ADVERTISEMENT

ಬೆಂಗಳೂರು– ಎರ್ನಾಕುಳಂ ಸೇರಿ 4 ವಂದೇ ಭಾರತ ರೈಲುಗಳಿಗೆ ಮೋದಿ ಹಸಿರು ನಿಶಾನೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 6:11 IST
Last Updated 8 ನವೆಂಬರ್ 2025, 6:11 IST
<div class="paragraphs"><p>ಬೆಂಗಳೂರು– ಎರ್ನಾಕುಳಂ ವಂದೇ ಭಾರತ್ ರೈಲಿಗೆ ಚಾಲನೆ</p></div>

ಬೆಂಗಳೂರು– ಎರ್ನಾಕುಳಂ ವಂದೇ ಭಾರತ್ ರೈಲಿಗೆ ಚಾಲನೆ

   

ಎರ್ನಾಕುಳಂ: ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು– ಎರ್ನಾಕುಲಂ ಸೇರಿದಂತೆ ನಾಲ್ಕು ನೂತನ ವಂದೇ ಭಾರತ ಎಕ್ಸ್‌ಪ್ರೆಸ್‌ ರೈಲುಗಳಿಗೆ ಬನಾರಸ್‌ ರೈಲು ನಿಲ್ದಾಣದಿಂದ ಶನಿವಾರ ಹಸಿರು ನಿಶಾನೆ ತೋರಿದರು.

ನೂತನ ರೈಲುಗಳು ಬನಾರಸ್‌–ಖಜುರಾಹೊ, ಲಖನೌ–ಸಹಾರನಪುರ, ಫಿರೋಜ್‌ಪುರ–ದೆಹಲಿ, ಎರ್ನಾಕುಲಂ–ಬೆಂಗಳೂರಿನ ನಡುವೆ ಸಂಚರಿಸಲಿವೆ. 

ADVERTISEMENT

ಈ ಸೆಮಿ ಹೈಸ್ಪೀಡ್‌ ರೈಲುಗಳು ಪ್ರಮುಖ ರೈಲು ನಿಲ್ದಾಣಗಳ ನಡುವಣ ಪ್ರಯಾಣದ ಅವಧಿಯನ್ನು ತಗ್ಗಿಸಲಿವೆ, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿವೆ ಮತ್ತು ದೇಶದಾದ್ಯಂತ ಆರ್ಥಿಕ ಚಟುವಟಿಕೆಗಳಿಗೆ ಬೆಂಬಲ ನೀಡಲಿವೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಬನಾರಸ್‌–ಖಜುರಾಹೊ ವಂದೇ ಭಾರತ ರೈಲು ವಾರಾಣಸಿ, ಪ್ರಯಾಗರಾಜ್‌, ಚಿತ್ರಕೂಟ ಸೇರಿದಂತೆ ಪ್ರಮುಖ ಸಾಂಸ್ಕೃತಿಕ, ಧಾರ್ಮಿಕ ಕ್ಷೇತ್ರಗಳನ್ನು ಸಂಪರ್ಕಿಸಲಿದೆ ಎಂದು ಅಧಿಕಾರಿಗಳು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಾರ್ವಜಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು,‘ವಂದೇ ಭಾರತ, ನಮೋ ಭಾರತ ಮತ್ತು ಅಮೃತ ಭಾರತ ರೈಲುಗಳು ಭಾರತೀಯ ರೈಲ್ವೆಯ ಹೊಸ ಪೀಳಿಗೆಗಳು’ ಎಂದರು.

‘ದೇಶದಲ್ಲಿ ಸಾಕಷ್ಟು ವಂದೇ ಭಾರತ ರೈಲುಗಳು ಸಂಚರಿಸುತ್ತಿವೆ, ವಿಮಾನಗಳು ಜಗತ್ತಿನಾದ್ಯಂತ ಹಾರಾಡುತ್ತಿವೆ. ಈ ಎಲ್ಲ ಅಭಿವೃದ್ಧಿಯು ದೇಶದ ಬೆಳವಣಿಗೆಯೊಂದಿಗೆ ಸಂಬಂಧ ಹೊಂದಿದೆ. ಜಗತ್ತಿನ ಅಭಿವೃದ್ಧಿ ಹೊಂದಿದ ದೇಶಗಳ ಆರ್ಥಿಕ ಬೆಳವಣಿಗೆಯಲ್ಲಿ ಮೂಲಸೌಕರ್ಯಗಳು ಪ್ರಮುಖ ಪಾತ್ರ ವಹಿಸುತ್ತವೆ. ಈ ಅಭಿವೃದ್ಧಿಯ ಪಥದಲ್ಲಿ ಭಾರತವೂ ವೇಗವಾಗಿ ಸಾಗುತ್ತಿದೆ’ ಎಂದು ಪ್ರಧಾನಿ ತಿಳಿಸಿಳಿದರು.

ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಸಂಸ್ಕೃತಿ ಅಭಿವೃದ್ಧಿಯ ಪಯಣದಲ್ಲಿ ಭಾಗಿ: ಮೋದಿ

‘ವಂದೇ ಭಾರತ’ ರೈಲು ಜಾಲವು ಭಾರತದ ಪ್ರಮುಖ ಯಾತ್ರಾ ಸ್ಥಳಗಳನ್ನು ಸಂರ್ಕಿಸುವ ಮೂಲಕ ದೇಶದ ಸಂಸ್ಕೃತಿ ನಂಬಿಕೆ ಮತ್ತು ಅಭಿವೃದ್ಧಿಯ ಪಯಣದಲ್ಲಿ ಜೊತೆಯಾಗಿದೆ. ದೇಶದಲ್ಲಿ ಯಾತ್ರೆಯನ್ನು ‘ಧ್ಯಾನದ ಮಾರ್ಗ’ ಎಂದೇ ಶತಮಾನಗಳಿಂದ ಪರಿಗಣಿಸಲಾಗುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.‌

ಭಾರತದ ಪಾರಂಪರಿಕ ತಾಣಗಳನ್ನು ದೇಶದ ಅಭಿವೃದ್ಧಿಯ ಸಂಕೇತವಾಗಿಸುವ ನಿಟ್ಟಿನಲ್ಲಿ ಇದು ಮಹತ್ವ ಹೆಜ್ಜೆ ಎಂದು ಬಣ್ಣಿಸಿದರು. ಆಧ್ಯಾತ್ಮಿಕ ಪ್ರವಾಸೋದ್ಯಮವು ಉತ್ತರ ಪ್ರದೇಶದಲ್ಲಿ ಆರ್ಥಿಕ ಪ್ರಗತಿಗೆ ಕಾರಣವಾಗಿದೆ. ಭಕ್ತರು ಯಾತ್ರಾ ಸ್ಥಳಗಳಿಗೆ ಭೇಟಿ ನೀಡುವ ಮೂಲಕ ರಾಜ್ಯದ ಆರ್ಥಿಕತೆಗೆ ಸಾವಿರಾರು ಕೋಟಿ ರೂಪಾಯಿ ಕೊಡುಗೆ ನೀಡುತ್ತಿದ್ದಾರೆ ಎಂದರು.

ಶಾಲಾ ಮಕ್ಕಳಿಂದ ಆರ್‌ಎಸ್‌ಎಸ್‌ ಗೀತೆ: ಪಿಣರಾಯಿ ಖಂಡನೆ

ನೂತನವಾಗಿ ಉದ್ಘಾಟನೆಗೊಂಡ ಎರ್ನಾಕುಲಂ–ಬೆಂಗಳೂರು ವಂದೇ ಭಾರತ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಶಾಲಾ ಮಕ್ಕಳಿಂದ ಆರ್‌ಎಸ್‌ಎಸ್‌ ಗೀತೆಯನ್ನು ಹಾಡಿಸಲಾಗಿದೆ ಎಂದು ಹೇಳಲಾಗಿದ್ದು ಈ ನಡೆಯನ್ನು  ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಖಂಡಿಸಿದ್ದಾರೆ.

‘ದಕ್ಷಿಣ ರೈಲ್ವೆಯ ಈ ನಡೆಯು ಪ್ರತಿಭಟನೆಗೆ ಅರ್ಹವಾಗಿದೆ’ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ರೈಲಿನಲ್ಲಿ ವಿದ್ಯಾರ್ಥಿಗಳು ಆರ್‌ಎಸ್‌ಎಸ್‌ ಗೀತೆ ಹಾಡಿರುವ ದೃಶ್ಯ ಟಿ.ವಿ ಚಾನೆಲ್‌ಗಳಲ್ಲಿ ಪ್ರಸಾರವಾಗಿದೆ. ‘ಸರ್ಕಾರದ ಅಧಿಕೃತ ಕಾರ್ಯಕ್ರಮದಲ್ಲಿ ಸಂವಿಧಾನಾತ್ಮಕ ನೀತಿಗಳನ್ನು ಉಲ್ಲಂಘಿಸಲಾಗಿದೆ. ಸಂಘ ಪರಿವಾರವು ತನ್ನ ಕೋಮು ರಾಜಕೀಯದ ಪ್ರಚಾರಕ್ಕಾಗಿ ಅತಿದೊಡ್ಡ ಸಾರ್ವಜನಿಕ ವಲಯವಾದ ರೈಲ್ವೆಯನ್ನು ಬಳಸಿಕೊಂಡಿರುವುದು ಸ್ವೀಕಾರಾರ್ಹವಲ್ಲ’ ಎಂದು ಹರಿಹಾಯ್ದಿದ್ದಾರೆ.

ಬೆಂಗಳೂರು– ಎರ್ನಾಕುಳಂ ವಂದೇ ಭಾರತ್ ರೈಲು ವೇಳಾಪಟ್ಟಿ:

ಈ ರೈಲು ಚೆನ್ನೈನಲ್ಲಿರುವ ದಕ್ಷಿಣ ರೈಲ್ವೆ ವ್ಯಾಪ್ತಿಗೆ ಒಳಪಡುತ್ತದೆ. ನಾಳೆ ನವೆಂಬರ್ 9ರಿಂದ ದೈನದಂದಿನ ಸಂಚಾರವನ್ನು ಆರಂಭಿಸಲಿದೆ.

ಕೇರಳದ ಎರ್ನಾಕುಳಂ, ತ್ರಿಶೂರ್, ಪಾಲಕ್ಕಾಡ್ ಹಾಗೂ ತಮಿಳುನಾಡಿನ ಕೊಯಮತ್ತೂರು, ತಿರುಪ್ಪೂರು, ಈರೋಡ್, ಸೇಲಂ ಮತ್ತು ಕರ್ನಾಟಕದ ಕೆ.ಆರ್. ಪುರ, ಕೆಎಸ್‌ಆರ್ ಬೆಂಗಳೂರನ್ನು ಸಂಪರ್ಕಿಸಲಿದೆ.

ಬುಧವಾರ ಹೊರತುಪಡಿಸಿ ಪ‍್ರತಿದಿನ ಬೆಳಿಗ್ಗೆ 5.10 ಕ್ಕೆ ಕೆಎಸ್‌ಆರ್ ಬೆಂಗಳೂರಿನಿಂದ ಈ ರೈಲು ಹೊರಡಲಿದ್ದು ಅದೇ ದಿನ ಮಧ್ಯಾಹ್ನ 1.50ಕ್ಕೆ ಎರ್ನಾಕುಳಂ ತಲುಪಲಿದೆ.

ಬುಧವಾರ ಹೊರತುಪಡಿಸಿ ಪ‍್ರತಿದಿನ ಮಧ್ಯಾಹ್ನ 2.20 ಕ್ಕೆ ಎರ್ನಾಕುಳಂನಿಂದ ಈ ರೈಲು ಹೊರಡಲಿದ್ದು ಅದೇ ದಿನ ರಾತ್ರಿ 11ಕ್ಕೆ ಕೆಎಸ್‌ಆರ್ ಬೆಂಗಳೂರಿಗೆ ಬರಲಿದೆ.

583 ಕಿ.ಮೀ ದೂರದ ಪ್ರಯಾಣವನ್ನು 8 ಗಂಟೆ 40 ನಿಮಿಷದಲ್ಲಿ ವಂದೇ ಭಾರತ್ ರೈಲು ಕ್ರಮಿಸಲಿದೆ. ಕೇರಳದ ಆರ್ಥಿಕ ರಾಜಧಾನಿ ಎರ್ನಾಕುಳಂ–ಕೊಚ್ಚಿಗೆ ಪ್ರಮುಖ ಸಂಪರ್ಕ ಸೇತುವೆಯಾಗಲಿದೆ. ಕೇರಳ–ತಮಿಳುನಾಡು–ಕರ್ನಾಟಕದಲ್ಲಿ ಸಂಚರಿಸುವ ಈ ರೈಲು ಎಂಟು ಕೋಚ್‌ಗಳನ್ನು ಒಳಗೊಂಡಿರಲಿದೆ.

ಈ ಮಾರ್ಗದ ಹೊಸ ವಂದೇ ಭಾರತ್ ರೈಲು ಪ್ರಯಾಣಿಕರಿಗೆ ಬಹು ಬೇಡಿಕೆಯ ರೈಲಾಗಲಿದೆ ಎಂದು ದಕ್ಷಿಣ ರೈಲ್ವೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.