‘ವರ್ತೂರು ಸಂಕ್ರಾಂತಿ ಉತ್ಸವ-2025’ದಲ್ಲಿ ನಟ ಡಾಲಿ ಧನಂಜಯ್ ಅವರನ್ನು ಸನ್ಮಾನಿಸಲಾಯಿತು. ಶಾಸಕಿ ಮಂಜುಳಾ ಲಿಂಬಾವಳಿ, ಮಾಜಿ ಶಾಸಕ ಅರವಿಂದ ಲಿಂಬಾವಳಿ, ಸಂಘದ ಅಧ್ಯಕ್ಷ ಮಹೇಂದ್ರ ಮೋದಿ ಉಪಸ್ಥಿತರಿದ್ದರು
ಕೆ.ಆರ್.ಪುರ: ‘ನಮ್ಮ ಪರಂಪರೆಯ ಸಂಕೇತಗಳಾದ ಹಬ್ಬಗಳು, ಜಾತ್ರೆ, ಉತ್ಸವಗಳನ್ನು ಆಚರಿಸುವುದರಿಂದ ದೇಶದ ಸಂಸ್ಕೃತಿ ಮತ್ತು ಭಾಷೆ ಉಳಿಯುತ್ತದೆ’ ಎಂದು ನಟ ಡಾಲಿ ಧನಂಜಯ್ ಹೇಳಿದರು.
ಕೆ.ಆರ್.ಪುರ ಸಮೀಪದ ವರ್ತೂರಿನಲ್ಲಿ ವರ್ತೂರು ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ಏರ್ಪಡಿಸಿದ್ದ ವರ್ತೂರು ಸಂಕ್ರಾಂತಿ ಉತ್ಸವ-2025 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ನಮ್ಮ ಪೂರ್ವಜರ ಆಚರಣೆಗಳಿಗೆ ತನ್ನದೆಯಾದ ಅರ್ಥ ಮಹತ್ವ, ಹಿನ್ನೆಲೆಯಿದೆ. ಆಚರಣೆಗಳು ನಮ್ಮ ಶಿಸ್ತುಬದ್ಧ ಜೀವನಕ್ಕೆ ದಾರಿದೀಪಗಳಾಗಿವೆ. ಸಂಕ್ರಾಂತಿ ಉತ್ಸವದಂತಹ ಕಾರ್ಯಕ್ರಮಗಳು ಹೆಚ್ಚಾಗಬೇಕು. ಮುಂದಿನ ಪೀಳಿಗೆಗೆ ತಿಳಿಸುವ ಕೆಲಸವಾಗಬೇಕು. ಹೆಚ್ಚಾಗಿ ಕನ್ನಡ ಸಿನಿಮಾವನ್ನು ಚಿತ್ರಮಂದಿರಗಳಲ್ಲಿಯೇ ನೋಡಿ ಪ್ರೋತ್ಸಾಹ ನೀಡಬೇಕು’ ಎಂದರು.
ವರ್ತೂರು ಕ್ರೀಡಾ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಮಹೇಂದ್ರ ಮೋದಿ ಮಾತನಾಡಿ, ನಶಿಸಿ ಹೋಗುತ್ತಿರುವ ಗೋವು ಉಳಿಸುವ ಉದ್ದೇಶದಿಂದ ಸತತವಾಗಿ ಹದಿನಾಲ್ಕು ವರ್ಷಗಳಿಂದ ಸಂಕ್ರಾಂತಿ ಉತ್ಸವ ಕಾರ್ಯಕ್ರಮ ಹಮ್ಮಿಕೊಂಡು ಬರಲಾಗುತ್ತಿದೆ ಎಂದರು.
ಉತ್ಸವದಲ್ಲಿ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ, ವಿವಿಧ ನೃತ್ಯ, ಭರತನಾಟ್ಯ, ನಗೆಹಬ್ಬ ಹಾಗೂ ಸಾಧಕರಿಗೆ ವರ್ತೂರು ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಶಾಸಕಿ ಮಂಜುಳಾ ಲಿಂಬಾವಳಿ, ಮಾಜಿ ಶಾಸಕ ಅರವಿಂದ ಲಿಂಬಾವಳಿ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಎನ್.ಆರ್.ಶ್ರೀಧರ್ ರೆಡ್ಡಿ, ಮುಖಂಡರಾದ ಮನೋಹರ್ ರೆಡ್ಡಿ, ಎಲ್.ರಾಜೇಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.