ADVERTISEMENT

ಎಲೆಕ್ಟ್ರಾನಿಕ್ಸ್‌ ಸಿಟಿ: ವಡ್ಡರಹಳ್ಳಿಯಲ್ಲಿ ಅಡ್ಡಾಡಿದ ಕರಡಿ

​ಪ್ರಜಾವಾಣಿ ವಾರ್ತೆ
Published 31 ಮೇ 2021, 19:28 IST
Last Updated 31 ಮೇ 2021, 19:28 IST
ವಡ್ಡರಹಳ್ಳಿಯ ಎಸ್‌ಆರ್‌ವೈ ಬಡಾವಣೆಯಲ್ಲಿ ಕರಡಿ ಅಡ್ಡಾಡುತ್ತಿದ್ದ ದೃಶ್ಯ ಮನೆಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಭಾನುವಾರ ರಾತ್ರಿ ಸೆರೆಯಾಗಿದೆ
ವಡ್ಡರಹಳ್ಳಿಯ ಎಸ್‌ಆರ್‌ವೈ ಬಡಾವಣೆಯಲ್ಲಿ ಕರಡಿ ಅಡ್ಡಾಡುತ್ತಿದ್ದ ದೃಶ್ಯ ಮನೆಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಭಾನುವಾರ ರಾತ್ರಿ ಸೆರೆಯಾಗಿದೆ   

ಬೆಂಗಳೂರು: ಎಲೆಕ್ಟ್ರಾನಿಕ್‌ ಸಿಟಿ ಸಮೀಪದ ಮೈಲಸಂದ್ರ ವಡ್ಡರಹಳ್ಳಿಯ ಎಸ್‌ಆರ್‌ವೈ ಬಡಾವಣೆಯಲ್ಲಿ ರಾತ್ರಿ ವೇಳೆ ಕರಡಿ ಸಂಚರಿಸುತ್ತಿದ್ದು, ಸ್ಥಳೀಯ ನಿವಾಸಿಗಳ ನಿದ್ದೆಗೆಡಿಸಿದೆ. ಭಾನುವಾರ ರಾತ್ರಿ ಕರಡಿಯು ಈ ಪ್ರದೇಶದ ರಸ್ತೆಗಳಲ್ಲಿ ಓಡಾಡಿದ ದೃಶ್ಯ ಮನೆಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

‘ತಿಂಗಳಿನಿಂದ ಈ ಪ್ರದೇಶದಲ್ಲಿ ಕರಡಿ ಅಡ್ಡಾಡುತ್ತಿದೆ. ಭಾನುವಾರ ರಾತ್ರಿ 10.30ರ ವೇಳೆ ಕರಡಿ ನಮ್ಮ ಮನೆ ಬಳಿ ರಸ್ತೆ ದಾಟಿದ್ದನ್ನು ನಾನು ನೋಡಿದೆ. ಈ ದೃಶ್ಯ ಸಮೀಪದ ಮನೆಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ’ ಎಂದು ಎಸ್‌ಆರ್‌ವೈ ಬಡಾವಣೆಯ ನಿವಾಸಿ ಜಿ.ಪ್ರಮೋದ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಿತ್ಯವೂ ರಾತ್ರಿ ಈ ಪ್ರದೇಶದಲ್ಲಿ ಕರಡಿ ಕಾಣಿಸಿಕೊಳ್ಳುತ್ತಿದೆ. ಆಗೆಲ್ಲ ನಾಯಿಗಳು ಒಂದೇ ಸಮನೆ ಬೊಗಳುತ್ತವೆ. ಅನೇಕರು ಕರಡಿಯನ್ನು ನೋಡಿದ್ದಾರೆ. ಇದುವರೆಗೂ ಯಾರ ಮೇಲೂ ಅದು ದಾಳಿ ನಡೆಸಿಲ್ಲ. ಈಗ ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ರಾತ್ರಿ ವೇಳೆ ಜನರ ಓಡಾಟ ತೀರಾ ಕಡಿಮೆ ಇದೆ. ಆದರೆ, ಲಾಕ್‌ಡೌನ್ ತೆರವುಗೊಂಡ ಬಳಿಕ ಕರಡಿ ಜನರ ಮೇಲೆ ದಾಳಿ ನಡೆಸುವ ಅಪಾಯ ಖಂಡಿತಾ ಇದೆ’ ಎಂದು ಅವರು ಆತಂಕ ತೋಡಿಕೊಂಡರು.

ADVERTISEMENT

ವಡ್ಡರಹಳ್ಳಿ ಪ್ರದೇಶದಲ್ಲಿ ಖಾಲಿ ನಿವೇಶನಗಳು, ಕೃಷಿಭೂಮಿ, ಕುರುಚಲು ಪೊದೆಗಳು ಹಾಗೂ ಮರಮಟ್ಟುಗಳಿವೆ. ಸಮೀಪದಲ್ಲೇ ಎರಡು ಕೆರೆಗಳಿವೆ. ಈ ಪ್ರದೇಶ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಸಮೀಪದಲ್ಲಿದೆ. ಐದಾರು ವರ್ಷಗಳಿಂದ ಈಚೆಗೆ ಈ ಪ್ರದೇಶದಲ್ಲಿ ಹೊಸ ಬಡಾವಣೆ ಅಭಿವೃದ್ಧಿಯಾಗುತ್ತಿದೆ. ಇದು ವನ್ಯಜೀವಿ–ಮಾನವ ಸಂಘರ್ಷಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ತಿಳಿಸಿದರು. ಅರಣ್ಯ ಇಲಾಖೆಯವರು ಈ ಕರಡಿಯನ್ನು ಸ್ಥಳಾಂತರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.