ADVERTISEMENT

ವೆಬ್‌ಸೈಟ್‌: ರಿವಾರ್ಡ್‌ ಪಾಯಿಂಟ್ಸ್‌ಗೆ ಕನ್ನ ಹಾಕಿದ್ದ ಹ್ಯಾಕರ್‌ ಬಂಧನ!

ಐಐಐಟಿ ಓದಿದ್ದ ಆಂಧ್ರದ ಆರೋಪಿ ಸೆರೆ * ₹ 4.16 ಕೋಟಿ ಮೌಲ್ಯದ ವಸ್ತು ಜಪ್ತಿ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2023, 16:20 IST
Last Updated 12 ಸೆಪ್ಟೆಂಬರ್ 2023, 16:20 IST
ಲಕ್ಷ್ಮೀಪತಿ
ಲಕ್ಷ್ಮೀಪತಿ   

ಬೆಂಗಳೂರು: ವೆಬ್‌ಸೈಟ್‌ಗಳನ್ನು ಹ್ಯಾಕ್‌ ಮಾಡುವ ಮೂಲಕ ಗ್ರಾಹಕರ ರಿವಾರ್ಡ್‌ ಪಾಯಿಂಟ್ಸ್‌ಗೆ ಕನ್ನ ಹಾಕಿ, ₹4.16 ಕೋಟಿ ಮೌಲ್ಯದ ವಸ್ತು ಖರೀದಿಸಿದ್ದ ಆಂಧ್ರಪ್ರದೇಶ ಆರೋಪಿಯನ್ನು ಬೆಂಗಳೂರು ಆಗ್ನೇಯ ವಿಭಾಗದ ಸೈಬರ್‌ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಆಂಧ್ರದ ಚಿತ್ತೂರಿನ ಬೊಮ್ಮಲೂರು ಲಕ್ಷ್ಮೀಪತಿ ಬಂಧಿತ ಆರೋಪಿ. ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಶನ್‌ ಟೆಕ್ನಾಲಜಿಯಲ್ಲಿ (ಐಐಐಟಿ) ಆತ ಶಿಕ್ಷಣ ಪಡೆದುಕೊಂಡಿದ್ದ.

‘ಆರೋಪಿಯಿಂದ ₹3.40 ಕೋಟಿ ಮೊತ್ತದ 5 ಕೆ.ಜಿ ಚಿನ್ನಾಭರಣ, ₹21.80 ಲಕ್ಷದ 27 ಕೆ.ಜಿ ಬೆಳ್ಳಿ ಸಾಮಗ್ರಿ, ₹11.13 ಲಕ್ಷ ನಗದು, ವಿವಿಧ ಕಂಪನಿಗಳ ಏಳು ಬೈಕ್‌ಗಳು, ಫ್ಲಿಪ್​​ಕಾರ್ಟ್ ವ್ಯಾಲೆಟ್​ನಲ್ಲಿದ್ದ ₹26 ಲಕ್ಷ, ಅಮೆಜಾನ್ ವ್ಯಾಲೆಟ್​ನಿಂದ ₹3.50 ಲಕ್ಷ, ಎರಡು ಲ್ಯಾಪ್‌ಟಾಪ್, 3 ಮೊಬೈಲ್ ಜಪ್ತಿ ಮಾಡಿಕೊಳ್ಳಲಾಗಿದೆ. ಒಟ್ಟು ಮೌಲ್ಯ ₹4.16 ಕೋಟಿಯಷ್ಟಿದೆ’ ಎಂದು ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌ ದಯಾನಂದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ADVERTISEMENT

ನಗರದ ‘ರಿವಾರ್ಡ್ 360’ ಕಂಪನಿಗೆ ಸೇರಿದ ವೋಚರ್‌ಗಳನ್ನು ಗ್ರಾಹಕರು ಬಳಕೆ ಮಾಡುವುದಕ್ಕೆ ಮೊದಲು ಕಂ‍ಪನಿ ವೆಬ್‌ಸೈಟ್‌ ಹ್ಯಾಕ್‌ ಮಾಡಿ ಬಳಕೆ ಮಾಡಿಕೊಳ್ಳಲಾಗುತ್ತಿದ್ದ ಬಗ್ಗೆ ದೂರುಗಳು ಬಂದಿದ್ದವು. ಗ್ರಾಹಕರಿಗೆ ಮೋಸ ಎಸಗುತ್ತಿರುವ ಆರೋಪಿಯನ್ನು ಬಂಧಿಸುವಂತೆ ಕಂಪನಿಯ ನಿರ್ದೇಶಕರು ಜೂನ್‌ 24ರಂದು ಸೈಬರ್ ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

‘ಶಿಕ್ಷಣ ಪಡೆದ ಮೇಲೆ ಆರೋಪಿ ದುಬೈ, ಬೆಂಗಳೂರಿನ ವಿವಿಧ ಕಂಪನಿಗಳಲ್ಲಿ ಕೆಲಸ ಮಾಡಿದ್ದ. ತಂತ್ರಜ್ಞಾನ ಬಳಕೆಯಲ್ಲಿ ನೈಪುಣ್ಯ ಪಡೆದುಕೊಂಡಿದ್ದ. ವೆಬ್‌ಸೈಟ್‌ಗಳನ್ನು ಹ್ಯಾಕ್‌ ಮಾಡುವುದನ್ನು ಕಲಿತಿದ್ದ’ ಎಂದು ಕಮಿಷನರ್‌ ಮಾಹಿತಿ ನೀಡಿದರು.

‘ರಿವಾರ್ಡ್ 360 ಕಂಪನಿಯ ವೆಬ್‌ಸೈಟ್‌ ಅನ್ನು ನಿರಂತರವಾಗಿ ಪರಿಶೀಲಿಸುತ್ತಿದ್ದ ಆರೋಪಿ ಬಳಿಕ ಆ ರಿವಾರ್ಡ್‌ ಪಾಯಿಂಟ್ಸ್ ಅನ್ನು ತಾನೇ ಬಳಸಿಕೊಂಡಿದ್ದ. ಇ–ಕಾಮರ್ಸ್‌ ಕಂಪನಿಗಳ ಮೂಲಕ ಚಿನ್ನ, ಬೆಳ್ಳಿ ಸಾಮಗ್ರಿ, ಬೈಕ್‌, ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಖರೀಸಿದ್ದ’ ಎಂದು ತಿಳಿಸಿದರು.

ಹಲವು ಕೃತ್ಯ

‘ಆರೋಪಿಯು ರಿವಾರ್ಡ್‌ 360 ವೆಬ್‌ಸೈಟ್‌ ಜೊತೆಗೆ ವಿವಿಧ ಬ್ಯಾಂಕ್‌ ಹಾಗೂ ವಿವಿಧ ಕಂಪನಿಗಳ ಗ್ರಾಹಕರಿಗೆ ತಲುಪಬೇಕಿದ್ದ ರಿವಾರ್ಡ್ ಪಾಯಿಂಟ್ಸ್‌ ಅನ್ನು ತಾನೇ ಬಳಕೆ ಮಾಡಿಕೊಳ್ಳುತ್ತಿದ್ದ. ಆ ಕಂಪನಿಯವರು ದೂರು ನೀಡಿದ್ದು ತನಿಖೆ ಮುಂದುವರಿಸಲಾಗಿದೆ’ ಎಂದು ಗೊತ್ತಾಗಿದೆ.

ಬೆಂಗಳೂರಿನ ರಿವಾರ್ಡ್‌ 360 ಕಂಪನಿಯು ಖಾಸಗಿ ಬ್ಯಾಂಕ್‌ಗಳ ಜತೆಗೆ ಕಾರ್ಯನಿರ್ವಹಿಸುತ್ತಿದೆ. ಗ್ರಾಹಕರು ಬಳಸಿದ ಕ್ರೆಡಿಟ್‌ ಕಾರ್ಡ್‌ಗಳ ಪಾಯಿಂಟ್ಸ್‌ಗಳನ್ನು ಈ ಕಂಪನಿ ನಿರ್ವಹಣೆ ಮಾಡುತ್ತಿದ್ದು ಖರೀದಿ ಆಧರಿಸಿ ಅವರ ಹೆಸರಿಗೆ ಪಾಯಿಂಟ್ಸ್‌ ಹಾಕಲಾಗುತ್ತಿತ್ತು. ಗ್ರಾಹಕರ ಹೆಸರಿಗೆ ಸಂದಾಯವಾದ ಪಾಯಿಂಟ್ಸ್‌ ಅನ್ನು ಆರೋಪಿಯು ತನ್ನ ವೋಚರ್‌ಗೆ ಬದಲಾವಣೆ ಮಾಡಿಕೊಂಡು ಫ್ಲಿಪ್‌ಕಾರ್ಟ್‌ ಅಮೆಜಾನ್‌ ವಾಲೆಟ್‌ನಿಂದ ದುಬಾರಿ ಬೆಲೆಯ ವಸ್ತುಗಳನ್ನು ಖರೀದಿಸುತ್ತಿದ್ದ.

ಲಕ್ಷ್ಮೀಪತಿ ವಿದ್ಯಾರ್ಥಿಯಾಗಿದ್ದ ಅವಧಿಯಲ್ಲಿ ಬ್ಯಾಂಕ್‌ವೊಂದರಲ್ಲಿ ಡೆಬಿಟ್ ಕ್ರೆಡಿಟ್ ಕಾರ್ಡ್‌ ಪಡೆದುಕೊಂಡಿದ್ದ. ಆ ಬ್ಯಾಂಕ್‌ ಕಾರ್ಡ್‌ಗಳಿಗೆ ರಿವಾರ್ಡ್ ಪಾಯಿಂಟ್ಸ್‌ ಕೊಡಲು ನಿರಾಕರಿಸಿತ್ತು. ಆಗ ಬ್ಯಾಂಕ್‌ ಸರ್ವರ್‌ ಹ್ಯಾಕ್ ಮಾಡುವಂತಹ ಪ್ರೋಗ್ರಾಂ ಅಭಿವೃದ್ಧಿಪಡಿಸಿದ್ದ. ವೋಚರ್‌ಗಳನ್ನು ಡಿಜಿಟಲ್ ಕರೆನ್ಸಿಯಾಗಿಯೂ ಪರಿವರ್ತಿಸಿಕೊಳ್ಳುತ್ತಿದ್ದ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.