ADVERTISEMENT

ನಿಯಮ ಉಲ್ಲಂಘಿಸಿ ಕೋರ್ಸ್‌ಗಳ ಆರಂಭ: ಕುಲಸಚಿವ ಎನ್‌. ಮಹೇಶ್‌ಬಾಬು

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2023, 22:30 IST
Last Updated 22 ಫೆಬ್ರುವರಿ 2023, 22:30 IST
   

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಕೆಲವು ಕಾಲೇಜು ಮತ್ತು ಸಂಸ್ಥೆಗಳು ನಿಯಮಗಳನ್ನು ಉಲ್ಲಂಘಿಸಿ ಎಂಬಿಎ ಹಾಗೂ ಇತರ ಕೋರ್ಸುಗಳನ್ನು ಮೈಸೂರು ವಿಶ್ವವಿದ್ಯಾಲಯ ಹಾಗೂ ಇತರ ವಿಶ್ವವಿದ್ಯಾಲಯಗಳಿಂದ ಅನುಮತಿ ಪಡೆದು ನಡೆಸುತ್ತಿವೆ ಎಂದು ಕುಲಸಚಿವ ಎನ್‌. ಮಹೇಶ್‌ಬಾಬು ತಿಳಿಸಿದ್ದಾರೆ.

ಒಂದು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿರುವ ಸಂಸ್ಥೆಗಳು ಅಥವಾ ಕಾಲೇಜುಗಳಿಗೆ ಬೇರೆ ವಿಶ್ವವಿದ್ಯಾಲಯಗಳು ಮಾನ್ಯತೆಯನ್ನು ನೀಡಬಾರದು ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ಸ್ಪಷ್ಟವಾಗಿ ನಿರ್ದೇಶನ ನೀಡಿದೆ. ಈ ನಿಯಮಗಳನ್ನು ಮೀರಿ ಬೆಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಕೆಲವು ಕಾಲೇಜು ಮತ್ತು ಶೈಕ್ಷಣಿಕ ಸಂಸ್ಥೆಗಳು ವಿವಿಧ ಕೋರ್ಸ್‌ಗಳನ್ನು ನಡೆಸುತ್ತಿವೆ. ಇದರಿಂದಾಗಿ, ಯುಜಿಸಿ ನಿಯಮಗಳು, ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ–2000ರ ಪ್ರಕರಣ 5ರ ಹಾಗೂ ಸುಪ್ರೀಂ ಕೋರ್ಟ್‌ ಆದೇಶಗಳನ್ನು ಉಲ್ಲಂಘನೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಇಂತಹ ಕಾಲೇಜು ಅಥವಾ ಸಂಸ್ಥೆಗಳಿಗೆ ಪ್ರವೇಶ ಪಡೆದು ಪದವಿ ಪಡೆದ ವಿದ್ಯಾರ್ಥಿಗಳ ಪದವಿಗಳಿಗೆ ಮಾನ್ಯತೆ ಇರದ ಕಾರಣ ಈ ಸಂಸ್ಥೆಗಳಿಗೆ ಪ್ರವೇಶ ಪಡೆಯಬಾರದೆಂದು ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ADVERTISEMENT

ಬೆಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿರುವ ಅಂತಹ ಸಂಸ್ಥೆಗಳು ಕೂಡಲೇ ಅಂತಹ ಕೋರ್ಸುಗಳನ್ನು ರದ್ದುಪಡಿಸಲು ಸೂಚಿಸಲಾಗಿದೆ. ತಪ್ಪಿದಲ್ಲಿ ಅಂತಹ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವು
ದೆಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.