ADVERTISEMENT

ಬೆಂಗಳೂರು: 368 ಮರಗಳಿಗೆ ‘ವೃಕ್ಷ ರಕ್ಷಾ ಬಂಧನ’

‘ಪರಿಸರಕ್ಕಾಗಿ ನಾವು’ ಸಂಘಟನೆ ಸದಸ್ಯರಿಂದ ಮರಗಳ ರಕ್ಷಣೆಗೆ ಪಣ

​ಪ್ರಜಾವಾಣಿ ವಾರ್ತೆ
Published 5 ಜೂನ್ 2025, 23:00 IST
Last Updated 5 ಜೂನ್ 2025, 23:00 IST
‘ಪರಿಸರಕ್ಕಾಗಿ ನಾವು’ ಸಂಘಟನೆ ವತಿಯಿಂದ ಕಂಟೋನ್ಮೆಂಟ್‌ ರೈಲ್ವೆ ಕಾಲೊನಿಯಲ್ಲಿರುವ ಮರಕ್ಕೆ ‘ವೃಕ್ಷ ರಕ್ಷಾ ಬಂಧನ’ ಕಟ್ಟಲಾಯಿತು
‘ಪರಿಸರಕ್ಕಾಗಿ ನಾವು’ ಸಂಘಟನೆ ವತಿಯಿಂದ ಕಂಟೋನ್ಮೆಂಟ್‌ ರೈಲ್ವೆ ಕಾಲೊನಿಯಲ್ಲಿರುವ ಮರಕ್ಕೆ ‘ವೃಕ್ಷ ರಕ್ಷಾ ಬಂಧನ’ ಕಟ್ಟಲಾಯಿತು   

ಬೆಂಗಳೂರು: ಕಂಟೋನ್ಮೆಂಟ್‌ ರೈಲ್ವೆ ಕಾಲೊನಿಯಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ 368 ಮರಗಳನ್ನು ಕಡಿಯುವುದನ್ನು ವಿರೋಧಿಸಿ ಪರಿಸರ ಕಾರ್ಯಕರ್ತರು, ಮರಗಳಿಗೆ ‘ವೃಕ್ಷ ರಕ್ಷಾ ಬಂಧನ’ವಾಗಿ ಕೆಂಪು ಪಟ್ಟಿಯನ್ನು ಕಟ್ಟಿದರು.

ವಿಶ್ವ ಪರಿಸರ ದಿನದ ಅಂಗವಾಗಿ ‘ಪರಿಸರಕ್ಕಾಗಿ ನಾವು’ ಸಂಘಟನೆ ಆಯೋಜಿಸಿದ್ದ ‘ವೃಕ್ಷ ರಕ್ಷಾ ಬಂಧನ‘ ಕಾರ್ಯಕ್ರಮದಲ್ಲಿ 368 ಮರಗಳಿಗೆ ರಕ್ಷೆಯ ಪಟ್ಟಿ ಕಟ್ಟಿ, ಸಹಿ ಮಾಡಿ, ಅವುಗಳನ್ನು ಸಂರಕ್ಷಿಸಲು ಆಗ್ರಹಿಸಿದರು. 

ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಮಾತನಾಡಿ, ‘ಹಿಂದಿನ ದಿನಗಳಲ್ಲಿ ಯಾವುದೇ ಮನೆಗಳಲ್ಲಿ ಫ್ಯಾನ್‌ ಇರುತ್ತಿರಲಿಲ್ಲ. ಇಂದು ಶೌಚಾಲಯದಲ್ಲೂ ಎ.ಸಿ. ಅಳವಡಿಸಿಕೊಳ್ಳುತ್ತಿದ್ದಾರೆ. ನಗರದಲ್ಲಿದ್ದ ಕೆರೆಗಳನ್ನು ಹಾಳು ಮಾಡಿದ್ದರಿಂದ ಪರಿಸರ ಹಾಳಾಗಿದೆ. ಅಧಿಕಾರದಲ್ಲಿ ಇರುವವರೇ ರಾಜಕಾಲುವೆಗಳ ಒತ್ತುವರಿ ಮಾಡಲು ಬಿಟ್ಟಿದ್ದಾರೆ’ ಎಂದರು.

ADVERTISEMENT

‘ಪರಿಸರವನ್ನು ರಕ್ಷಿಸಬೇಕಾದ ಕೆಲಸ ಶಾಲಾ–ಕಾಲೇಜಿನಿಂದ ಆರಂಭವಾಗಬೇಕು. ಮಕ್ಕಳಿಗೆ ಪೋಷಕರು, ಶಿಕ್ಷಕರು ಪರಿಸರ ಬಗ್ಗೆ ಹೇಳಿಕೊಡಬೇಕು. ಮರಗಳನ್ನು ಉಳಿಸಬೇಕು’ ಎಂದು ಹೇಳಿದರು.

ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಮಾತನಾಡಿ, ‘ಸಾರ್ವಜನಿಕ ಸ್ವತ್ತನ್ನು ರಕ್ಷಿಸಬೇಕಾದ್ದು ಸರ್ಕಾರದ ಇಲಾಖೆಗಳ ಕರ್ತವ್ಯ. ಪಾರಂಪರಿಕವಾದ 368 ಮರಗಳನ್ನು ಕಡಿದು, ಆ ಭೂಮಿಯನ್ನು ಖಾಸಗಿ ಸಂಸ್ಥೆಗೆ ನೀಡುತ್ತಿರುವುದು ಸುಪ್ರೀಂ ಕೋರ್ಟ್‌ ಆದೇಶಗಳು ಹಾಗೂ ಸಂವಿಧಾನದ ಆಶಯಕ್ಕೆ ವಿರುದ್ಧವಾದುದು. ಭೂಮಿ ನೀಡಬೇಕಾದರೆ ಕಾನೂನಿಗೆ ತಿದ್ದುಪಡಿಯಾಗಬೇಕು. ಯಾವುದೇ ಮಂತ್ರಿ ಅಥವಾ ಉದ್ಯಮಿ ಹೇಳುತ್ತಾರೆ ಎಂದು ಮರಗಳನ್ನು ಕಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಅನುಮತಿ ನೀಡಬಾರದು. ಒಂದು ಮರವನ್ನು ಕಡಿಯಲೂ ನಾವು ಬಿಡುವುದಿಲ್ಲ’ ಎಂದರು. 

ಸಾಮಾಜಿಕ ಹೋರಾಟಗಾರ ಎಸ್‌.ಆರ್.ಹಿರೇಮಠ, ‘ಸಂಸ್ಕೃತಿ, ಸಮಾಜ ಮತ್ತು ಪ್ರಕೃತಿ ನಡುವೆ ಸುಮಧುರ ಸಂಬಂಧವಿರುವ ಅಭಿವೃದ್ಧಿ ನೀತಿಯಿಂದ ಪರಿಸರ ಉಳಿಸಲು ಸಾಧ್ಯವಿದೆ. ಇದಕ್ಕೆ ನೈತಿಕ ನೆಲೆಗಟ್ಟಿನ ಅಗತ್ಯವಿದೆ’ ಎಂದರು.

‘ಆಡಳಿತ ನಡೆಸುವವರು ದುಡ್ಡಿನ ದುರಾಸೆಯಿಂದ 368 ಮರಗಳನ್ನು ಕೊಲೆ ಮಾಡಲು ಹೊರಟಿದ್ದಾರೆ. ವಿಶ್ವ ಪರಿಸರ ದಿನಾಚರಣೆ ಇಂದು ಸಂಕಟದ ದಿನವಾಗಿದೆ. ತಾಪಮಾನ ಹೆಚ್ಚಾಗಿ, ಭೂಮಿ ಬಿಸಿಯಾಗಿದ್ದು, ಬರ, ನೆರೆ, ಭೂಕಂಪಗಳು ಹೆಚ್ಚಾಗುತ್ತಿವೆ. ಮೇ ತಿಂಗಳಲ್ಲಿ ದೊಡ್ಡ ಮಳೆಯ ನಿರೀಕ್ಷೆ ಯಾರಿಗೂ ಇರಲಿಲ್ಲ. ಹವಾಮಾನ ವೈಪರೀತ್ಯದಿಂದ ಹೀಗೆಲ್ಲ ಆಗುತ್ತಿದೆ. ಪರಿಸರವನ್ನು ಉಳಿಸಿಕೊಂಡು, ಸಂರಕ್ಷಿಸಿದರೆ ಮುಂದಿನ ಪೀಳಿಗೆಗೆ ಹಸಿರಿನ ಸಂಪತ್ತು ನೀಡಬಹುದಾಗಿದೆ’ ಎಂದು ‘ಪರಿಸರಕ್ಕಾಗಿ ನಾವು’ ಸಂಘಟನೆಯ ಅಧ್ಯಕ್ಷ ಎ.ಟಿ. ರಾಮಸ್ವಾಮಿ ಹೇಳಿದರು.

ಬೆಂಗಳೂರಿನ ಬೇಲಿಮಠದ ಶಿವರುದ್ರ ಸ್ವಾಮೀಜಿ, ಕಪ್ಪತ್ತಗುಡ್ಡ ನಂದಿವೇರಿ ಮಠದ ಶಿವಕುಮಾರ್ ಸ್ವಾಮೀಜಿ, ಸಾಣೇಹಳ್ಳಿ ಸಿರಿಗೆರೆ ಮಠದ ಪಂಡಿತಾರಾಧ್ಯ ಸ್ವಾಮೀಜಿ, ನಿಡಸೋಸಿ ದುರದುಂಡೇಶ್ವರ ಮಠದ ನಿಜಲಿಂಗೇಶ್ವರ ಸ್ವಾಮೀಜಿ, ಪಾಂಡೋಮಟ್ಟಿ ವಿರಕ್ತ ಮಠದ ಗುರುಬಸವ ಸ್ವಾಮೀಜಿ, ಸಾಹಿತಿ ಹಂಪ ನಾಗರಾಜಯ್ಯ, ವಿಜ್ಞಾನ ಲೇಖಕ ನಾಗೇಶ ಹೆಗಡೆ, ಪರಿಸರಕ್ಕಾಗಿ ನಾವು ಸಂಘಟನೆಯ ಗೌರವ ಅಧ್ಯಕ್ಷ ಎಸ್‌. ಮರಿಸ್ವಾಮಿ, ಕಾರ್ಯಾಧ್ಯಕ್ಷ ಆಂಜನೇಯ ರೆಡ್ಡಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.