ಬೆಂಗಳೂರು: ಕೊಡಗು ಜಿಲ್ಲೆಯ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಹೆಣ್ಣೂರು ಠಾಣೆ ಪೊಲೀಸರು, ವಿನಯ್ ಜತೆ ಸಂಪರ್ಕ ಹೊಂದಿದ್ದ ವ್ಯಕ್ತಿಗಳ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ವಿನಯ್ ಅವರ ಮರಣ ಪತ್ರ ಆಧರಿಸಿ ಕೊಡುಗು ಜಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರಾ ಮೈನಾ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.
ವಿನಯ್ ಅವರ ಮೊಬೈಲ್, ಲ್ಯಾಪ್‌ಟಾಪ್, ಮರಣಪತ್ರವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಲಾಗಿದ್ದು, ಎರಡು ದಿನಗಳಲ್ಲಿ ವರದಿ ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿನಯ್ ಬೆಂಗಳೂರಿಗೆ ಯಾವಾಗ ಬಂದರು? ಯಾರ ಜತೆ ಸಂಪರ್ಕದಲ್ಲಿದ್ದರು? ಯಾರಿಗೆಲ್ಲಾ ಕರೆ ಮಾಡಿದ್ದರು? ಕೊನೆಯ ಬಾರಿಗೆ ಯಾರ ಜತೆ ಮಾತನಾಡಿದ್ದರು? ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಕರೆಗಳ ವಿವರ (ಸಿಡಿಆರ್) ಪರಿಶೀಲನೆ ನಡೆಸಲಾಗುತ್ತಿದೆ.
ವಿನಯ್ ಅವರೇ ಮರಣ ಪತ್ರ ಬರೆದಿದ್ದಾ ಅಥವಾ ಬರೆಸಿದ್ದಾ? ಮರಣ ಪತ್ರ ಬರೆಯಲು ವಿನಯ್‌ಗೆ ಯಾರಾದರೂ ಸೂಚಿಸಿದ್ದರೆ? ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಮರಣ ಪತ್ರ ವಿನಯ್ ಹಾಕಿದ್ದಾ? ಲ್ಯಾಪ್‌ಟಾಪ್‌ನಲ್ಲಿ ಮರಣ ಪತ್ರ ಬರೆದು ಬಳಿಕ ಪೋಸ್ಟ್ ಮಾಡಿದ್ರಾ? ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿದ್ದು ಯಾವಾಗ? ಶುಕ್ರವಾರ ರಾತ್ರಿಯಾದರೂ ವಿನಯ್ ಗೋದಾಮಿನಲ್ಲಿ ಉಳಿದಿದ್ದು ಏಕೆ? ಕಂಪನಿಯಲ್ಲಿ ಅವರ ಜತೆ ಯಾರೆಲ್ಲಾ ಇದ್ದರು? ಮೊಬೈಲ್‌ನಲ್ಲಿ ಸುದೀರ್ಘ ಮರಣ ಪತ್ರ ಬರೆದಿದ್ದಾರೂ ಹೇಗೆ? ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮೊಬೈಲ್‌ನಿಂದ ಅಳಿಸಿ ಹಾಕಿದ್ದ ದತ್ತಾಂಶವನ್ನು ಮರು ಸಂಗ್ರಹಿಸಲು ಎಫ್ಎಸ್‌ಎಲ್ ತಜ್ಞರು ಪ್ರಯತ್ನಿಸುತ್ತಿದ್ದಾರೆ. ಮರಣಪತ್ರದ ನೈಜತೆ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.