ADVERTISEMENT

ಹುಲಿ ಕೊಂದವರ ಸುಮ್ಮನೇ ಬಿಡಬೇಡಿ: ಅರಣ್ಯ ಸಿಬ್ಬಂದಿಗೆ ಸಿದ್ದರಾಮಯ್ಯ ಸೂಚನೆ

ಜವಾಬ್ದಾರಿಯಿಂದ ಕೆಲಸ ಮಾಡಿ: ಅರಣ್ಯ ಸಿಬ್ಬಂದಿಗೆ ಸಿದ್ದರಾಮಯ್ಯ ಸೂಚನೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 14:08 IST
Last Updated 8 ಅಕ್ಟೋಬರ್ 2025, 14:08 IST
71ನೇ ವನ್ಯಜೀವಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಸಿದ್ದರಾಮಯ್ಯ ಅವರು ದಸರಾದಲ್ಲಿ ಭಾಗಿಯಾಗಿದ್ದ ಭೀಮ ಆನೆಯ ಮಾವುತ ಗುಂಡಣ್ಣ ಅವರಿಗೆ ಪದಕ ಪ್ರದಾನ ಮಾಡಿದರು. ಅರಣ್ಯ ಇಲಾಖೆ ರಾಯಭಾರಿ ಅನಿಲ್ ಕುಂಬ್ಳೆ, ಸಚಿವ ಈಶ್ವರ ಖಂಡ್ರೆ ಪಾಲ್ಗೊಂಡಿದ್ದರು           ಪ್ರಜಾವಾಣಿ ಚಿತ್ರ
71ನೇ ವನ್ಯಜೀವಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಸಿದ್ದರಾಮಯ್ಯ ಅವರು ದಸರಾದಲ್ಲಿ ಭಾಗಿಯಾಗಿದ್ದ ಭೀಮ ಆನೆಯ ಮಾವುತ ಗುಂಡಣ್ಣ ಅವರಿಗೆ ಪದಕ ಪ್ರದಾನ ಮಾಡಿದರು. ಅರಣ್ಯ ಇಲಾಖೆ ರಾಯಭಾರಿ ಅನಿಲ್ ಕುಂಬ್ಳೆ, ಸಚಿವ ಈಶ್ವರ ಖಂಡ್ರೆ ಪಾಲ್ಗೊಂಡಿದ್ದರು           ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಹುಲಿ, ಆನೆ ಸೇರಿದಂತೆ ವನ್ಯಜೀವಿಗಳನ್ನು ಹತ್ಯೆ ಮಾಡಿದವರು ಎಷ್ಟೇ ಪ್ರಭಾವಿಗಳಿದ್ದರೂ, ಅವರನ್ನು ಸುಮ್ಮನೇ ಬಿಡಬೇಡಿ. ಅಂತಹವರಿಗೆ ಕಠಿಣ ಶಿಕ್ಷೆ ಆಗಲೇಬೇಕು. ಅರಣ್ಯ ಅಧಿಕಾರಿಗಳು ಹೆಚ್ಚು ಜವಾಬ್ದಾರಿಯಿಂದ ಕೆಲಸ ಮಾಡಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು.

ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಬುಧವಾರ ನಡೆದ 71ನೇ ವನ್ಯಜೀವಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಅರಣ್ಯ ಇಲಾಖೆಯ 25 ಸಿಬ್ಬಂದಿಗೆ ‘ಮುಖ್ಯಮಂತ್ರಿ ಪದಕ’ ಪ್ರದಾನ ಮಾಡಿದ ಬಳಿಕ ಅವರು ಮಾತನಾಡಿದರು.

‘ದೇಶದಲ್ಲೇ ಅತಿ ಹೆಚ್ಚು ಆನೆಗಳಿರುವ ರಾಜ್ಯ ನಮ್ಮದು. ಹುಲಿ, ಚಿರತೆ ಹೆಚ್ಚಿರುವ ಎರಡನೇ ರಾಜ್ಯವೂ ಹೌದು. ಆದರೆ, ವನ್ಯಜೀವಿ– ಮಾನವ ಸಂಘರ್ಷ ಪ್ರಕರಣಗಳು ಹೆಚ್ಚಾಗಿವೆ. ಹುಲಿ, ಆನೆಗಳನ್ನು ಹತ್ಯೆ ಮಾಡಲಾಗುತ್ತಿದೆ. ಕೆಲವೇ ದಿನಗಳಲ್ಲಿ ಆರು ಹುಲಿಗಳನ್ನು ವಿಷ ಹಾಕಿ ಕೊಲ್ಲಲಾಗಿದೆ. ದನ ಸಾಯಿಸಿದ ಕಾರಣಕ್ಕೆ, ಹುಲಿಯನ್ನೇ ಕೊಲ್ಲುವುದನ್ನು ಒಪ್ಪಲಾಗದು. ಅಂತಹವರ ವಿರುದ್ದ ಕಠಿಣ ಕ್ರಮ ಆಗಲೇಬೇಕು’ ಎಂದು ಹೇಳಿದರು.

ADVERTISEMENT

ಅರಣ್ಯ ಸಚಿವ ಈಶ್ವರ ಖಂಡ್ರೆ ಮಾತನಾಡಿ, ‘ರೈಲ್ವೆ ಬ್ಯಾರಿಕೇಡ್‌ ಅಳವಡಿಸುವ ಯೋಜನೆ ಸಿದ್ದಪಡಿಸಿ ಇದಕ್ಕೆ ಅನುದಾನ ಪಡೆದುಕೊಳ್ಳುತ್ತಿದ್ದೇವೆ. ಸೇಡಿನಿಂದ ಹುಲಿ ಹತ್ಯೆ ಮಾಡಿದ ಪ್ರಕರಣದಲ್ಲಿ ಈಗಾಗಲೇ ಹಲವರನ್ನು ಬಂಧಿಸಲಾಗಿದೆ. ಅಲ್ಲದೇ ಅರಣ್ಯದಂಚಿನಲ್ಲಿ ಸಂಘರ್ಷ ತಪ್ಪಿಸಲೆಂದೇ ಜನಸಂಪರ್ಕ ಸಭೆಗಳನ್ನು ಮಾಡುವಂತೆ ಸೂಚಿಸಿದ್ದೇವೆ’ ಎಂದರು.

ಅರಣ್ಯ, ವನ್ಯಜೀವಿ ರಾಯಭಾರಿಯಾಗಿ ನೇಮಕವಾಗಿರುವ ಕ್ರಿಕೆಟಿಗ ಅನಿಲ್ ಕುಂಬ್ಳೆ ಮತ್ತು ಅರಣ್ಯಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ ಒಡಂಬಡಿಕೆಗೆ ಸಹಿ ಹಾಕಿದರು. ವನ್ಯಜೀವಿ ಸಪ್ತಾಹದ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ಜಯಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಪೊಲೀಸರಿಗೆ ಇರುವ ಹಾಗೆ ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿಗೂ ರಾಷ್ಟ್ರಪತಿ ಪದಕ ನೀಡುವಂತೆ ರಾಜ್ಯ ಸರ್ಕಾರವು ಕೇಂದ್ರಕ್ಕೆ ಶಿಫಾರಸು ಮಾಡಬೇಕು
ಅನಿಲ್‌ ಕುಂಬ್ಳೆ ರಾಯಭಾರಿ ಅರಣ್ಯ ಇಲಾಖೆ

ಮುಖ್ಯಮಂತ್ರಿ ಪದಕ ಪುರಸ್ಕೃತರು

ಎಸ್‌.ಪ್ರಾಣೇಶ್‌(ಡಿಆರ್‌ಎಫ್‌ಒ ಬಳ್ಳಾರಿ) ಎಂ.ಕೆ.ಹೊನ್ನೂರಸ್ವಾಮಿ(ಡಿಆರ್‌ಎಫ್‌ಒ ವಿಜಯನಗರ) ಎಂ.ಪ್ರಕಾಶ್‌( ಅರಣ್ಯ ರಕ್ಷಕ ಬೆಂಗಳೂರು ಗ್ರಾಮಾಂತರ) ಎಂ.ಜೆ.ಅಶ್ವಿನ್‌( ಅರಣ್ಯ ರಕ್ಷಕ‌ ಬೆಂಗಳೂರು) ಪಿ.ಎಚ್‌.ಕಿರಣ್‌ಕುಮಾರ್‌(ಆರ್‌ಎಫ್‌ಒ ಕೋಲಾರ) ರಮೇಶ್‌ ಖೋತ್‌(ಅರಣ್ಯ ರಕ್ಷಕ ಬೆಳಗಾವಿ) ಸಂಜೀವ್‌ ಸಂಸುದ್ದಿ( ಆರ್‌ಎಫ್‌ಒ ಗೋಕಾಕ್‌)  ಗುರುರಾಜ್‌ ಗೌಡ(ಡಿಆರ್‌ಎಫ್‌ಒ ಉತ್ತರ ಕನ್ನಡ) ಶಿವಾನಂದ ನಿಂಗನಿ( ಆರ್‌ಎಫ್‌ಒ ಶಿರಸಿ) ವಿಠಲ್‌ ಬೀರಪ್ಪ ಶಿರಗಾವಿ( ಅರಣ್ಯ ರಕ್ಷಕ ಎಂಎಂಹಿಲ್ಸ್‌ ವಿಭಾಗ) ಸಿ.ಅನಿಲ್‌ಕುಮಾರ್‌( ಡಿಆರ್‌ಎಫ್ಒ ಕಾವೇರಿ ವನ್ಯಜೀವಿ ವಿಭಾಗ) ಖಲಂದರ್‌(ಆರ್‌ಎಫ್‌ಒ ಚಿಕ್ಕಮಗಳೂರು) ಹನುಮಂತಪ್ಪ ಉಪ್ಪಾರ(ಅರಣ್ಯ ರಕ್ಷಕ ಹಾವೇರಿ) ಶಿವಪ್ಪ ತಳವಾರ(ಡಿಆರ್‌ಎಫ್‌ಒ ಹಾವೇರಿ) ಸುಭಾಷ್‌ಕುಮಾರ್‌(ಡಿಆರ್‌ಎಫ್‌ಒ ಹಾಸನ) ಎಸ್‌.ಆರ್.ಅರ್ಜುನ್‌(ಡಿಆರ್‌ಎಫ್‌ಒ ಹಾಸನ) ಹಾವಪ್ಪ(ಡಿಆರ್‌ಎಫ್‌ಒ ಕಲಬುರಗಿ) ಐಶ್ವರ್ಯ ಗೌಡರ್‌(ಡಿಆರ್‌ಎಫ್‌ಒ ಕುಶಾಲನಗರ) ಸಚಿನ್‌ ನಿಂಬಾಳಕರ್‌(ಡಿಆರ್‌ಎಫ್‌ಒ ವಿರಾಜಪೇಟೆ) ಪಿ.ಜಿತೇಶ್‌(ಅರಣ್ಯ ರಕ್ಷಕ ಮಂಗಳೂರು) ಗುಂಡಣ್ಣ( ಆನೆ ಮಾವುತ ನಾಗರಹೊಳೆ) ಸಿದ್ದರಾಜು( ಆರ್‌ಎಫ್‌ಒ ನಾಗರಹೊಳೆ) ಪ್ರದೀಪ್‌ ಎಂ ನಾಯ್ಕ್‌ ಎಂ.ಸಲೀಂ(ಅರಣ್ಯ ರಕ್ಷಕರು ಶಿವಮೊಗ್ಗ) ಡಾ.ರಮೇಶ್‌(ಪಶುವೈದ್ಯ ನಾಗರಹೊಳೆ).

ಗಸ್ತು ವನಪಾಲಕರ ಆಯ್ಕೆ ಪಟ್ಟಿ 

ಅರಣ್ಯ ಇಲಾಖೆಯ ಗಸ್ತು ವನಪಾಲಕರ ಹುದ್ದೆಗಳಿಗೆ ಆಯ್ಕೆಯಾಗಿರುವ 514 ಮಂದಿಯ ಪಟ್ಟಿಯನ್ನು ಸಿದ್ದರಾಮಯ್ಯ ಬಿಡುಗಡೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.