ADVERTISEMENT

ಉದ್ದಿಮೆ ಪರವಾನಗಿ ವಿತರಣೆ ವಿಳಂಬ: ಬಿಬಿಎಂಪಿ ಪೂರ್ವ ವಲಯದಲ್ಲಿ ಅತಿಹೆಚ್ಚು ನಿಧಾನ

ಆರ್. ಮಂಜುನಾಥ್
Published 2 ಮೇ 2025, 23:49 IST
Last Updated 2 ಮೇ 2025, 23:49 IST
   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಹೊಸದಾಗಿ ವ್ಯಾಪಾರ ಆರಂಭಿಸುವ ಸಂಸ್ಥೆ ಅಥವಾ ವ್ಯಕ್ತಿಗಳಿಗೆ ಉದ್ದಿಮೆ ಪರವಾನಗಿ (ಟ್ರೇಡ್‌ ಲೈಸೆನ್ಸ್‌) ವಿತರಣೆಯಲ್ಲಿ ವಿಳಂಬವಾಗುತ್ತಿದೆ. ಹಲವು ಅರ್ಜಿಗಳು ನಾಲ್ಕೈದು ತಿಂಗಳಾದರೂ ವಿಲೇವಾರಿಯಾಗಿಲ್ಲ.

ಉದ್ಯಮ ಪ್ರಾರಂಭಿಸಲು ವ್ಯಾಪಾರ ಪರವಾನಗಿಗೆ ‘ಸಕಾಲ’ ಕಾಯ್ದೆಯಡಿ ಅರ್ಜಿಗಳನ್ನು ಸಲ್ಲಿಸಲಾಗುತ್ತಿದ್ದರೂ, ಕೆಲವು ಆರೋಗ್ಯ ವೈದ್ಯಾಧಿಕಾರಿಗಳೂ ತಮ್ಮ ಲಾಗಿನ್‌ನಲ್ಲೇ ಅರ್ಜಿಗಳನ್ನು ತಡೆಹಿಡಿದಿಟ್ಟುಕೊಂಡಿದ್ದಾರೆ. ಡಿಸೆಂಬರ್‌ನಲ್ಲಿ ಸಲ್ಲಿಸಲಾಗಿರುವ ಅರ್ಜಿಗಳ ವಿಲೇವಾರಿ ಇನ್ನೂ ಆಗಿಲ್ಲ.

ಹೊಸ ವ್ಯಾಪಾರ ಪರವಾನಗಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಇದಾದ ಮೇಲೆ, ಎಲ್ಲ ದಾಖಲೆಗಳನ್ನು ಆರೋಗ್ಯ ವಿಭಾಗದ ಅಧಿಕಾರಿಗಳಿಗೆ ಖುದ್ದಾಗಿ ಸಲ್ಲಿಸಲು ಸೂಚಿಸಲಾಗುತ್ತದೆ. ಅವುಗಳನ್ನು ಪರಿಶೀಲಿಸಿದ ಬಳಿಕ ಸ್ಥಳ ಪರಿಶೀಲನೆ ನಡೆಸುತ್ತಾರೆ. ಎಲ್ಲವೂ ನಿಯಮಬದ್ಧವಾಗಿದ್ದರೆ ಪರವಾನಗಿಯನ್ನು ವಿತರಿಸಲಾಗುತ್ತದೆ. ಸಕಾಲ ನಿಯಮಗಳ ಪ್ರಕಾರ ಈ ಎಲ್ಲ ಪ್ರಕ್ರಿಯೆಯನ್ನು 10ರಿಂದ 30ದಿನದೊಳಗೆ ಪೂರ್ಣಗೊಳಿಸಬೇಕು. ಆದರೆ, ಕೆಲವು ಆರೋಗ್ಯ ವೈದ್ಯಾಧಿಕಾರಿಗಳು ಅರ್ಜಿಗಳನ್ನು ತಡೆಹಿಡಿಯುತ್ತಿದ್ದಾರೆ ಎಂದು ದೂರಲಾಗುತ್ತಿದೆ.

ADVERTISEMENT

ಡಿಸೆಂಬರ್‌ನಿಂದ ಮಾರ್ಚ್‌ನಲ್ಲಿ ಸಲ್ಲಿಸಲಾಗಿದ್ದ ಅರ್ಹ ಅರ್ಜಿಗಳಿಗೆ ಏಪ್ರಿಲ್‌ 1ರೊಳಗೇ ವ್ಯಾಪಾರ ಪರವಾನಗಿಯನ್ನು ನೀಡಿದ್ದರೆ, ಏಪ್ರಿಲ್‌ 1ರಿಂದ ಪರವಾನಗಿ ನವೀಕರಣದ ಶುಲ್ಕವನ್ನು ಪಾವತಿಸಬೇಕಾಗಿತ್ತು. ಇದಕ್ಕೆ ಅವಕಾಶವಿಲ್ಲದಂತೆ ಹೊಸ ಅರ್ಜಿಗಳನ್ನು ತಡೆಹಿಡಿದಿರುವುದರಿಂದ ಪಾಲಿಕೆಗೆ ಆರ್ಥಿಕವಾಗಿ ನಷ್ಟವಾಗಿದೆ ಎನ್ನುತ್ತವೆ ಮೂಲಗಳು.

‘ಜನವರಿಯಲ್ಲಿ ಉದ್ದಿಮೆ ಪರವಾನಗಿಗಾಗಿ ಅರ್ಜಿ ಸಲ್ಲಿಸಿದ್ದೇನೆ. ಆದರೆ, ಈವರೆಗೂ ಸುಮ್ಮನೆ ಅಲೆದಾಡಿಸಲಾಗುತ್ತಿದೆ. ಅಗತ್ಯವಿಲ್ಲದ ದಾಖಲೆಗಳನ್ನು ಕೇಳುತ್ತಿದ್ದಾರೆ. ಅವರಿಗೆ ‘ಅಗತ್ಯವಾದದನ್ನು’ ನೀಡಿದವರಿಗೆ ಪರವಾನಗಿ ಬೇಗ ಸಿಗುತ್ತಿದೆ. ವಿಳಂಬದಿಂದ ನಮ್ಮ ವ್ಯಾಪಾರ ಆರಂಭಕ್ಕೆ ತೊಡಕಾಗುತ್ತಿದೆ. ಇತರೆ ಪ್ರಕ್ರಿಯೆಗಳನ್ನು ಆರಂಭಿಸಲು ಸಾಧ್ಯವಾಗುತ್ತಿಲ್ಲ’ ಎಂದು ನವ ಉದ್ಯಮಿಯೊಬ್ಬರು ಅಳಲು ತೋಡಿಕೊಂಡರು.

‘ಉದ್ದಿಮೆ ಪರವಾನಗಿ ವಿತರಣೆ ಪೂರ್ವ ವಲಯದಲ್ಲಿ ಅತಿಹೆಚ್ಚು ನಿಧಾನಗತಿಯಲ್ಲಿದೆ. ಸರ್ವಜ್ಞನಗರ, ಸಿ.ವಿ. ರಾಮನ್‌ ನಗರ ವಿಭಾಗದಲ್ಲೇ ತಲಾ 50ಕ್ಕೂ ಹೆಚ್ಚು ಅರ್ಜಿಗಳು ಬಾಕಿ ಉಳಿದಿವೆ’ ಎಂದರು.

‘ಡಿಸೆಂಬರ್‌ನಿಂದ ಮಾರ್ಚ್‌ವರೆಗೆ ಉದ್ದಿಮೆ ಪರವಾನಗಿಗಾಗಿ ಸಲ್ಲಿಸಲಾಗಿದ್ದ ಅರ್ಜಿಗಳಿಗೆ ಆಗಲೇ ಪರವಾನಗಿ ಮಂಜೂರು ಮಾಡಿದ್ದರೆ,  2025ರ ಏಪ್ರಿಲ್‌ನಿಂದ ಅವುಗಳ ನವೀಕರಣ ಮಾಡಬೇಕಾಗಿತ್ತು. ಆದರೆ ಆರೋಗ್ಯ ವಿಭಾಗದ ವೈದ್ಯಾಧಿಕಾರಿಗಳು ಹಣದ ಆಮಿಷಕ್ಕಾಗಿ ಹೊಸ ಪರವಾನಗಿ ಅರ್ಜಿಗಳನ್ನು ವಿಲೇವಾರಿ ಮಾಡದೆ ಅವರ ಲಾಗಿನ್‌ನಲ್ಲೇ ಉಳಿಸಿಕೊಂಡು ಪಾಲಿಕೆಗೆ ಆರ್ಥಿಕ ನಷ್ಟ ಉಂಟು ಮಾಡಿದ್ದಾರೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಬಿಬಿಎಂಪಿಯ ಅಧಿಕಾರಿಗಳು ಮಾಹಿತಿ ನೀಡಿದರು.

ಹೆಚ್ಚು ಬಾಕಿ ಇಲ್ಲ: ಸಿಎಚ್‌ಒ

‘ಉದ್ದಿಮೆ ಪರವಾನಗಿ ಅರ್ಜಿಗಳನ್ನು ಹೆಚ್ಚು ಸಮಯ ಉಳಿಸಿಕೊಳ್ಳುವುದಿಲ್ಲ. ಸಕಾಲದಲ್ಲಿ ಅರ್ಜಿಗಳು ಬರುವುದರಿಂದ ವಿಳಂಬ ಸಾಧ್ಯವಿಲ್ಲ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಶುಕ್ರವಾರದ ವೇಳೆಗೆ 24 ಅರ್ಜಿಗಳು ಮಾತ್ರ ಬಾಕಿ ಉಳಿದಿವೆ. ಯಾವುದಾದರೂ ಅರ್ಜಿ ಹೆಚ್ಚು ವಿಳಂಬವಾಗಿದ್ದರೆ ದೂರು ನೀಡಬಹುದು’ ಎಂದು ಮುಖ್ಯ ಆರೋಗ್ಯಾಧಿಕಾರಿ ಡಾ. ಸೈಯದ್ ಸಿರಾಜುದ್ದಿನ್ ಮದನಿ ತಿಳಿಸಿದರು.

‘ಉದ್ದಿಮೆ ಪರವಾನಗಿಯನ್ನು ಒಂದೇ ದಿನದಲ್ಲಿ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದಕ್ಕಾಗಿ ಹೊಸ ತಂತ್ರಾಂಶವನ್ನು ರೂಪಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿಯೊಂದಿಗೆ ಎಲ್ಲ ದಾಖಲೆಗಳನ್ನು ಸಲ್ಲಿಸಿದರೆ ‘ತಾತ್ಕಾಲಿಕ ಉದ್ದಿಮೆ ಪರವಾನಗಿ’ಯನ್ನು ಅಂದೇ ನೀಡುವ ವ್ಯವಸ್ಥೆ ಜಾರಿಗೆ

ಬರಲಿದೆ. ಇದಕ್ಕೆ ಸಂಬಂಧಿಸಿದ ಕಡತವನ್ನು ಮುಖ್ಯ ಆಯುಕ್ತರ ಅನುಮೋದನೆಗೆ ಸಲ್ಲಿಸಲಾಗಿದ್ದು, ಸಮ್ಮತಿ ದೊರೆತ ಕೂಡಲೇ

ಅನುಷ್ಠಾನ ಮಾಡಲಾಗುತ್ತದೆ’ ಎಂದು ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.