
ಬಸವಕಲ್ಯಾಣ: ‘ಕಲ್ಯಾಣ ಕ್ರಾಂತಿಯ ಕಾರಣಿಕಪುರುಷ ಶರಣ ಹರಳಯ್ಯನವರ ಪಾದುಕೆಗಳಿರುವ ಬಿಜನಳ್ಳಿಯಲ್ಲಿ ಸರ್ಕಾರ ಭವ್ಯ ಸ್ಮಾರಕ ನಿರ್ಮಿಸಬೇಕು' ಎಂದು ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ ಪಾಟೀಲ ಆಗ್ರಹಿಸಿದ್ದಾರೆ.
ನಗರದ ಬಸವಧರ್ಮ ಪೀಠದ ಬಸವ ಮಹಾಮನೆ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಕಲ್ಯಾಣ ನಡಿಗೆ ಮತ್ತು ಹರಳಯ್ಯ ಜ್ಯೋತಿ ಪಾದಯಾತ್ರೆಯ ಸಮಾರೋಪ, ಶರಣ ಸಂಸತ್ ಸಮಾವೇಶ ಹಾಗೂ ಶರಣ ವಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
`ಬಸವಣ್ಣನವರ ಕಲ್ಯಾಣ ರಾಜ್ಯದ ಕನಸು ನನಸಾಗಲು ಹಾಗೂ ಸಮಾಜದಲ್ಲಿ ಸಮಾನತೆ, ಸೌಹಾರ್ದತೆ ನೆಲೆಸುವುದಕ್ಕೆ ಪ್ರೇರಣೆ ದೊರಕುವಂತಾಗಲು ಬಸವಕಲ್ಯಾಣದ ತ್ರಿಪುರಾಂತ ಕೆರೆಯಲ್ಲಿ ವಚನ ಮಂಟಪ ನಿರ್ಮಿಸಬೇಕು. ಅನುಭವ ಮಂಟಪ ಮತ್ತಿತರೆ ಸ್ಮಾರಕಗಳ ಕಾಮಗಾರಿ ಶೀಘ್ರ ಪೂರ್ಣಗೊಳ್ಳಬೇಕು' ಎಂದರು.
ಬೈಲೂರು ನಿಜಗುಣಾನಂದ ಸ್ವಾಮೀಜಿ ಮಾತನಾಡಿ, ‘ಅಹಂಕಾರ ತೊರೆದು ಶರಣು ಶರಣಾರ್ಥಿ ಎಂದು ಸೌಜನ್ಯದಿಂದ ನುಡಿದು ನಡೆಯುವ ಸಂಸ್ಕೃತಿ ನಮ್ಮದಾಗಬೇಕು. ಬಸವಾದಿ ಶರಣರ ಚಿಂತನೆ ಬಿತ್ತುವ ಕಾರ್ಯವಾಗಬೇಕು. ಆಗ ಮಾತ್ರ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯ’ ಎಂದರು.
ಕಲ್ಯಾಣ ಮಹಾಮನೆಯ ಬಸವಪ್ರಭು ಸ್ವಾಮೀಜಿ ಮಾತನಾಡಿ, ‘ಬಸವಣ್ಣನವರದ್ದು ಭಕ್ತಿ ಪ್ರಧಾನ ಧರ್ಮವಾಗಿದೆ. ತಂದೆ ತಾಯಿ ಹಾಗೂ ಇತರರೊಂದಿಗೆ ಗೌರವಾದರಗಳಿಂದ ವರ್ತಿಸಬೇಕು. ಒಳ ಹೊರಗೂ ಶುದ್ಧವಾಗಿರಬೇಕು. ಬಸವಾದಿ ಶರಣರಿಗೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮವಿದ್ದರೂ 12ನೇ ಶತಮಾನದ ಗಣಪರ್ವಗಳ ಭಾಗವೆಂದು ತಿಳಿದು ಎಲ್ಲರೂ ಭಾಗವಹಿಸುವುದು ಅನಿವಾರ್ಯ ಎಂದು ತಿಳಿದುಕೊಳ್ಳಬೇಕು’ ಎಂದರು.
ಹುಲಸೂರ ಶಿವಾನಂದ ಸ್ವಾಮೀಜಿ, ಸಾಹಿತಿಗಳಾದ ವಿಶ್ವಾರಾಧ್ಯ ಸತ್ಯಂಪೇಟ್, ಮಹಾಂತೇಶ ಕುಂಬಾರ, ಪಂಡಿತ ಬಾಳೂರೆ, ಚಂದ್ರಮೌಳಿ ಮಾತನಾಡಿದರು. ಬೆಂಗಳೂರಿನ ಸುಮಂಗಲಿ ಸೇವಾ ಆಶ್ರಮದ ಅಧ್ಯಕ್ಷೆ ಸುಶೀಲಮ್ಮ ಅವರ ವಿಶೇಷ ಸನ್ಮಾನ ನಡೆಯಿತು.
ಶೂನ್ಯ ಪೀಠಾಧ್ಯಕ್ಷ ಸಿದ್ದರಾಮೇಶ್ವರ ಸ್ವಾಮೀಜಿ, ಅನುಭವ ಮಂಟಪ ಸಂಚಾಲಕ ಶಿವಾನಂದ ಸ್ವಾಮೀಜಿ, ಶಂಕರಲಿಂಗ ಸ್ವಾಮೀಜಿ, ಲಾವಣ್ಯ ಮಾತಾಜಿ, ಸತ್ಯಕ್ಕತಾಯಿ, ಬಸವದೇವರು, ಸುಭಾಶ್ಚಂದ್ರ ನಾಗರಾಳೆ, ಸಂಗಮೇಶ ಜಾವಾದಿ, ಜಗನ್ನಾಥ ಪತಂಗೆ, ಓಂಪ್ರಕಾಶ ರೊಟ್ಟೆ, ವೀರಣ್ಣ ಕೊರ್ಲಳ್ಳಿ, ರವೀಂದ್ರ ಕೊಳಕೂರ, ಉಮಾದೇವಿ ಚಿಲ್ಲರಗಿ, ವೈಜನಾಥ ಮತ್ತಿತರರು ಪಾಲ್ಗೊಂಡಿದ್ದರು.
ಬಸವಣ್ಣ ಅವರಿಂದಾಗಿ ದಲಿತ ವರ್ಗದವರೇ ಲಿಂಗಾಯತರಾಗಿ ಪರಿವರ್ತನೆಗೊಂಡರು ಎಂಬುದನ್ನು ನೆನಪಿನಲ್ಲಿ ಇಟ್ಟುಕೊಂಡರೆ ಮಾತ್ರ ಈ ಧರ್ಮ ಬಲಗೊಳ್ಳುತ್ತದೆ.ನಿಜಗುಣಾನಂದ ಸ್ವಾಮೀಜಿ ಬೈಲೂರು
770 ಶರಣರಿಗೆ ವಂದನೆ
ಫೆಬ್ರುವರಿ 15 ರಂದು ಬಿಜನಳ್ಳಿಯಲ್ಲಿ ಯಾತ್ರೆ ಆರಂಭವಾಗಿ ಕಲಬುರ್ಿಗ ಮತ್ತು ಬೀದರ್ ಜಿಲ್ಲೆಯ ಹಳ್ಳಿಗಳ ಮೂಲಕ ಇಲ್ಲಿಗೆ ಬಂದು ತಲುಪಿದಾಗ ಭವ್ಯವಾಗಿ ಸ್ವಾಗತ ಕೋರಲಾಯಿತು. ಶರಣ ಸಂಸತ್ ಸಮಾವೇಶ ನಡೆಸುವ ಜೊತೆಗೆ 770 ಅಮರ ಗಣಂಗಳಿಗೆ ವಂದನೆ ಹಾಗೂ ಶರಣಾರತಿ ಮಾಡಲಾಯಿತು. ಸಾವಿರಾರು ಬಸವಾನುಯಾಯಿಗಳು ಪಾಲ್ಗೊಂಡಿದ್ದರು. ಎಲ್ಲರೂ ತಲೆಮೇಲೆ ಟೊಪ್ಪಿಗೆ ಹಾಗೂ ಕೊರಳಲ್ಲಿ ಪಟ್ಟಿ ಧರಿಸಿದ್ದರು. ಶರಣ ಹರಳಯ್ಯ ನಾಟಕದ ಪ್ರದರ್ಶನವೂ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.