ADVERTISEMENT

ಪ್ರಜ್ಞೆ ತಪ್ಪಿಸಿ ಚಿನ್ನ ಸುಲಿಗೆ: ಐವರು ಆರೋಪಿಗಳ ಬಂಧಿಸಿದ ಕೂಡಿಗೇಹಳ್ಳಿ ಪೊಲೀಸರು

​ಪ್ರಜಾವಾಣಿ ವಾರ್ತೆ
Published 17 ಜನವರಿ 2024, 16:25 IST
Last Updated 17 ಜನವರಿ 2024, 16:25 IST
ಬಂಧನ (ಸಾಂದರ್ಭಿಕ ಚಿತ್ರ)
ಬಂಧನ (ಸಾಂದರ್ಭಿಕ ಚಿತ್ರ)   

ಬೆಂಗಳೂರು: ಸಾಲ ತೀರಿಸಲು ಹಾಡಹಗಲೇ ಆಯುರ್ವೇದಿಕ್ ಸೆಂಟರ್‌ಗೆ ನುಗ್ಗಿ ಕೈ, ಕಾಲು ಕಟ್ಟಿ ಮಾಂಗಲ್ಯ ಸರ, ಚಿನ್ನಾಭರಣ ಹಾಗೂ ಮೊಬೈಲ್ ಸುಲಿಗೆ ಮಾಡಿದ್ದ ದಂಪತಿ ಸೇರಿ ಐವರನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹಾರೋಹಳ್ಳಿ ನಿವಾಸಿಗಳಾದ ಗುರು, ಆತನ ಪತ್ನಿ ರೇಣುಕಾ, ಸ್ನೇಹಿತೆ ಪ್ರಭಾವತಿ ಹಾಗೂ ಈಕೆಯ ಸಂಬಂಧಿಕರಾದ ರುದ್ರೇಶ್, ಸಂದೀಪ್‌ ಬಂಧಿತ ಆರೋಪಿಗಳು.

ಭಾನುವಾರ (ಜ.14ರಂದು) ಕೊಡಿಗೇಹಳ್ಳಿ ಸಮೀಪದ ತಿಂಡ್ಲು ವೃತ್ತದಲ್ಲಿರುವ ಗಂಗಾ ಆಯುರ್ವೇದಿಕ್ ಸೆಂಟರ್‌ಗೆ ನುಗ್ಗಿ, ಸಿಬ್ಬಂದಿ ಅನುಶ್ರೀ ಎಂಬುವರ ಕೈ, ಕಾಲು ಕಟ್ಟಿಹಾಕಿ, 48 ಗ್ರಾಂ ಚಿನ್ನ ಹಾಗೂ ಐಫೋನ್ ಸುಲಿಗೆ ಮಾಡಿದ್ದರು.

ADVERTISEMENT

‘ಆಯುರ್ವೇದಿಕ್ ಸೆಂಟರ್‌ನಲ್ಲಿ ರೇಣುಕಾ ಕೆಲಸ ಮಾಡುತ್ತಿದ್ದಳು. ಇದರಿಂದ ಅನುಶ್ರೀಯ ಪರಿಚಯವಾಗಿತ್ತು. ಅನುಶ್ರೀ ಬಳಿ ಚಿನ್ನಾಭರಣ, ನಗದು ಇರಬಹುದು ಎಂದು ಭಾವಿಸಿ ಸುಲಿಗೆಗೆ ಸಂಚು ರೂಪಿಸಿ, ಪ್ರಭಾವತಿಗೆ ತಿಳಿಸಿದ್ದಳು. ಜ.13ರಂದು ಸಂಜೆ ಪ್ರಭಾವತಿ ಸೆಂಟರ್‌ಗೆ ಹೋಗಿ ಬೆನ್ನು ನೋವಿಗೆ ಚಿಕಿತ್ಸೆ ಬೇಕೆಂದು ಕೇಳಿದ್ದಳು. ಆಗ ಅನುಶ್ರೀ, ಮರು ದಿನ ಬರುವಂತೆ ಸೂಚಿಸಿದ್ದರು. ಮರು ದಿನ ಬೆಳಿಗ್ಗೆಯೇ ಸೆಂಟರ್‌ಗೆ ಬಂದ ಪ್ರಭಾವತಿಗೆ, ಅನುಶ್ರೀ ಚಿಕಿತ್ಸೆ ಕೊಡಲು ಒಳಗಡೆ ಕರೆದೊಯ್ಯುತ್ತಾರೆ. ಆಗ ರುದ್ರೇಶ್, ಸಂದೀಪ್ ಮತ್ತು ಗುರು ಏಕಾಏಕಿ ಸೆಂಟರ್ ಒಳಕ್ಕೆ ನುಗ್ಗಿದ್ದಾರೆ. ಐವರು ಸೇರಿಕೊಂಡು ಕರವಸ್ತ್ರ ತೆಗೆದು, ಅದರಲ್ಲಿದ್ದ ರಾಸಾಯನಿಕದಿಂದ ಅನುಶ್ರೀಯ ಪ್ರಜ್ಞೆ ತಪ್ಪಿಸಿ ಚಿನ್ನಾಭರಣ ಹಾಗೂ ಮೊಬೈಲ್‌ ಸುಲಿಗೆ ಮಾಡಲಾಗಿತ್ತು’ ಎಂದು ಪೊಲೀಸರು ಹೇಳಿದರು.

ಆಯುರ್ವೇದಿಕ್ ಸೆಂಟರ್‌ನಲ್ಲಿದ್ದ ಸಿಸಿ ಟಿ.ವಿ ಕ್ಯಾಮೆರಾ ಪರಿಶೀಲಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.