ADVERTISEMENT

ಅಡಿಕೆಗೆ ಸಮಸ್ಯೆ ತಂದಿಟ್ಟ ಕಲಬೆರಕೆ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ವಿಶ್ವ ಹವ್ಯಕ ಸಮ್ಮೇಳನದ ‘ಸಾಕ್ಷಾತ್ಕಾರ ಸಭಾ’ ಕಾರ್ಯ‌ಕ್ರಮ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2024, 15:39 IST
Last Updated 28 ಡಿಸೆಂಬರ್ 2024, 15:39 IST
<div class="paragraphs"><p>ತೃತೀಯ ವಿಶ್ವ ಹವ್ಯಕ ಸಮ್ಮೇಳನದ ಎರಡನೇ ದಿನದ ಸಾಕ್ಷಾತ್ಕಾರ ಸಭಾಕ್ಕೆ&nbsp;ಸಮ್ಮೇಳನ ಸಮಿತಿ ಗೌರವಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಶ್ರೀಮನ್ನೆಲೆಮಾವು ಮಠದ ಮಾಧವಾನಂದ ಭಾರತೀ ಸ್ವಾಮೀಜಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಉದಯವಾಣಿ ಸಂಪಾದಕ ರವಿಶಂಕರ್ ಕೆ. ಭಟ್ ಮೆರವಣಿಗೆಯಲ್ಲಿ ಆಗಮಿಸಿದರು </p></div>

ತೃತೀಯ ವಿಶ್ವ ಹವ್ಯಕ ಸಮ್ಮೇಳನದ ಎರಡನೇ ದಿನದ ಸಾಕ್ಷಾತ್ಕಾರ ಸಭಾಕ್ಕೆ ಸಮ್ಮೇಳನ ಸಮಿತಿ ಗೌರವಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಶ್ರೀಮನ್ನೆಲೆಮಾವು ಮಠದ ಮಾಧವಾನಂದ ಭಾರತೀ ಸ್ವಾಮೀಜಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಉದಯವಾಣಿ ಸಂಪಾದಕ ರವಿಶಂಕರ್ ಕೆ. ಭಟ್ ಮೆರವಣಿಗೆಯಲ್ಲಿ ಆಗಮಿಸಿದರು

   

ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.

ಬೆಂಗಳೂರು: ಅಡಿಕೆ ಕ್ಯಾನ್ಸರ್‌ಕಾರಕವಲ್ಲ. ಆದರೆ, ಉತ್ತಮ ಬಣ್ಣಕ್ಕಾಗಿ ಅಡಿಕೆಗೆ ರೆಡ್‌ ಆಕ್ಸೈಡ್‌ ಸೇರಿಸುವುದರಿಂದ ತೊಂದರೆ ಉಂಟಾಗಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ADVERTISEMENT

ತೃತೀಯ ವಿಶ್ವ ಹವ್ಯಕ ಸಮ್ಮೇಳನದ ಎರಡನೇ ದಿನವಾದ ಶನಿವಾರ ‘ಸಾಕ್ಷಾತ್ಕಾರ ಸಭಾ’ ಕಾರ್ಯ‌ಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದಕ್ಷಿಣ ಕನ್ನಡದಲ್ಲಿ ಹಣ್ಣಡಿಕೆಯನ್ನು ಒಣಗಿಸುವುದರಿಂದ ಅಲ್ಲಿ ಸಮಸ್ಯೆ ಇಲ್ಲ. ಅಡಿಕೆ ಬೇಯಿಸುವ ಪದ್ಧತಿ ಇರುವಲ್ಲಿ ರೆಡ್‌ ಆಕ್ಸೈಡ್‌ ಮಿಶ್ರಣ ನಡೆಯುತ್ತದೆ. ಅಲ್ಲದೇ ದೆಹಲಿ ಮತ್ತಿತರ ಕಡೆಗಳಲ್ಲಿ ಗುಟ್ಕಾವನ್ನೇ ಅಡಿಕೆ ಎಂದು ಭಾವಿಸಿರುವುದು ಕೂಡ ಸಮಸ್ಯೆಗೆ ಕಾರಣವಾಗಿದೆ. ಅಡಿಕೆ ಬಗೆಗಿನ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದೆ. ಅಡಿಕೆ ಬೆಳೆಗಾರರ ಪರ ಪ್ರಧಾನಿ ನರೇಂದ್ರ ಮೋದಿಯವರಿದ್ದಾರೆ. ಅವರ ನಿರ್ದೇಶನದಂತೆ ಸುಪ್ರೀಂ ಕೋರ್ಟ್‌ನಲ್ಲಿ ರೈತರ ಪರ ವಾದ ಮಾಡಲಾಗುತ್ತಿದೆ ಎಂದು ಹೇಳಿದರು.

ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ‘ಹವ್ಯಕ ಸಮುದಾಯದ ಮೂರು ಮಠಗಳಷ್ಟು ಪ್ರಭಾವಿ ಮಠಗಳು ಬೇರೆ ಇಲ್ಲ. ಸಣ್ಣ ಸಮಾಜಗಳು ಗುರುತಿಸಿಕೊಳ್ಳಲು ಜಾತಿ ಸಂಘಟನೆ ಮಾಡಿಕೊಳ್ಳುವುದು ಅವಶ್ಯ’ ಎಂದು ಹೇಳಿದರು.

ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಮಾತನಾಡಿ, ‘ಹವ್ಯಕ ಸಮುದಾಯದಲ್ಲಿ ಮಾತ್ರವಲ್ಲ, ದಕ್ಷಿಣ ಭಾರತದ ಎಲ್ಲ ರಾಜ್ಯಗಳಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು ಸೇರಿದಂತೆ ಎಲ್ಲ ಜಾತಿ–ಧರ್ಮಗಳಲ್ಲಿ ಜನಸಂಖ್ಯೆ ಕಡಿಮೆಯಾಗುತ್ತಿದೆ. ಉತ್ತರ ಭಾರತದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಸಿದ್ಧಾಪುರ ಶ್ರೀಮನ್ನೆಲೆಮಾವು ಮಠದ ಮಾಧವಾನಂದ ಭಾರತೀ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಚಿವ ಪಿ.ಜಿ.ಆರ್‌. ಸಿಂಧ್ಯ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಅರಬೈಲು ಶಿವರಾಮ ಹೆಬ್ಬಾರ್‌, ಉದಯವಾಣಿ ಸಂಪಾದಕ ರವಿಶಂಕರ್ ಕೆ. ಭಟ್‌ ಭಾಗವಹಿಸಿದ್ದರು.

ವೈದಿಕ ವಿದ್ವಾಂಸರಿಗೆ ‘ಹವ್ಯಕ ವೇದರತ್ನ’, ಶಿಕ್ಷಕರಿಗೆ ‘ಹವ್ಯಕ ಶಿಕ್ಷಕರತ್ನ’, ವಿದ್ಯಾರ್ಥಿಗಳಿಗೆ ‘ಹವ್ಯಕ ವಿದ್ಯಾರತ್ನ’ ಸನ್ಮಾನ ನಡೆಯಿತು. ‘ಕೃಷಿಯಲ್ಲಿ ತಂತ್ರಜ್ಞಾನದ ಅಳವಡಿಕೆ’, ‘ಆಡಳಿತಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು’, ‘ಸ್ವ ಉದ್ಯಮದಿಂದ ಉದ್ಯೋಗಾವಕಾಶ’ ಗೋಷ್ಠಿಗಳು ನಡೆದವು.

₹ 12 ಕೋಟಿ ಮೌಲ್ಯದ ಭೂದಾನ

ಬೆಂಗಳೂರಿನ ಕಮರ್ಷಿಯಲ್ ರಸ್ತೆಯ ಸಮೀಪದಲ್ಲಿರುವ ₹ 12 ಕೋಟಿ ಮೌಲ್ಯದ ಜಾಗವನ್ನು ಮುಲಕನಾಡು ಬ್ರಾಹ್ಮಣ ಸಮುದಾಯದ ಶ್ರೀನಿವಾಸನ್ ಕೆ.ಎಲ್. ಅವರು ಹವ್ಯಕ ಮಹಾಸಭಾಕ್ಕೆ ದಾನ ಮಾಡಿದ್ದಾರೆ. ಅಲ್ಲಿ ‘ತರ್ಪಣ ಭವನ’ ನಿರ್ಮಿಸುವ ಉದ್ದೇಶವಿದೆ ಎಂದು ಸಮ್ಮೇಳನದ ಪ್ರಧಾನ ಸಮಿತಿ ಅಧ್ಯಕ್ಷ ಡಾ. ಗಿರಿಧರ ಕಜೆ ಹೇಳಿದರು.

ಬ್ರಾಹ್ಮಣ್ಯವನ್ನು ಉಳಿಸಿ ಬೆಳೆಸುತ್ತಿರುವವರಲ್ಲಿ ಹವ್ಯಕ ಸಮಾಜ ಮುಂಚೂಣಿಯಲ್ಲಿದೆ. ಸಂಸ್ಕೃತ - ಸಂಸ್ಕೃತಿ - ಸಂಸ್ಕಾರಕ್ಕೆ ಈ ಹವ್ಯಕ ಸಮಾಜ ನೀಡಿದ ಕೊಡುಗೆ ಅನುಪಮವಾದುದು. ಬೆಂಗಳೂರಿನಲ್ಲಿ ಇರುವ 15 ಸಾವಿರಕ್ಕೂ ಅಧಿಕ ಪುರೋಹಿತರಲ್ಲಿ 5 ಸಾವಿರ ಮಂದಿ ಹವ್ಯಕರು. ಅದಕ್ಕಾಗಿ ಭೂದಾನ ಮಾಡುತ್ತಿರುವುದಾಗಿ ಶ್ರೀನಿವಾಸನ್ ಕೆ.ಎಲ್. ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.