
ವಿಶ್ವ ಕ್ಯಾನ್ಸರ್ ದಿನ
ಬೆಂಗಳೂರು: ವಿಶ್ವ ಕ್ಯಾನ್ಸರ್ ದಿನದ ಪ್ರಯುಕ್ತ, ಕ್ಯಾನ್ಸರ್ ಅನ್ನು ಆರಂಭದಲ್ಲಿಯೇ ಪತ್ತೆಹಚ್ಚಿ ತಡೆಗಟ್ಟುವ ಕುರಿತು ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ‘ನಾವು ಮಾಡಬಲ್ಲೆವು-ನಾನೂ ಮಾಡಬಲ್ಲೆ‘ ಶೀರ್ಷಿಕೆಯಡಿ ಯಲಹಂಕದ ಸ್ಪರ್ಶ್ ಆಸ್ಪತ್ರೆಯಿಂದ 7ಕೆ ವಾಕಥಾನ್ ಆಯೋಜಿಸಲಾಗಿತ್ತು.
ಈ ಬಾರಿಯ ವಿಶ್ವ ಕ್ಯಾನ್ಸರ್ ದಿನದ ಘೋಷ ವಾಕ್ಯ ‘ವಿಶಿಷ್ಟತೆಯೊಂದಿಗೆ ಒಂದಾಗಿ‘ ಫಲಕಗಳೊಂದಿಗೆ ಕ್ಯಾನ್ಸರ್ ಕುರಿತಾದ ಸಂದೇಶಗಳನ್ನು ಹೊತ್ತ ಫಲಕಗಳೊಂದಿಗೆ ಐಎಂಎ ಯಲಹಂಕ ಘಟಕದ ವೈದ್ಯರು, ಸ್ಪರ್ಶ್ ಆಸ್ಪತ್ರೆ ತಜ್ಞರು, ಸಮಾಲೋಚಕರು, ದಾದಿಯರು, ಆರೋಗ್ಯ ಸೇವಾ ಸಿಬ್ಬಂದಿ ಹಾಗೂ ಸಾರ್ವಜನಿಕರು ವಾಕಥಾನ್‌ನಲ್ಲಿ ಪಾಲ್ಗೊಂಡಿದ್ದರು.
ಕ್ಯಾನ್ಸರ್ ತಡೆಗಟ್ಟುವುದು, ಆರಂಭದಲ್ಲೇ ರೋಗ ಪತ್ತೆ ಹಚ್ಚುವುದು ಹಾಗೂ ಸೂಕ್ತ ಸಮಯಕ್ಕೆ ಚಿಕಿತ್ಸೆ ಪಡೆದುಕೊಳ್ಳುವುದು ಮುಂತಾದವುಗಳ ಕುರಿತು ವಾಕಥಾನ್ ವೇಳೆ ಜಾಗೃತಿ ಮೂಡಿಸಲಾಯಿತು.
ಸ್ಪರ್ಶ್ ಆಸ್ಪತ್ರೆ ಸಮೂಹದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಭಿಷೇಕ್ ಥಾಮಸ್ ಮಾತನಾಡಿ, ಕ್ಯಾನ್ಸರ್ ತಡೆಗಟ್ಟುವಲ್ಲಿ ಸಮುದಾಯದ ಪಾತ್ರ ಅತಿ ಮುಖ್ಯ. ಕ್ಯಾನ್ಸರ್ ಜಾಗೃತಿಯು ಕೇವಲ ಆಸ್ಪತ್ರೆಗೆ ಮಾತ್ರ ಸೀಮಿತವಾಗಿರದೇ ಇದು ಸಮಾಜದಲ್ಲಿ ಮತ್ತು ಕುಟುಂಬಗಳಲ್ಲಿ ಆಗಬೇಕು. ಮುನ್ನೆಚ್ಚರಿಕೆಯ ಜೀವನ ಶೈಲಿ, ಆಗಾಗ ತಪಾಸಣೆ ಹಾಗೂ ಸೂಕ್ತ ಸಮಯಕ್ಕೆ ವೈದ್ಯಕೀಯ ಸಮಾಲೋಚನೆ ಮೊದಲಾದ ಅಂಶಗಳು ಕ್ಯಾನ್ಸರ್ ವಿಷಮ ಸ್ಥಿತಿಗೆ ತಲುಪುವುದನ್ನು ತಡೆಗಟ್ಟಲಿದೆ. ಕ್ಯಾನ್ಸರ್ ಮುಂದುವರಿದ ಹಂತದಲ್ಲಿ ಚಿಕಿತ್ಸೆಯ ಒತ್ತಡವನ್ನು ಕಡಿಮೆ ಮಾಡುತ್ತದೆ. ಈ ನಿಟ್ಟಿನಲ್ಲಿ ವಾಕಥಾನ್‌ನಂತಹ ಪ್ರಯತ್ನಗಳು ಸಂಘಟಿತ ಜವಾಬ್ಧಾರಿಯ ಕುರಿತು ಮನವರಿಕೆ ಮಾಡಿಕೊಡುವುದರೊಂದಿಗೆ ಆರೋಗ್ಯಕರ ಭವಿಷ್ಯವನ್ನು ರೂಪಿಸುವಲ್ಲಿಯೂ ಸಹಾಯ ಮಾಡುತ್ತದೆ ಎಂದರು.
ವಾಕಥಾನ್‌ನಲ್ಲಿ ಡಾ. ಮನೀಷ್ ಕುಮಾರ್, ಕ್ಯಾನ್ಸರ್ ವಿಭಾಗದ ಹಿರಿಯ ವೈದ್ಯಕೀಯ ಸಮಾಲೋಚಕರಾದ ಡಾ.ಪಳನಿಯಪ್ಪನ್ ರಾಮನಾಥನ್, ಕ್ಯಾನ್ಸರ್ ಶಸ್ತ್ರ ಚಿಕಿತ್ಸಾ ವಿಭಾಗದ ಹಿರಿಯ ಸಮಾಲೋಚಕಿ ಡಾ.ಪಿ.ಶಶಿಕಲಾ, ಡಾ.ಚಂದ್ರಕಲಾ.ಎಸ್, ಡಾ. ಸ್ಮಿತಾ ಶೇಖರ್ ಮೊದಲಾದವರು ಭಾಗವಹಿಸಿ ಆರಂಭಿಕ ರೋಗ ಪತ್ತೆಯು ಹೇಗೆ ಚಿಕಿತ್ಸೆ ಯಶಸ್ವಿಯಾಗುವುದಕ್ಕೆ ಮತ್ತು ರೋಗಿ ಜೀವಕ್ಕೆ ಅಪಾಯಕಾರಿಯಾಗಬಲ್ಲ ಸನ್ನಿವೇಶದಿಂದ ಪಾರು ಮಾಡುವುದಕ್ಕೆ ಸಹಾಯಕವಾಗಬಹುದು ಎಂಬುದರ ಕುರಿತು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.