ಬೆಂಗಳೂರು: ಹೆಣ್ಮಕ್ಕಳು ವಾಣಿಜ್ಯ ವಾಹನಗಳ ಚಾಲಕರಾದರೆ ಮದ್ಯಪಾನ ಮಾಡಿ ಚಾಲನೆ ಮಾಡುವ ಪ್ರಕರಣ, ಅತಿವೇಗದ ಚಾಲನೆ ಪ್ರಕರಣಗಳೆಲ್ಲ ಕಡಿಮೆಯಾಗಲಿವೆ ಎಂದು ಬೆಂಗಳೂರು ಪಶ್ಚಿಮ ವಲಯ ಸಂಚಾರ ಪೊಲೀಸ್ ವಿಭಾಗದ ಡಿಸಿಪಿ ಅನಿತಾ ಬಿ. ಹದ್ದಣ್ಣವರ್ ತಿಳಿಸಿದರು.
ವಾಣಿಜ್ಯ ವಾಹನಗಳ ಚಾಲನಾ ತರಬೇತಿ ಪಡೆದ ಮಹಿಳೆಯರಿಗೆ ರಾಜ್ಯ ಮಹಿಳಾ ಉದ್ಯಮಿಗಳ ಸಂಸ್ಥೆ (ಅವೇಕ್) ಇದರ 41ನೇ ಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಗುರುವಾರ ಚಾಲನಾ ಪ್ರಮಾಣಪತ್ರ (ಡಿಎಲ್) ವಿತರಿಸಿ ಅವರು ಮಾತನಾಡಿದರು.
‘ಅಂಗನವಾಡಿ ಎಂದರೆ ಅಲ್ಲಿ ಮಹಿಳೆಯರೇ ಇರಬೇಕು, ಚಾಲಕರು ಅಂದರೆ ಪುರುಷರೇ ಇರಬೇಕು ಎಂಬ ಅಲಿಖಿತ ನಿಯಮ ನಮ್ಮ ತಲೆಯೊಳಗೆ ಕುಳಿತುಬಿಟ್ಟಿದೆ. ಇದನ್ನು ಮೀರಲು ‘ಅವೇಕ್’ ಚಾಲನೆ ಸಂಸ್ಥೆ ಮತ್ತು ಸಾರಿಗೆ ಇಲಾಖೆಗಳ ಸಹಯೋಗದಲ್ಲಿ 80 ಮಹಿಳೆಯರಿಗೆ ವಾಣಿಜ್ಯ ವಾಹನ ಚಾಲನಾ ತರಬೇತಿ ಕೊಡಿಸುವ ಮೂಲಕ ಉತ್ತಮ ಕಾರ್ಯ ಮಾಡಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
‘ಚಾಲಕರಾದಾಗ ನಿಮ್ಮ ಮೇಲೆ ಹಲವು ಜವಾಬ್ದಾರಿಗಳು ಬಂದುಬಿಡುತ್ತವೆ. ಮೊದಲು ನಿಮ್ಮನ್ನು ನೀವು ರಕ್ಷಿಸಿಕೊಳ್ಳುವುದನ್ನು ಕಲಿಯಬೇಕು. ನಿಮ್ಮನ್ನು ನಂಬಿರುವ ನಿಮ್ಮ ಕುಟುಂಬದ ಜವಾಬ್ದಾರಿಯೂ ನಿಮ್ಮ ಮೇಲಿದೆ. ನಿಮ್ಮ ವಾಹನದಲ್ಲಿ ಬರುವ ಪ್ರಯಾಣಿಕರನ್ನು ಸುರಕ್ಷಿತವಾಗಿ ತಲುಪಿಸುವ ಜವಾಬ್ದಾರಿಯೂ ನಿಮ್ಮ ಮೇಲಿದೆ’ ಎಂದು ತಿಳಿಸಿದರು.
‘ಆರ್ಥಿಕ ಭದ್ರತೆಯನ್ನು ಕಾಪಾಡಿಕೊಳ್ಳಬೇಕು. ನಷ್ಟ ಮಾಡಿಕೊಳ್ಳಲು ಹೋಗಬಾರದು. 20 ದಿನಗಳ ತರಬೇತಿ ಪಡೆದ ಕೂಡಲೇ ಉತ್ತಮ ಚಾಲಕರಾಗುವುದಿಲ್ಲ. ನಿತ್ಯ ಕಲಿಯುವುದಿರುತ್ತದೆ. ನಿರಂತರವಾಗಿ ವಾಹನ ಚಾಲನೆಯಲ್ಲಿ ತೊಡಗಿಕೊಂಡಿರಬೇಕು. ನನ್ನಿಂದ ಸಾಧ್ಯ ಎಂಬ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಕುಟುಂಬದವರು ಕೂಡ ಪ್ರೋತ್ಸಾಹ ನೀಡಬೇಕು’ ಎಂದು ಸಲಹೆ ನೀಡಿದರು.
ಎಲ್ಲ ಪ್ರಯಾಣಿಕರು ಒಳ್ಳೆಯವರು ಇರುತ್ತಾರೆ ಎಂದು ಅಂದುಕೊಳ್ಳಬೇಕಿಲ್ಲ. ಕೆಲವರು ಕೆಟ್ಟವರೂ ಇರುತ್ತಾರೆ. ಯಾವುದೇ ತೊಂದರೆ ಎದುರಾದರೆ ‘ಸೇಫ್ಟಿ ಸಿಟಿ’ ಆ್ಯಪ್ ಬಳಸಿ. ಆಗ ನೀವು ಪೊಲೀಸರ ಕಣ್ಗಾವಲಲ್ಲಿ ಇರುತ್ತೀರಿ. ಜೊತೆಗೆ 112ಗೆ ಕರೆ ಮಾಡಿ. ಬೆಂಗಳೂರು ನಗರ ವ್ಯಾಪ್ತಿಯಲ್ಲಿದ್ದರೆ ಕರೆ ಮಾಡಿದ ಆರೇಳು ನಿಮಿಷಗಳ ಒಳಗೆ ಪೊಲೀಸರು ನಿಮ್ಮ ರಕ್ಷಣೆಗೆ ಧಾವಿಸಲಿದ್ದಾರೆ ಎಂದರು.
‘ಸಿಡ್ಬಿ’ ವ್ಯವಸ್ಥಾಪಕಿ ಸ್ವಾತಿ, ಮಾಂಡೋವಿ ಮೋಟರ್ಸ್ ಕಾರ್ಪೊರೇಟ್ ಮ್ಯಾನೇಜರ್ ಕಿರಣ್, ಕಾಸಿಯಾ ಪ್ರಧಾನ ಕಾರ್ಯದರ್ಶಿ ಸುರೇಶ್ ಸಾಗರ್, ಕರ್ನಾಟಕ ರಾಜ್ಯ ಟ್ರಾವೆಲ್ ಆಪರೇಟರ್ಸ್ ಅಸೋಸಿಯೇಷನ್ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ, ‘ಅವೇಕ್’ ಅಧ್ಯಕ್ಷೆ ಆಶಾ ಎನ್.ಆರ್., ನಿಕಟಪೂರ್ವ ಅಧ್ಯಕ್ಷೆ ರಾಜೇಶ್ವರಿ ಆರ್., ಉಪಾಧ್ಯಕ್ಷೆ ಭುವನೇಶ್ವರಿ ಸಿ., ಕಾರ್ಯದರ್ಶಿ ಜಗದೀಶ್ವರಿ, ಖಂಜಾಂಚಿ ಸುಜಾತಾ ವಿ., ಜಂಟಿ ಕಾರ್ಯದರ್ಶಿ ರೇಣುಕಾ ಮನೋಜ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.