ADVERTISEMENT

ಬೀದರ್: ಸಂಭ್ರಮದ ಆಯುಧ ಪೂಜೆ; ವಿಜಯದಶಮಿ ಆಚರಣೆ

ರಾಮಲೀಲಾ ಉತ್ಸವಕ್ಕೆ ಮನಸೋತ ಜನ; 50 ಅಡಿ ಎತ್ತರದ ರಾವಣನ ಪ್ರತಿಕೃತಿ ದಹನ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2025, 5:48 IST
Last Updated 3 ಅಕ್ಟೋಬರ್ 2025, 5:48 IST
ರಾವಣನ ಪ್ರತಿಕೃತಿ ದಹಿಸಲಾಯಿತು ಪ್ರಜಾವಾಣಿ ಚಿತ್ರಗಳು: ಲೋಕೇಶ ವಿ. ಬಿರಾದಾರ
ರಾವಣನ ಪ್ರತಿಕೃತಿ ದಹಿಸಲಾಯಿತು ಪ್ರಜಾವಾಣಿ ಚಿತ್ರಗಳು: ಲೋಕೇಶ ವಿ. ಬಿರಾದಾರ   

ಬೀದರ್: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬವನ್ನು‌ ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

ಮನೆ, ಮಳಿಗೆಗಳನ್ನು ಅಲಂಕಾರಿಕ ಹೂಗಳಿಂದ ಸಿಂಗರಿಸಿ, ಬಣ್ಣಬಣ್ಣದ ರಂಗೋಲಿಗಳನ್ನು ಬಿಡಿಸಿ, ದೇವಿಗೆ ವಿಶೇಷ ಪೂಜೆ ನೆರವೇರಿಸಿ, ನೈವೇದ್ಯ ಸಮರ್ಪಿಸಿದರು. ಆನಂತರ ಬಂಧು ಬಳಗ, ಸ್ನೇಹಿತರು ಹಬ್ಬದ ಊಟ ಸವಿದರು. ಸಂಜೆ ದೇವಸ್ಥಾನಗಳಿಗೆ ತೆರಳಿ, ದೇವರ ದರ್ಶನ ಪಡೆದರು. ಆನಂತರ ಬನ್ನಿ ತಂದು, ಮನೆ ದೇವರಿಗೆ ಅರ್ಪಿಸಿದರು. ಹಿರಿಯರಿಗೆ ಕೊಟ್ಟು ಆಶೀರ್ವಾದ ಪಡೆದರು. ಯುವಕರು, ಚಿಣ್ಣರು ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡು ಶುಭ ಕೋರಿದರು.

ನಗರದ ಜನವಾಡ ರಸ್ತೆಯ ಹನುಮಾನ ಮಂದಿರ, ಹೈದರಾಬಾದ್ ರಸ್ತೆಯ ಶಾರ್ ಹನುಮಾನ ದೇವಸ್ಥಾನ, ಚಿದಂಬರಾಶ್ರಮದ ಸಿದ್ಧಾರೂಢ ಮಠ, ಬಸವ ಮುಕ್ತಿ ಮಂದಿರ, ದೇವಿ ಕಾಲೊನಿಯ ದೇವಿ ಮಂದಿರ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ದಿನವಿಡೀ ಜನಜಾತ್ರೆ ಇತ್ತು.

ADVERTISEMENT

ನಗರದ ಶರಣ ಉದ್ಯಾನ, ಬಸವ ಮಂಟಪ, ಬಸವ ಗಿರಿಯಲ್ಲಿ ಶರಣ ವಿಜಯೋತ್ಸವ ಆಚರಿಸಲಾಯಿತು.

ಶ್ರೀ ರಾಮಲೀಲಾ ಸೇವಾ ಸಮಿತಿಯಿಂದ ನಗರದ ಸಾಯಿ ಶಾಲೆ ಮೈದಾನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ 50 ಅಡಿ ಎತ್ತರದ ರಾವಣನ ಪ್ರತಿಕೃತಿ ದಹನ ಮಾಡಲಾಯಿತು. ಪಟಾಕಿಗಳಿಂದ ರಾವಣನ ಪ್ರತಿಕೃತಿ ದಹನ ಮಾಡುತ್ತ, ಜನ ಜೈ ಶ್ರೀರಾಮ ಎಂದು ಘೋಷಣೆ ಕೂಗಿದರು. ಛಾಯಾಚಿತ್ರ, ವಿಡಿಯೊ ಮಾಡಿಕೊಂಡರು. ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಇದಕ್ಕೂ ಮುನ್ನ ನಡೆದ ರಾಮಲೀಲಾ ಕಾರ್ಯಕ್ರಮ ಮನಸೂರೆಗೊಳಿಸಿತು. ವಿವಿಧ ಭಾಗದ ಅಪಾರ ಜನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕೆಲಕಾಲ ಈ ಭಾಗದಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತು.

ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ, ಮುಖಂಡರಾದ ಈಶ್ವರ ಸಿಂಗ್ ಠಾಕೂರ್, ಮಹೇಶ್ವರ ಸ್ವಾಮಿ,‌ ಚಂದ್ರಶೇಖರ್ ಗಾದಾ, ಸೋಮನಾಥ ಪಾಟೀಲ, ಗುರುನಾಥ ಕೊಳ್ಳೂರ, ಬಾಬುವಾಲಿ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಮತ್ತಿತರರು ಪಾಲ್ಗೊಂಡಿದ್ದರು.

ಬುಧವಾರ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಆಯುಧ ಪೂಜೆ ನೆರವೇರಿಸಲಾಯಿತು. ಪೊಲೀಸ್ ಠಾಣೆಗಳಲ್ಲಿ ಶಸ್ತ್ರಾಸ್ತ್ರ, ಅಡತ್ ಮಳಿಗೆಗಳಲ್ಲಿ ತೂಕದ ಕಲ್ಲು ಸೇರಿದಂತೆ ಇತರೆ ಪರಿಕರ ಹಾಗೂ ಮನೆಗಳಲ್ಲಿ ವಾಹನಗಳಿಗೆ ಪೂಜೆ ನೆರವೇರಿಸಿ ಆಯುಧ ಪೂಜೆ ಮಾಡಿದರು.

ಪ್ರತಿಕೃತಿ ದಹನಕ್ಕೆ ಚಾಲನೆ ನೀಡಿದ ಶಾಸಕ ಡಾ. ಶೈಲೇಂದ್ರ‌ ಕೆ. ಬೆಲ್ದಾಳೆ
ರಾಮಲೀಲಾ ಕಾರ್ಯಕ್ರಮದ ಝಲಕ್
ರಾಮಲೀಲಾ ಕಾರ್ಯಕ್ರಮದ ಝಲಕ್
ಬೀದರ್‌ನ ಒಳಕೋಟೆಯಲ್ಲಿ ನಡೆದ ಭವಾನಿ ದೇವಿ ಹಾಗೂ ಪಲ್ಲಕ್ಕಿ ಮೆರವಣಿಗೆಯಲ್ಲಿ ಅಪಾರ ಜನ ಪಾಲ್ಗೊಂಡಿದ್ದರು

ಒಳಕೋಟೆಯಲ್ಲಿ ಜಾತ್ರೆಯ ವಾತಾವರಣ

ಬೀದರ್‌ನ ಬಹಮನಿ ಕೋಟೆಯ ಒಳಕೋಟೆಯಲ್ಲಿ ದಿನವಿಡೀ ಜಾತ್ರೆಯ ವಾತಾವರಣ ಇತ್ತು. ಒಳಕೋಟಿ ಭವಾನಿ ದೇವಿಗೆ ವಿಶೇಷ ಪೂಜೆ ನೆರವೇರಿಸಿ ಅನ್ನದಾಸೋಹ ಮಾಡಲಾಯಿತು. ವಿವಿಧ ಕಡೆಗಳಿಂದ ಅಪಾರ ಸಂಖ್ಯೆಯ ಭಕ್ತರು ಬಂದು ದೇವಿ ದರ್ಶನ ಪಡೆದರು. ಬಳಿಕ ಶ್ರದ್ಧಾ ಭಕ್ತಿಯಿಂದ ದೇವಿ ಹಾಗೂ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ನೂರಾರು ಜನ ಸಡಗರದಿಂದ ಹೆಜ್ಜೆ ಹಾಕಿದರು. ದೇವಿ ಪರ ಜಯಘೋಷ ಹಾಕಿದರು. ನಗರದ ಪ್ರಮುಖ ಮಾರ್ಗಗಳಲ್ಲಿ ಮೆರವಣಿಗೆ ಹಾದು ಮೂಲ ಸ್ಥಳದಲ್ಲಿ ಕೊನೆಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.