನಿ

ನೂತನ ನೀತಿ ರಚನೆಗಾಗಿ ಎರಡು ದಿನಗಳ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2019, 20:28 IST
Last Updated 18 ಡಿಸೆಂಬರ್ 2019, 20:28 IST
ಪ್ರವಾಸೋದ್ಯಮ ಕಾರ್ಯಪಡೆಯ ಅಧ್ಯಕ್ಷೆ ಸುಧಾಮೂರ್ತಿ ಅವರು ಭಾಷಣ ಮಾಡಲು ತೆರಳುತ್ತಿದ್ದಂತೆಯೇ ಕಂದಾಯ ಸಚಿವ ಆರ್‌.ಅಶೋಕ್‌ ಅವರತ್ತ ನೋಡಿದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದ್ದರು. ಪ್ರಜಾವಾಣಿ ಚಿತ್ರ
ಪ್ರವಾಸೋದ್ಯಮ ಕಾರ್ಯಪಡೆಯ ಅಧ್ಯಕ್ಷೆ ಸುಧಾಮೂರ್ತಿ ಅವರು ಭಾಷಣ ಮಾಡಲು ತೆರಳುತ್ತಿದ್ದಂತೆಯೇ ಕಂದಾಯ ಸಚಿವ ಆರ್‌.ಅಶೋಕ್‌ ಅವರತ್ತ ನೋಡಿದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದ್ದರು. ಪ್ರಜಾವಾಣಿ ಚಿತ್ರ   

ಬೆಂಗಳೂರು: ಪ್ರವಾಸೋದ್ಯಮ ಅಭಿವೃದ್ಧಿ ಎಂಬುದು ಜನರ, ಸರ್ಕಾರದ ಆಶಯ. ಆದರೆ ದ್ವಂದ್ವ ನಿಲುವು ಇಟ್ಟುಕೊಂಡರೆ ಅದರ ಪ್ರಗತಿಯಾಗಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ಬುಧವಾರ ಇಲ್ಲಿ ವ್ಯಕ್ತವಾಯಿತು.

ಕರ್ನಾಟಕ ಪ್ರವಾಸೋದ್ಯಮನೀತಿ 2020–25 ರಚನೆಗೆ ಸಂಬಂಧಿಸಿದಂತೆ ಲಲಿತ್ ಅಶೋಕ್‌ ಹೋಟೆಲ್‌ನಲ್ಲಿ ಆರಂಭವಾದ ಎರಡು ದಿನಗಳ ಕಾರ್ಯಾಗಾರದಲ್ಲಿಗುಂಪು ಚರ್ಚೆ ವೇಳೆ ನಗರದ ಖ್ಯಾತ ವಾಸ್ತುವಿನ್ಯಾಸಗಾರ ನರೇಶ್‌ ವಿ.ನರಸಿಂಹನ್‌ ಅವರು ತಮ್ಮ ಅನುಭವವನ್ನೇ ಹೇಳಿಕೊಂಡು ಸರ್ಕಾರದ ದ್ವಂದ್ವ ನಿಲುವನ್ನು ಟೀಕಿಸಿದರು.

‘ನಗರದ ಚರ್ಚ್‌ ಸ್ಟ್ರೀಟ್‌ ಕಾಲ್ನಡಿಗೆಯವರ ವಿಶಿಷ್ಟ ತಾಣವನ್ನಾಗಿ ಮಾಡುವ ಯೋಜನೆಯೊಂದಿಗೆ
ವಿಶಿಷ್ಟವಾಗಿ ಅದನ್ನು ಅಭಿವೃದ್ಧಿಪಡಿಸಲಾಗಿದೆ. ಆ ಭಾಗದಲ್ಲಿ ವ್ಯವಹಾರ ಭಾರಿ ಪ್ರಮಾಣದಲ್ಲಿ ಆಗಬೇಕು. ದಿನದ 24 ಗಂಟೆಯೂ ಚರ್ಚ್‌ ಸ್ಟ್ರೀಟ್‌ತೆರೆದೇ ಇರಬೇಕು ಎಂಬ ಪರಿಕಲ್ಪನೆನಮ್ಮದಾಗಿತ್ತು. ಆದರೆ ರಾತ್ರಿ ನಿರ್ದಿಷ್ಟ ಸಮಯದ ಬಳಿಕ ಮದ್ಯ ಮಾರಾಟಕ್ಕೆ ನಿಷೇಧ ವಿಧಿಸಲಾಗಿದೆ. ಹೀಗಿದ್ದಾಗ ಒಂದು ವಿಶಿಷ್ಟ ಯೋಜನೆಯೇ ವ್ಯರ್ಥವಾದಂತೆ. ರಾಜ್ಯದೆಲ್ಲೆಡೆ ಇಂತಹದ್ವಂದ್ವದಿಂದ ಹೊರಬರದ ಹೊರತು ಪ್ರವಾಸೋದ್ಯಮ ಅಭಿವೃದ್ಧಿಗೆವೇಗ ಸಿಗಲಾರದು’ ಎಂದರು.

ADVERTISEMENT

ನೆರವಿನ ಭರವಸೆ: ಕಾರ್ಯಾಗಾರ ಉದ್ಘಾಟಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಿದ್ದು, ಅದಕ್ಕಾಗಿಯೇ ಅಧಿಕಾರಕ್ಕೆ ಬಂದ
ತಕ್ಷಣ ಕಾರ್ಯಪಡೆ ರಚಿಸಲಾಗಿದೆ ಎಂದರು.

ಪ್ರವಾಸೋದ್ಯಮ ಅಭಿವೃದ್ಧಿಯ 144 ಕಾಮಗಾರಿಗಳಿಗೆ ₹105 ಕೋಟಿ ಬಿಡುಗಡೆ ಮಾಡಲಾಗಿದ್ದು, ₹149 ಕೋಟಿಯ 33 ನೂತನಯೋಜನೆಗಳಿಗೆ ಅನುಮತಿ ನೀಡಲಾಗಿದೆ ಎಂದರು.

ಪ್ರವಾಸೋದ್ಯಮ ಕಾರ್ಯಪಡೆಯ ಅಧ್ಯಕ್ಷೆ ಸುಧಾಮೂರ್ತಿ, ಕಾರ್ಯಾಗಾರದಲ್ಲಿ ವ್ಯಕ್ತವಾಗುವ ಎಲ್ಲ ಅಭಿಪ್ರಾಯಗಳನ್ನು ನೂತನ ನೀತಿಯಲ್ಲಿಅಳವಡಿಸಿಕೊಳ್ಳಲಾಗುವುದು ಎಂದು ಹೇಳಿದರು.

ಪ್ರವಾಸೋದ್ಯಮ ಕ್ಷೇತ್ರದಲ್ಲಿ ವಿವಿಧ ಬಗೆಯಲ್ಲಿ ತೊಡಗಿಸಿಕೊಂಡಿರುವ ತಜ್ಞರು ಪಾಲ್ಗೊಂಡಿದ್ದಾರೆ.

ಪೆಂಗ್ವಿನ್‌ಗಾಗಿ ತಾರಾ ಹೋಟೆಲ್‌!

‘ಆಸ್ಟ್ರೇಲಿಯಾದ ಸಿಡ್ನಿಗೆ ನಾನು ಪ್ರವಾಸ ಹೋಗಿದ್ದೆ. ಅಲ್ಲಿ ಪೆಂಗ್ವಿನ್‌ ನೋಡಲು 10 ಗಂಟೆಯ ಪ್ರಯಾಣ ಏರ್ಪಡಿಸಿದ್ದರು. ಕೆಲವೇ ನಿಮಿಷಗಳ ಪೆಂಗ್ವಿನ್‌ಗಳನ್ನು ನೋಡುವ ಸ್ಥಳದಲ್ಲಿ ತಾರಾ ಹೋಟೆಲ್‌ಗಳು, ಮಾಲ್‌ಗಳನ್ನು ನಿರ್ಮಿಸಿದ್ದಾರೆ. ಹಕ್ಕಿಯನ್ನು ನೋಡುವ ಸ್ಥಳದಲ್ಲಿ ಪ್ರವಾಸೋದ್ಯಮ ಅವಕಾಶ ಹೇಗೆ ಅಭಿವೃದ್ಧಿಯಾಯಿತು ನೋಡಿ. ನಮ್ಮಲ್ಲಿ ಆನೆ, ಹುಲಿಯಂತಹ ದೊಡ್ಡ ಪ್ರಾಣಿಗಳವಾಸಸ್ಥಾನವೇ ಇದೆ, ನಾವು ಅದನ್ನು ಹೇಗೆ ಅಭಿವೃದ್ಧಿ ಮಾಡಬಹುದು ಎಂಬುದನ್ನು ಚಿಂತಿಸಿ’ ಎಂದು ಕಂದಾಯ
ಸಚಿವ ಆರ್‌.ಅಶೋಕ ತಮ್ಮ ಅನುಭವ ಬಿಚ್ಚಿಟ್ಟರು.

ನಿಮ್ಮ ಕೊಡುಗೆ ಏನು ಹೇಳಿ?

‘ಬೇಲೂರು, ಹಳೇಬೀಡು, ಹಂಪಿ, ಬಾದಾಮಿ,ಶ್ರವಣಬೆಳಗೊಳ... ಎಲ್ಲವೂ ನೂರಾರು ವರ್ಷಗಳ ಹಿಂದಿನ ಪ್ರವಾಸಿ ತಾಣಗಳು. ಸ್ವಾತಂತ್ರ್ಯ ಬಂದ ನಂತರ ನೀವು ನಿರ್ಮಿಸಿದಂತಹ ಅತಿ ವಿಶಿಷ್ಟವಾದ ಒಂದು ಪ್ರವಾಸಿ ಆಕರ್ಷಣೆಯನ್ನಾದರೂ ಹೆಸರಿಸಿ ನೋಡೋಣ ಎಂದು ಹಿರಿಯ ಪತ್ರಕರ್ತರೊಬ್ಬರು ಹೇಳಿದ ಮಾತು ನಿಜಕ್ಕೂ ಚಿಂತನೆಗೆ ಯೋಗ್ಯವಾದುದು. ಇಷ್ಟು ವಿಶಾಲ ಕರಾವಳಿ, ಕಾಡು, ಪರಿಸರ ಸಂಪತ್ತನ್ನು ಹೊಂದಿರುವ ನಾವು ಅದ್ಭುತಗಳನ್ನೇ ನಿರ್ಮಿಸಬಹುದಿತ್ತು. ಅದು ಸಾಧ್ಯವಾಗಿಲ್ಲ, ಇನ್ನು ಮುಂದೆ ಇಂತಹ ವಿಚಾರಗಳತ್ತ ಗಮನ ಹರಿಸಲೇಬೇಕಾಗಿದೆ’ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.