
ಬಂಧನ
(ಸಾಂದರ್ಭಿಕ ಚಿತ್ರ)
ಬೆಂಗಳೂರು: ಕೆಲಸ ಮಾಡುತ್ತಿದ್ದ ಮಾಲೀಕನ ಮನೆಯಲ್ಲಿ ಪತಿಯ ಚಿಕಿತ್ಸೆಗೆಂದು ಚಿನ್ನಾಭರಣ ಕಳ್ಳತನ ಮಾಡಿದ್ದ ಮಹಿಳೆಯನ್ನು ಜೆ.ಬಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆಯ ಚೈತ್ರಾ (32) ಎಂಬಾಕೆಯನ್ನು ಬಂಧಿಸಿ, ₹35 ಲಕ್ಷ ಮೌಲ್ಯದ 12.5 ಕೆ.ಜಿ ಬೆಳ್ಳಿ ಸಾಮಗ್ರಿ, 7.5 ಗ್ರಾಂ ಚಿನ್ನದ ಓಲೆ ವಶಕ್ಕೆ ಪಡೆದಿದ್ದಾರೆ.
ಚಲ್ಲಘಟ್ಟದ ಅಪಾರ್ಟ್‌ಮೆಂಟ್ ನಿವಾಸಿ ಪೂರ್ಣಿಮಾ ಶಂಕರ್ ಎಂಬುವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ, ಒಂದು ವರ್ಷದಿಂದ ಹಂತ ಹಂತವಾಗಿ ಮನೆಯಲ್ಲಿದ್ದ ಪೂಜಾ ಸಾಮಗ್ರಿ, ಬೆಳ್ಳಿ ಪಾತ್ರೆ ಹಾಗೂ 7.5 ಗ್ರಾಂ ಚಿನ್ನದ ಓಲೆಗಳನ್ನು ಕಳವು ಮಾಡಿದ್ದರು.
ಮನೆ ಮಾಲೀಕರು ಬೆಳ್ಳಿಯ ಸಾಮಗ್ರಿಗಳನ್ನು ಕೇವಲ ಹಬ್ಬದ ಸಂದರ್ಭಗಳಲ್ಲಿ ಹೊರತೆಗೆಯುತ್ತಿದ್ದರು. ಇದೇ ಅವಕಾಶವನ್ನು ಬಳಸಿಕೊಂಡಿದ್ದ ಆರೋಪಿ, ಮಾಲೀಕರಿಗೆ ತಿಳಿಯದಂತೆ ಮಹಡಿಯಲ್ಲಿದ್ದ ಬೆಳ್ಳಿ ಸಾಮಗ್ರಿಗಳನ್ನು ಕಳವು ಮಾಡಿದ್ದರು. ದೀಪಾವಳಿ ಹಬ್ಬಕ್ಕೂ ಮುನ್ನ ಕೆಲಸ ಬಿಟ್ಟಿದ್ದರು. ಹಬ್ಬದ ಪೂಜೆಗಾಗಿ ಮನೆಯವರು ಬೆಳ್ಳಿ ಪಾತ್ರೆಗಳಿದ್ದ ಚೀಲವನ್ನು ತೆರೆದಾಗ ಕಳ್ಳತನದ ಕೃತ್ಯ ಬಯಲಾಗಿದೆ ಎಂದು ಪೊಲೀಸರು ತಿಳಿಸಿದರು.
ಪ್ರಕರಣ ದಾಖಲಿಸಿಕೊಂಡು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡ ಪೊಲೀಸರು, ಚನ್ನಗಿರಿ ತಾಲ್ಲೂಕಿನ ಕಣಿವೆ ಬಿಳಚಿ ಗ್ರಾಮದ ವಾಸದ ಮನೆಯಿಂದ ಕೆಲಸದಾಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ಪತಿ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಕಾರಣ ಚಿಕಿತ್ಸೆಗೆ ಹಣದ ಅವಶ್ಯಕತೆ ಇತ್ತು. ಹಾಗಾಗಿ ಬೆಳ್ಳಿ, ಚಿನ್ನದ ಸಾಮಗ್ರಿ ಕಳ್ಳತನ ಮಾಡಿ, ಅವುಗಳನ್ನು ಅಡವಿಟ್ಟು ಹಣ ಪಡೆದಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.