ADVERTISEMENT

ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು ಬಗ್ಗೆ ಅಶ್ಲೀಲ ಟ್ವೀಟ್‌: ಎಫ್ಐಆರ್‌ ದಾಖಲು

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2019, 5:40 IST
Last Updated 15 ಆಗಸ್ಟ್ 2019, 5:40 IST
   

ಬೆಂಗಳೂರು: ಮಹಾತ್ಮ ಗಾಂಧಿ ಮತ್ತು ಜವಾಹರಲಾಲ್ ನೆಹರು ಅವರ ವ್ಯಕ್ತಿತ್ವಕ್ಕೆ ಕಳಂಕ ತರುವ ರೀತಿಯಲ್ಲಿ ಅಶ್ಲೀಲವಾಗಿ ಟ್ವೀಟ್ ಮಾಡಿದ ಆರೋಪದಲ್ಲಿ ದೆಹಲಿಯ ಪ್ರೊ. ಮಧುಪೂರ್ಣಿಮಾ ಕಿಶ್ವರ್ ವಿರುದ್ಧ ನಗರದ ಸೈಬರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಎಫ್‌ಐಆರ್ ದಾಖಲಿಸುವಂತೆ ಸೈಬರ್ ಕ್ರೈಮ್‌ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಜುಲೈ 31ರಂದು ನಗರದ ಎಸಿಎಂಎಂ ನ್ಯಾಯಾಲಯ ‌ನಿರ್ದೇಶನ ನೀಡಿತ್ತು. ಮಧುಪೂರ್ಣಿಮಾ ಕಿಶ್ವರ್ ವಿರುದ್ಧ ಕ್ರಮ ಜರುಗಿಸುವಂತೆ ಕೋರಿಜನಾಧಿಕಾರ ಸಂಘರ್ಷ ಪರಿಷತ್ (ಸರ್ಕಾರೇತರ ಸಂಸ್ಥೆ) 2019 ಜುಲೈ 4ರಂದು ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿತ್ತು.

ಜೂನ್‌ 2ರಂದು ಮಧುಪೂರ್ಣಿಮಾ ಕಿಶ್ವರ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಮಹಾತ್ಮ ಗಾಂಧಿ ಹಾಗೂ ಜವಾಹರಲಾಲ್ ನೆಹರು ಅವರು ಸಲಿಂಗ ಕಾಮಿಗಳೆಂದು ಅರ್ಥ ಬರುವ ರೀತಿಯಲ್ಲಿ ಅಸಭ್ಯವಾಗಿ ಬರೆದಿದ್ದಾರೆ ಎಂದು ಪರಿಷತ್‌ನ ಆದರ್ಶ್ ಆರ್. ಅಯ್ಯರ್ ಅವರು 2019 ಜೂನ್‌ 19ರಂದು ಸೈಬರ್ ಕ್ರೈಮ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ, ಸಾಮಾಜಿಕ ಜಾಲತಾಣಗಳಿಗೆ ಸಂಬಂಧಿಸಿ ಇಂಥ ಹಲವು ದೂರುಗಳು ಬರುತ್ತಿವೆ ಎಂದು ಸೈಬರ್‌ ಠಾಣೆ ಪೊಲೀಸರು ಈ ಬಗ್ಗೆ ಹೆಚ್ಚು ಗಮನಹರಿಸಿರಲಿಲ್ಲ. ಹೀಗಾಗಿ, ಪರಿಷತ್‌ ನ್ಯಾಯಾಲಯಕ್ಕೆ ದೂರು ನೀಡಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.