ADVERTISEMENT

ಹಿಂದೂ ಪದ ಅತ್ಯಂತ ಅಪಾಯಕಾರಿ: ಸಾಹಿತಿ ಕುಂ. ವೀರಭದ್ರಪ್ಪ ಕಳವಳ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2022, 12:34 IST
Last Updated 31 ಮಾರ್ಚ್ 2022, 12:34 IST
ಕುಂ. ವೀರಭದ್ರಪ್ಪ
ಕುಂ. ವೀರಭದ್ರಪ್ಪ   

ಬೆಂಗಳೂರು: ‘ಹಿಂದೂ ಎನ್ನುವುದು 1824ರಲ್ಲಿ ಬಳಕೆಗೆ ಬಂದ ಅತ್ಯಂತ ಅಪಾಯಕಾರಿ ಶಬ್ದ. ನಾನು ಹಿಂದೂ ಅಲ್ಲ’ ಎಂದು ಸಾಹಿತಿ ಕುಂ. ವೀರಭದ್ರಪ್ಪ ತಿಳಿಸಿದರು.

ಲೋಕನಾಯಕ ಜೆ.ಪಿ. ವಿಚಾರ ವೇದಿಕೆ ನಗರದಲ್ಲಿ ಗುರುವಾರ ಆಯೋಜಿಸಿದ ‘ಸರ್ವ ಜನಾಂಗದ ಶಾಂತಿಯ ತೋಟ: ಒಂದು ಭಾವೈಕ್ಯತೆಯ ಚರ್ಚೆ’ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.‘ಭಾರತ ವೈವಿಧ್ಯಮಯವಾದ ದೇಶ. ನಾವೆಲ್ಲ ಹಿಂದೂ ಎಂದು ಹೇಳುವುದು ಸರಿಯಲ್ಲ. ಲಿಂಗಾಯತನಾಗಿರುವ ನಾನು, ಬಸವಣ್ಣನ ಅನುಯಾಯಿ. ಹಿಂದೂ ಅಲ್ಲ ಎಂಬ ನನ್ನ ಹೇಳಿಕೆ ಮೇಲೆ ಪ್ರಕರಣ ದಾಖಲಿಸಿದರೂ ನಮ್ಮ ಪರವಾಗಿ ಹೋರಾಡಲು ನ್ಯಾಯಾಧೀಶರಿದ್ದಾರೆ. ಇತ್ತೀಚೆಗೆ ಬಂದಿರುವ ಹಿಂದೂ ಪದ ಅತ್ಯಂತ ಅಪಾಯಕಾರಿ’ ಎಂದರು.

‘ಮಹಮ್ಮದ್ ಘೋರಿ ಮತ್ತು ಮಹಮ್ಮದ್ ಘಜ್ನಿ ದೇಶದ ಮೇಲೆ ನಿರಂತರ ದಾಳಿ ಮಾಡಿ, ಕೆಲವೇ ವರ್ಗದವರು ದೇವಸ್ಥಾನಗಳಲ್ಲಿ ಬಚ್ಚಿಟ್ಟಿದ್ದ ಕಪ್ಪು ಹಣವನ್ನು ದೋಚಿದರು. ಅದಾದ ನಂತರ ನಮ್ಮ ದೇಶವನ್ನು ಸುಮಾರು 300 ವರ್ಷ ಅನಕ್ಷರಸ್ಥ ಗುಲಾಮರು ಆಳಿದ್ದಾರೆ. ಕುತುಬುದ್ದೀನ್ ಐಬಕ್, ಅಲ್ತಮಷ್ ಮತ್ತಿತರರು ಅನಕ್ಷರಸ್ಥರಾಗಿದ್ದರೂ ದೇಶ ನಿರ್ಮಾಣದಲ್ಲಿ ಶ್ರಮಿಸಿದರು. ಔರಂಗಜೇಬ್ ಕುರಾನಿಗೆ ಬದ್ಧನಾಗಿದ್ದ ಚಕ್ರವರ್ತಿಯಾಗಿದ್ದು, ಸಮಾಜವಾದಿಯೂ ಆಗಿದ್ದನು. ಇವನ ಸಮಾಧಿ ಬಹಳ ಸರಳವಾಗಿದೆ. ಈ ಬಗ್ಗೆ ಕಾದಂಬರಿ ಬರೆಯಬೇಕು ಅಂದುಕೊಂಡಿದ್ದೇನೆ’ ಎಂದು ವಿವರಿಸಿದರು.

ADVERTISEMENT

‘ನಮ್ಮಲ್ಲಿ ನಾಥೂರಾಮ್ ಗೋಡ್ಸೆ, ಹೆಗ್ಡೆವಾರ್ ಸೇರಿದಂತೆ ಅನೇಕ ತರಹದ ದೆವ್ವಗಳಿವೆ. ಕೆಲವರು ದೆವ್ವಗಳು ಹೊಕ್ಕಾಗ ಮಾತ್ರ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ರೇಣುಕಾಚಾರ್ಯ, ತೇಜಸ್ವಿ ಸೂರ್ಯ, ಬಸವರಾಜ ಯತ್ನಾಳ್ ಇವರೆಲ್ಲರೂ ದೆವ್ವಗಳು ಹೊಕ್ಕಾಗ ಮುಸ್ಲಿಂ ವಿರೋಧಿಯಂತೆ ವರ್ತಿಸುತ್ತಾರೆ. ಹಿಜಾಬ್ ತಲೆ ಮೇಲಿನ ಒಂದು ವಸ್ತ್ರ. ಹಲಾಲ್ ಕಟ್ ಎನ್ನುವುದು ಮಾಂಸ ಖಾದ್ಯ ಸಿದ್ಧಪಡಿಸುವ ಒಂದು ವಿಧ. ಹಲಾಲ್ ಕಟ್ ಮತ್ತು ಹಿಜಾಬ್ ಇವೆರಡೂ ಈಗ ಭಯಂಕರ ವಿದ್ಯಮಾನವಾಗಿ ಬೆಳೆದು ನಿಂತಿದೆ. ಇದು ಜಾತೀಯತೆ ಮತ್ತು ಸರ್ವಾಧಿಕಾರದ ಮೊದಲ ಹೆಜ್ಜೆ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.