ADVERTISEMENT

ಅನಾಥ ಶಿಶುವಿಗೆ ಹಾಲುಣಿಸಿದ ಕಾನ್‌ಸ್ಟೆಬಲ್

ಹೆರಿಗೆ ರಜೆ ಮುಗಿಸಿ ಕರ್ತವ್ಯಕ್ಕೆ ಹಾಜರಾಗಿದ್ದರು ‘ಖಾಕಿ ಒಳಗಿನ ತಾಯಿ ಸಂಗೀತಾ’

​ಪ್ರಜಾವಾಣಿ ವಾರ್ತೆ
Published 18 ಜನವರಿ 2019, 4:37 IST
Last Updated 18 ಜನವರಿ 2019, 4:37 IST
ಕಾನ್‌ಸ್ಟೆಬಲ್ ಸಂಗೀತಾ ಮಡಿಲಲ್ಲಿ ಶಿಶು
ಕಾನ್‌ಸ್ಟೆಬಲ್ ಸಂಗೀತಾ ಮಡಿಲಲ್ಲಿ ಶಿಶು   

ಬೆಂಗಳೂರು: ಯಲಹಂಕ ಠಾಣೆಯ ಮಹಿಳಾ ಕಾನ್‌ಸ್ಟೆಬಲ್ ಸಂಗೀತಾ ಎಸ್. ಹಳಿಮನಿ (25) ಅವರು ಅನಾಥ ನವಜಾತ ಹೆಣ್ಣು ಶಿಶುವಿಗೆ ಹಾಲುಣಿಸುವ ಮೂಲಕ, ಆ ಶಿಶುವಿನ ಪ್ರಾಣ ಉಳಿಸಿದ್ದಾರೆ.

ಯಲಹಂಕ ಸಮೀಪದ ಚಿಕ್ಕಬೆಟ್ಟಹಳ್ಳಿ ಕಡೆಯಿಂದ ತಿಂಡ್ಲು ಕಡೆಗೆ ಹೋಗುವ ಜಿ.ಕೆ.ವಿ.ಕೆ ರಸ್ತೆಯ ಪಕ್ಕದಲ್ಲಿ ಬುಧವಾರ ಬೆಳಿಗ್ಗೆ
ಮಗು ಅಳುತ್ತಿದ್ದುದು ಕೇಳಿಸುತ್ತಿತ್ತು. ಸ್ಥಳೀಯರು ಪೊದೆ ಬಳಿ ಹೋಗಿ ನೋಡಿದಾಗ ಶಿಶು ಕಾಣಿಸಿತ್ತು.

ಸ್ಥಳೀಯ ನಿವಾಸಿಗಳು ಹಾಗೂ ಸಿವಿಲ್ ಡಿಫೆನ್ಸ್ ಸಿಬ್ಬಂದಿ, ಶಿಶುವನ್ನು ಆಂಬುಲೆನ್ಸ್‌ನಲ್ಲಿ ಯಲಹಂಕ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆ ಸಂಬಂಧ ಯಲಹಂಕ ಠಾಣೆಗೂ ಕರೆ ಮಾಡಿ ವಿಷಯ ತಿಳಿಸಿದ್ದರು.

ಠಾಣೆಯ ಇನ್‌ಸ್ಪೆಕ್ಟರ್‌, ಕಾನ್‌ಸ್ಟೆಬಲ್ ಸಂಗೀತಾ ಹಾಗೂ ಸಹೋದ್ಯೋಗಿಯೊಬ್ಬರನ್ನು ಹೊಯ್ಸಳ ಗಸ್ತು ವಾಹನದಲ್ಲಿ
ಆಸ್ಪತ್ರೆಗೆ ಕಳುಹಿಸಿದ್ದರು.

ಆಸ್ಪತ್ರೆಯಲ್ಲಿದ್ದ ಶಿಶು, ಹಸಿವಿನಿಂದಾಗಿ ಅಳುತ್ತಿತ್ತು. ವೈದ್ಯರು, ಚಿಕಿತ್ಸೆ ನೀಡಿದರೂ ಸುಮ್ಮನಾಗಿರಲಿಲ್ಲ. ಅಳು ಕೇಳಿಸಿಕೊಂಡು ಮರುಕಪಟ್ಟ ಸಂಗೀತಾ, ಶಿಶುವನ್ನು ಮಡಿಲಲ್ಲಿ ಮಲಗಿಸಿಕೊಂಡು ಆಸ್ಪತ್ರೆಯ ಬೆಡ್‌ ಮೇಲೆ ಕುಳಿತು ಹಾಲುಣಿಸಿದರು. ಬಳಿಕ ಶಿಶು ಅಳುವುದನ್ನು ನಿಲ್ಲಿಸಿತು. ಕಾನ್‌ಸ್ಟೆಬಲ್ ಒಳಗಿನ ತಾಯಿ ಹೃದಯವನ್ನು ಕಂಡ ವೈದ್ಯರು ಹಾಗೂ ಸಹೋದ್ಯೋಗಿಯ ಕಣ್ಣುಗಳು ಒದ್ದೆಯಾದವು.

2.4 ಕೆ.ಜಿ ಇರುವ ಶಿಶುವಿನ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಾಣಿಸುತ್ತಿದ್ದಂತೆ, ಅದನ್ನು ವಾಣಿವಿಲಾಸ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸದ್ಯ ಮಗು ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಅನಾಥ ಶಿಶುವಿಗೆ ಕಾನ್‌ಸ್ಟೆಬಲ್ ಹಾಲುಣಿಸಿದ ಸುದ್ದಿ ಹರಡುತ್ತಿದ್ದಂತೆ, ಇಲಾಖೆಯ ಹಿರಿಯ ಅಧಿಕಾರಿಗಳು ಕಾನ್‌ಸ್ಟೆಬಲ್ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಖಾಕಿ ಒಳಗಿನ ತಾಯಿ ಸಂಗೀತಾ’ ಎಂದು ಹೊಗಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಮೆಚ್ಚುಗೆ ವ್ಯಕ್ತವಾಗಿದೆ.

ಹೆರಿಗೆ ರಜೆ ಮುಗಿಸಿ ಬಂದಿದ್ದ ಸಂಗೀತಾ: ಕಾನ್‌ಸ್ಟೆಬಲ್ ಸಂಗೀತಾ ಅವರಿಗೂ 10 ತಿಂಗಳ ಹೆಣ್ಣು ಮಗು ಇದೆ. ಹೆರಿಗೆ ರಜೆ ಮುಗಿಸಿದ್ದ ಅವರು ತಿಂಗಳ ಹಿಂದಷ್ಟೇ ಕರ್ತವ್ಯಕ್ಕೆ ಹಾಜರಾಗಿದ್ದರು. ಅನಾಥ ಶಿಶುವಿಗೆ ಹಾಲುಣಿಸಿ ಮಾನವೀಯತೆ ಮೆರೆದಿದ್ದಾರೆ.

‘ಪ್ರಜಾವಾಣಿ’ ಜೊತೆ ಮಾತನಾಡಿದ ಸಂಗೀತಾ, ‘ಶಿಶುವಿನ ಬಾಯಿ ಒಣಗಿತ್ತು. ಗುಕ್ಲೋಸ್ ನೀಡಿದರೂ ಸ್ಪಂದಿಸಿರಲಿಲ್ಲ. ಆ ಶಿಶು, ನನ್ನ ಮಗಳಂತೆ ಕಂಡಿತು. ಹೀಗಾಗಿ, ವೈದ್ಯರ ಒಪ್ಪಿಗೆ ಪಡೆದು ಆ ಶಿಶುವಿಗೆ ನಾನೇ ಹಾಲುಣಿಸಿದೆ’ ಎಂದರು.

‘ಶಿಶುವನ್ನು ರಸ್ತೆ ಬದಿ ಎಸೆದು ಹೋಗುವ ಮನಸ್ಸು ಆ ಪೋಷಕರಿಗೆ ಹೇಗೆ ಬಂತು ಎಂಬುದು ಗೊತ್ತಾಗುತ್ತಿಲ್ಲ. ಇಂಥ ಚಳಿಯನ್ನು ಮಗು ಹೇಗೆ ತಾನೇ ತಡೆದುಕೊಳ್ಳುತ್ತದೆ’ ಎಂದು ಮರುಕಪಟ್ಟರು.

ಪ್ರಕರಣ ದಾಖಲು: ಅನಾಥ ಶಿಶು ಬಗ್ಗೆ ಸಿವಿಲ್ ಡಿಫೆನ್ಸ್ ಉದ್ಯೋಗಿ ನೀಡಿರುವ ದೂರಿನನ್ವಯ ಯಲಹಂಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಆಗತಾನೇ ಜನಿಸಿದ್ದ ಹೆಣ್ಣು ಮಗುವನ್ನು ಯಾರೋ ರಸ್ತೆ ಪಕ್ಕದಲ್ಲಿ ಮಲಗಿಸಿ ಹೋಗಿದ್ದಾರೆ. ಪೋಷಕರನ್ನು ಪತ್ತೆ ಮಾಡುತ್ತಿದ್ದೇವೆ’ ಎಂದು ಪೊಲೀಸರು ಹೇಳಿದರು.

ತಾಯಿ ಹೃದಯ ತೋರಿದ್ದ ಕಾನ್‌ಸ್ಟೆಬಲ್ ಅರ್ಚನಾ

ದೊಡ್ಡತೋಗೂರಿನ ಕಸದ ರಾಶಿಯಲ್ಲಿ ಕಳೆದ ವರ್ಷದ ಮೇ 30ರಂದು ಸಿಕ್ಕಿದ್ದ ಅನಾಥ ಶಿಶುವಿಗೆ ಎಲೆಕ್ಟ್ರಾನಿಕ್ ಸಿಟಿ ಠಾಣೆಯ ಮಹಿಳಾ ಕಾನ್‌ಸ್ಟೆಬಲ್ ಅರ್ಚನಾ ಹಾಲುಣಿಸಿದ್ದರು. ಅರ್ಚನಾ ಅವರು ಸಹ ಗಂಡು ಮಗುವಿಗೆ ಜನ್ಮ ನೀಡಿ, ಹೆರಿಗೆ ರಜೆ ಮುಗಿಸಿಕೊಂಡು ಕರ್ತವ್ಯಕ್ಕೆ ಹಾಜರಾಗಿದ್ದರು. ಅದೇ ವೇಳೆ, ಅನಾಥ ಶಿಶು ದೊರೆತ ಸುದ್ದಿ ತಿಳಿದು ಸ್ಥಳಕ್ಕೆ ಹೋಗಿ ತಾಯಿ ಹೃದಯ ತೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.