ADVERTISEMENT

ಭಾಲ್ಕಿ: ಬಾರದ ಬಸ್; ವಿದ್ಯಾರ್ಥಿ, ಸಾರ್ವಜನಿಕರಿಗೆ ತೊಂದರೆ

ರಸ್ತೆ ಮಧ್ಯೆ ನಿರ್ಮಾಣಗೊಂಡ ತಗ್ಗು, ಗುಂಡಿ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 6:07 IST
Last Updated 20 ನವೆಂಬರ್ 2025, 6:07 IST
ಭಾಲ್ಕಿ ತಾಲ್ಲೂಕಿನ ಸಿಕಿಂದ್ರಬಾದ ವಾಡಿಯ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಕಚ್ಚಾ ರಸ್ತೆಯಲ್ಲಿ ನಿರ್ಮಾಣವಾಗಿರುವ ತಗ್ಗು, ಗುಂಡಿ ಮಧ್ಯೆ ಚಲಿಸುತ್ತಿರುವ ವಾಹನಗಳು
ಭಾಲ್ಕಿ ತಾಲ್ಲೂಕಿನ ಸಿಕಿಂದ್ರಬಾದ ವಾಡಿಯ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಕಚ್ಚಾ ರಸ್ತೆಯಲ್ಲಿ ನಿರ್ಮಾಣವಾಗಿರುವ ತಗ್ಗು, ಗುಂಡಿ ಮಧ್ಯೆ ಚಲಿಸುತ್ತಿರುವ ವಾಹನಗಳು   

ಭಾಲ್ಕಿ: ತಾಲ್ಲೂಕಿನ ಸಿಕಿಂದ್ರಬಾದ ವಾಡಿ ಗ್ರಾಮ ಸಮೀಪದ ಮಲ್ಲಿಕಾರ್ಜುನ ಗದ್ದುಗೆಯಿಂದ ಮುಖ್ಯರಸ್ತೆಯ ವರೆಗೂ ಇರುವ ಕಚ್ಚಾ ರಸ್ತೆಯಲ್ಲಿ ತಗ್ಗು, ಗುಂಡಿ ನಿರ್ಮಾಣವಾಗಿರುವುದರಿಂದ ಸುಮಾರು 15 ದಿನಗಳಿಂದ ಗ್ರಾಮಕ್ಕೆ ಬಸ್ ಬರುತ್ತಿಲ್ಲ.

ವಿದ್ಯಾರ್ಥಿಗಳಿಗೆ ಶಾಲಾ, ಕಾಲೇಜುಗಳಿಗೆ ತೆರಳಲು ತೀವ್ರ ಸಮಸ್ಯೆ ಉಂಟಾಗಿದೆ. ಅನಿವಾರ್ಯವಾಗಿ ಪ್ರತಿದಿನ ಖಟಕಚಿಂಚೋಳಿ ಇಲ್ಲವೇ ಮಾಸಿಮಾಡ ಗ್ರಾಮದವರೆಗೆ ಸುಮಾರು 4 ಕಿ.ಮೀ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದಾರೆ.

ಈ ಮೊದಲು ಬಸ್ ಬರದಾಪೂರ, ಡಾವರಗಾಂವ್ ವಾಯಾ ಸಿಕಿಂದ್ರಬಾದ ವಾಡಿ ಮಾಡಿಕೊಂಡು ಮಾಸಿಮಾಡ ಗ್ರಾಮದ ಮೂಲಕ ಹಳ್ಳಿಖೇಡ್‌ಗೆ ಹೋಗುತಿತ್ತು. ಇದರಿಂದ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ತುಂಬಾ ಅನುಕೂಲವಾಗಿತ್ತು. ಆದರೆ ಸದ್ಯ ಮಾಸಿಮಾಡ ಗ್ರಾಮದಿಂದ ಸಿಕಿಂದ್ರಬಾದ ವಾಡಿ ಗ್ರಾಮದ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಮಲ್ಲಿಕಾರ್ಜುನ ಗದ್ದುಗೆಯಿಂದ ಸಿಕಿಂದ್ರಬಾದ ವಾಡಿ ಮುಖ್ಯರಸ್ತೆವರೆಗಿನ ಸುಮಾರು ಒಂದು ಕಿ.ಮೀ ಕಚ್ಚಾ ರಸ್ತೆ ಇದೆ. ಈಚೆಗೆ ಸುರಿದ ಭಾರಿ ಮಳೆಗೆ ತಗ್ಗು ಬಿದ್ದಿದೆ. ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ನೀರು ಹರಿದು ಹೋಗಲು ಸೇತುವೆ ಇಲ್ಲದಿರುವುದರಿಂದ. ರಸ್ತೆ ಪಕ್ಕವೇ ನೀರು ಸಂಗ್ರಹಗೊಂಡಿದೆ. ‌

ADVERTISEMENT

ಈ ರಸ್ತೆಯಲ್ಲಿ ಬಸ್ ಓಡಾಡಲು ಆಗುವುದಿಲ್ಲ ಎಂದು ವಾಹನ ಚಾಲಕರು ನಮ್ಮ ಗ್ರಾಮಕ್ಕೆ ಬಸ್ ತರುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು. ನಮ್ಮ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಡಾಂಬರಿನಿಂದ ಕೂಡಿದೆ. ಆದರೆ ಒಂದು ಕಿಲೋಮೀಟರ್ ಮಾತ್ರ ಕಚ್ಚಾ ರಸ್ತೆ ಇರುವುದರಿಂದ ಈ ಸಮಸ್ಯೆ ನಮಗೆ ಎದುರಾಗಿದೆ. ಈ ವಿಷಯ ಸಂಬಂಧ ಅಧಿಕಾರಿಗಳ ಗಮನ ಸೆಳೆದರೂ ಯಾವುದೇ ಕ್ರಮಕ್ಕೂ ಮುಂದಾಗುತ್ತಿಲ್ಲ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕಲ್ಯಾಣರಾವ್ ಅಷ್ಟೂರೆ ದೂರಿದರು.

ಗ್ರಾಮ ಸಮೀಪದ ಹೊಸ ಬಡಾವಣೆಯಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣ ಆಗಿಲ್ಲ. ಇನ್ನು ಗ್ರಾಮದ ಹನುಮಾನ ದೇವಸ್ಥಾನದ ಸಮೀಪ ಸಿಸಿ ರಸ್ತೆ ಇದ್ದರೂ ಚರಂಡಿ ನಿರ್ಮಿಸಿಲ್ಲ. ಸಂಬಂಧಪಟ್ಟವರು ಕೂಡಲೇ ನಮ್ಮ ಈ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿ ಸರ್ವರಿಗೂ ಅನುಕೂಲಿಸಬೇಕು ಎಂಬುದು ಗ್ರಾಮವಾಸಿಗಳ ಒತ್ತಾಯವಾಗಿದೆ.

ಭಾಲ್ಕಿ ತಾಲ್ಲೂಕಿನ ಸಿಕಿಂದ್ರಬಾದ ವಾಡಿಯ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಕಚ್ಚಾ ರಸ್ತೆಯಲ್ಲಿ ನಿರ್ಮಾಣವಾಗಿರುವ ತಗ್ಗು ಗುಂಡಿ ಸ್ವಂತ ಖರ್ಚಿನಲ್ಲಿ ಮುಚ್ಚಿಸಿರುವ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕಲ್ಯಾಣರಾವ್ ಅಷ್ಟೂರೆ
ರೇವಣಸಿದ್ದ ಜಾಡರ್
ಕಲ್ಯಾಣರಾವ್ ಅಷ್ಟೂರೆ
ವಿದ್ಯಾರ್ಥಿಗಳಿಗೆ ಗ್ರಾಮಸ್ಥರಿಗೆ ಎಲ್ಲಾ ಸಮಯದಲ್ಲೂ ಅನುಕೂಲ ಕಲ್ಪಿಸಲು ಸಿಕಿಂದ್ರಬಾದ ವಾಡಿ-ಖಟಕಚಿಂಚೋಳಿ ಮಾರ್ಗವಾಗಿ ಬಸ್ ಓಡಿಸಬೇಕು. ಇಲ್ಲವಾದಲ್ಲಿ ಬೃಹತ್ ಪ್ರತಿಭಟನೆ ಮಾಡಲಾಗುವುದು 
ರೇವಣಸಿದ್ದ ಜಾಡರ್ ಎಬಿವಿಪಿ ಮುಖಂಡ
ವಿದ್ಯಾರ್ಥಿಗಳ ಹಿತದ ದೃಷ್ಟಿಯಿಂದ ಬಸ್ ನಿತ್ಯ ಗ್ರಾಮಕ್ಕೆ ಬರಬೇಕೆಂದು ಸ್ವಂತ ಖರ್ಚಿನಲ್ಲಿ ತಗ್ಗು ಗುಂಡಿ ಮುಚ್ಚಿದ್ದೇನೆ. ಸಂಬಂಧಪಟ್ಟವರು ಕೂಡಲೇ ರಸ್ತೆ ಡಾಂಬರೀಕರಣ ಸೇತುವೆ ನಿರ್ಮಾಣ ಮಾಡಬೇಕು.
ಕಲ್ಯಾಣರಾವ್ ಅಷ್ಟೂರೆ ಗ್ರಾ.ಪಂ ಮಾಜಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.