
ಬೆಂಗಳೂರು: ನ್ಯಾಷನಲ್ ಮಿಡ್‌ವೈಫ್ರಿ ಟ್ರೈನಿಂಗ್ ಇನ್‌ಸ್ಟಿಟ್ಯೂಟ್ ಇಲ್ಲಿನ ವಾಣಿವಿಲಾಸ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ 18 ತಿಂಗಳ ಪ್ರಸೂತಿ ಶುಶ್ರೂಷೆ ತರಬೇತಿಯನ್ನು 25 ಅಭ್ಯರ್ಥಿಗಳು ಪೂರ್ಣಗೊಳಿಸಿದ್ದಾರೆ.
ಆಸ್ಪತ್ರೆಯು ನಗರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ತರಬೇತಿ ಪಡೆದ ಮೊದಲ ಬ್ಯಾಚ್‌ನ ಅಭ್ಯರ್ಥಿಗಳಿಗೆ ಪ್ರಮಾಣಪತ್ರಗಳನ್ನು ಪ್ರದಾನ ಮಾಡಲಾಯಿತು. ಆರೋಗ್ಯ ಇಲಾಖೆಯ (ತಾಯಿ ಆರೋಗ್ಯ ವಿಭಾಗ) ಉಪ ನಿರ್ದೇಶಕ ಡಾ. ರಾಜಕುಮಾರ್, ವಾಣಿವಿಲಾಸ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ. ಸವಿತಾ ಸಿ., ಸ್ಥಾನಿಕ ವೈದ್ಯಾಧಿಕಾರಿ ಡಾ. ಸಂತೋಷ್, ಆಸ್ಟ್ರಿಕ್ ಫೌಂಡೇಷನ್ ಅಧ್ಯಕ್ಷೆ ಜಾಹ್ನವಿ ನಿಲೇಕಣಿ, ಕರ್ನಾಟಕ ಸ್ಟೇಟ್ ಡಿಪ್ಲೊಮಾ ಇನ್ ನರ್ಸಿಂಗ್ ಎಕ್ಸಾಮಿನೇಷನ್ ಬೋರ್ಡ್ ಕಾರ್ಯದರ್ಶಿ ಮಡಿವಾಳಪ್ಪ ನಾಗರಹಳ್ಳಿ ಪಾಲ್ಗೊಂಡಿದ್ದರು.
‘ಕೇಂದ್ರ ಸರ್ಕಾರವು 2019ರಲ್ಲಿ ‘ನರ್ಸ್ ಪ್ರಾಕ್ಟಿಷನರ್ಸ್ ಮಿಡ್‌ವೈಫ್ರಿ ಎಜುಕೇಟರ್ಸ್’ (ಎನ್‌ಪಿಎಂಇ) ತರಬೇತಿ ಕಾರ್ಯಕ್ರಮವನ್ನು ಜಾರಿಗೆ ತಂದಿದೆ. ಸಹಜ ಹಾಗೂ ಸುರಕ್ಷಿತ ಹೆರಿಗೆ, ತಾಯಿ ಮತ್ತು ನವಜಾತ ಶಿಶುಗಳ ಆರೈಕೆ ಬಗ್ಗೆ ಈ ತರಬೇತಿ ತಿಳಿಸಿಕೊಡಲಿದೆ. ಹೆರಿಗೆ ಮತ್ತು ಪ್ರಸವೋತ್ತರ ಅವಧಿಯಲ್ಲಿ ಉತ್ತಮ ಗುಣಮಟ್ಟದ, ಗೌರವಯುತ ಮತ್ತು ಮಹಿಳಾ ಕೇಂದ್ರಿತ ಆರೈಕೆ ನೀಡುವ ಗುರಿಯನ್ನು ಈ ತರಬೇತಿ ಹೊಂದಿದೆ’ ಎಂದು ಡಾ. ಸವಿತಾ ಸಿ. ಹೇಳಿದರು.
‘2023ರ ಜನವರಿಯಲ್ಲಿ ಇಲ್ಲಿ ಪ್ರಾರಂಭವಾದ ಈ ತರಬೇತಿಯಲ್ಲಿ ಅಂತರರಾಷ್ಟ್ರೀಯ ತರಬೇತುದಾರರ ಮಾರ್ಗದರ್ಶನದಲ್ಲಿ 25 ಅಭ್ಯರ್ಥಿಗಳು ತರಬೇತಿ ಪೂರ್ಣಗೊಳಿಸಿದ್ದಾರೆ. ಮೊದಲ ಆರು ತಿಂಗಳು ವಾಣಿವಿಲಾಸ ಆಸ್ಪತ್ರೆಯಲ್ಲಿಯೇ ಲಿಖಿತ ಮತ್ತು ಪ್ರಾಯೋಗಿಕ ತರಬೇತಿ ಪೂರ್ಣಗೊಳಿಸಲಾಯಿತು. ಉಳಿದ 12 ತಿಂಗಳು ರಾಜ್ಯದ ನಿಗದಿತ ಸ್ಟೇಟ್ ಮಿಡ್‌ವೈಫ್ರಿ ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌ಗಳಲ್ಲಿ ತರಬೇತಿ ನೀಡಲಾಯಿತು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.