ಬೆಂಗಳೂರು: ಮಿಟ್ಟಗಾನಹಳ್ಳಿ ಭೂ ಭರ್ತಿ ಪ್ರದೇಶದಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ (ಬಿಎಸ್‌ಡಬ್ಲ್ಯುಎಂಎಲ್) ಭರವಸೆ ನೀಡಿದ್ದು, ಕಾಂಪ್ಯಾಕ್ಟರ್‌ಗಳಲ್ಲಿನ ತ್ಯಾಜ್ಯ ವಿಲೇವಾರಿ ಶನಿವಾರ ಆರಂಭವಾಗಿದೆ.
‘ಅವೈಜ್ಞಾನಿಕವಾಗಿ ಎಲ್ಲ ರೀತಿಯ ತ್ಯಾಜ್ಯವನ್ನು ತಂದು ಸರಿಯಲಾಗುತ್ತಿದೆ. ದುರ್ನಾತದ ಜೊತೆಗೆ ದ್ರವತ್ಯಾಜ್ಯದ ಸಮಸ್ಯೆ ಹೆಚ್ಚಾಗಿದೆ. ಇವುಗಳಿಗೆ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿ ಕಣ್ಣೂರು ಗ್ರಾಮ ಪಂಚಾಯಿತಿ ಸದಸ್ಯರು ಮಿಟ್ಟಗಾನಹಳ್ಳಿ ಭೂಭರ್ತಿ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ ಪ್ರಕ್ರಿಯೆಯನ್ನು ಮಂಗಳವಾರದಿಂದ (ಮಾರ್ಚ್ 11) ತಡೆಹಿಡಿದಿದ್ದರು.
ಶಾಸಕರು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಅಧಿಕಾರಿಗಳೊಂದಿಗೆ ಬಿಎಸ್‌ಡಬ್ಲ್ಯುಎಂಎಲ್ ಅಧಿಕಾರಿಗಳು ಮೂರು ದಿನದಿಂದ ನಡೆಸಿದ್ದ ಮಾತುಕತೆ ಬಹುತೇಕ ಫಲ ನೀಡಿದೆ. ಶನಿವಾರ ಮಧ್ಯಾಹ್ನ ಕಾಂಪ್ಯಾಕ್ಟರ್‌ಗಳಲ್ಲಿನ ತ್ಯಾಜ್ಯವನ್ನು ಭೂಭರ್ತಿಗೆ ಸುರಿಯುವ ಕಾರ್ಯ ಆರಂಭವಾಗಿದೆ.
‘ಮಿಟ್ಟಗಾನಹಳ್ಳಿ ಭೂಭರ್ತಿ ಪ್ರದೇಶದಲ್ಲಿರುವ ದ್ರವತ್ಯಾಜ್ಯವನ್ನು ಹೊರಹಾಕಬೇಕು, ಸುತ್ತಮುತ್ತಲಿನ ಕೆರೆಗಳಲ್ಲಿರುವ ದ್ರವತ್ಯಾಜ್ಯದ ಜೊತೆಗೆ ಹೂಳು ತೆಗೆದು ಅಭಿವೃದ್ಧಿ ಮಾಡಿಕೊಡಬೇಕು, ಭೂಭರ್ತಿ ಪ್ರದೇಶದ ಸುತ್ತಮುತ್ತಲಿನ ಹಳ್ಳಿಗಳಿಗೆ ಮೂಲಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಲಾಗಿತ್ತು.
‘ಈ ಬೇಡಿಕೆಗಳಿಗೆ ಬಿಎಸ್‌ಡಬ್ಲ್ಯುಎಂಎಲ್ ಅಧಿಕಾರಿಗಳು ಬಹುತೇಕ ಒಪ್ಪಿದ್ದಾರೆ’ ಎಂದು ಕಣ್ಣೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್. ಅಶೋಕ್ ತಿಳಿಸಿದರು.
‘ಭರವಸೆಗಳ ಬಗ್ಗೆ ಮಾತಿನ ಆಶ್ವಾಸನೆ ಬೇಡ, ಸರ್ಕಾರಿ ಆದೇಶವಾಗಲಿ ಎಂದು ನಾವು ಪಟ್ಟು ಹಿಡಿದಿದ್ದೇವೆ. ಅದಕ್ಕೆ ಸಮಯಾವಕಾಶ ಬೇಕು ಎಂದು ಕೇಳಿದ್ದಾರೆ’ ಎಂದು ತಿಳಿಸಿದರು.
‘ಮಿಟ್ಟಗಾನಹಳ್ಳಿ ಭೂಭರ್ತಿ ಪ್ರದೇಶದಲ್ಲಿ ಕಾಂಪ್ಯಾಕ್ಟರ್‌ಗಳು ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದು, ನಗರದ ಕೆಲವು ಭಾಗಗಳಲ್ಲಿ ಉಳಿದಿರುವ ಕಸವನ್ನು ಇನ್ನೆರಡು ದಿನಗಳಲ್ಲಿ ಸ್ವಚ್ಛಗೊಳಿಸುತ್ತೇವೆ. ಸೋಮವಾರದ ನಂತರ ತ್ಯಾಜ್ಯ ವಿಲೇವಾರಿ ಕಾರ್ಯ ಸಾಮಾನ್ಯ ಸ್ಥಿತಿಗೆ ಮರಳಲಿದೆ’ ಎಂದು ಬಿಎಸ್‌ಡಬ್ಲ್ಯುಎಂಎಲ್ ಅಧಿಕಾರಿಗಳು ತಿಳಿಸಿದರು.
‘ಮಿಟ್ಟಗಾನಹಳ್ಳಿ ಭೂಭರ್ತಿ ಪ್ರದೇಶ ಸುತ್ತಲಿರುವ ಮಿಟ್ಟಗಾನಹಳ್ಳಿ ಬೆಳ್ಳಹಳ್ಳಿ ಕಣ್ಣೂರು ಬಂಡೆ ಹೊಸೂರಿಗೆ ಕಾವೇರಿ ನೀರು ಸರಬರಾಜು ಮಾಡಬೇಕು ಎಂದು ಒತ್ತಾಯಿಸಿದ್ದೇವೆ’ ಎಂದು ಕಣ್ಣೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್. ಅಶೋಕ್ ತಿಳಿಸಿದರು. ‘ಬಿಬಿಎಂಪಿ ವ್ಯಾಪ್ತಿಯಲ್ಲಿ ಇಲ್ಲದ ಕಾರಣ ನೀರು ಕೊಡಲು ಸಾಧ್ಯವಿಲ್ಲ ಎಂದಿದ್ದಾರೆ. ನಗರದ ಕಸವನ್ನು ಸುರಿದು ಕೆರೆ ಅಂತರ್ಜಲ ಸೇರಿದಂತೆ ಜಲಮೂಲಗಳನ್ನು ಹಾಳು ಮಾಡಿದ್ದೀರಿ. ಕುಡಿಯಲು ನೀರು ಕೊಡಲೇಬೇಕು ಎಂದು ಆಗ್ರಹಿಸಿದ್ದೇವೆ. ಇದು ಸರ್ಕಾರದ ಮಟ್ಟದಲ್ಲಿ ನಿರ್ಧಾರವಾಗಬೇಕಿದೆ. ಅದಕ್ಕೂ ಸಮಯ ಬೇಕು ಎಂದು ಕೇಳಿದ್ದಾರೆ’ ಎಂದು ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.