ADVERTISEMENT

ಸಿಎಂ ವಾಸ್ತವ್ಯ ಮಾಡಿದ‌್ದ ಮನೆಯಲ್ಲಿ ಬರದ ಛಾಯೆ!

ಹುಮನಾಬಾದ್ ತಾಲ್ಲೂಕಿನ ಹಣಕುಣಿ ಗ್ರಾಮದಲ್ಲಿ 2007ರಲ್ಲಿ ಕುಮಾರಸ್ವಾಮಿ ವಾಸ್ತವ್ಯ

ಪರಶುರಾಮ ಹೊಸಮನಿ
Published 23 ಜೂನ್ 2019, 19:45 IST
Last Updated 23 ಜೂನ್ 2019, 19:45 IST
ಮುಖ್ಯಮಂತ್ರಿ ಎಚ್‍.ಡಿ. ಕುಮಾರಸ್ವಾಮಿ ಅವರು ವಾಸ್ತವ್ಯ ಮಾಡಿದ ಹಣಕುಣಿ ಗ್ರಾಮದ ಮನೆ
ಮುಖ್ಯಮಂತ್ರಿ ಎಚ್‍.ಡಿ. ಕುಮಾರಸ್ವಾಮಿ ಅವರು ವಾಸ್ತವ್ಯ ಮಾಡಿದ ಹಣಕುಣಿ ಗ್ರಾಮದ ಮನೆ   

ಹುಮನಾಬಾದ್: ತಾಲ್ಲೂಕಿನ ಹಣಕುಣಿ ಗ್ರಾಮದ ಮೃತ ರೈತ ಶೇಕ್ ಫರೀದ್ ಅವರ ಮನೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು 2007ರ ಮೇ 23ರಂದು ವಾಸ್ತವ್ಯ ಮಾಡಿದ್ದ ಮನೆಯಲ್ಲಿ ಇಂದಿಗೂ ಬರದ ಛಾಯೆ ಆವರಿಸಿದೆ.

ಬೆಳೆ ವೈಫಲ್ಯ ಮತ್ತು ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದ ರೈತ ಶೇಕ್ ಫರೀದ್ ಮನೆಯಲ್ಲಿ ಇಂದಿಗೂ ನಿರವಮೌನ ಆವರಿಸಿದೆ.

ಮೃತ ರೈತನ ಪತ್ನಿ ನಿತ್ಯ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾಳೆ. ಮೃತ ರೈತ ಶೇಕ್ ಫರೀದ್ ಅವರಿಗೆ ₹ 1.50 ಲಕ್ಷ ಸಾಲವಾಗಿತ್ತು. ಮೃತರ ಪತ್ನಿ ಆರೀಫಬಿ ಅವರಿಗೆ ಇಬ್ಬರು ಗಂಡು ಮೂವರು ಹೆಣ್ಣು ಮಕ್ಕಳಿದ್ದಾರೆ. ಸಾಲಮಾಡಿ ಇಬ್ಬರು ಹೆಣ್ಣು ಮಕ್ಕಳ ಮದುವೆ ಮಾಡಿದ್ದಾರೆ.

ADVERTISEMENT

ಸರ್ಕಾರದಿಂದ ಮೃತ ರೈತ ಕುಟುಂಬಕ್ಕೆ ಕೇವಲ ₹ 1 ಲಕ್ಷ ಪರಿಹಾರ ಧನ ಮತ್ತು ಮುಖ್ಯಮಂತ್ರಿ ಅವರ ಹೆಸರಲ್ಲಿ ಉಚಿತ ವಿದ್ಯುತ್‌ ಸಂಪರ್ಕ ಬಿಟ್ಟರೆ ಮತ್ತೇನು ಕೊಟ್ಟಿಲ್ಲ ಎಂಬ ಅಳಲು ಕುಟುಂಬಸ್ತರದ್ದಾಗಿದೆ.

2007ರ ಮೇ 23ರಂದು ಮುಖ್ಯಮಂತ್ರಿ ಎಚ್‍.ಡಿ.ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯದ ಹಿನ್ನೆಲೆಯಲ್ಲಿ ಮೃತ ರೈತನ ಮನೆಯಲ್ಲಿಯೇ ವಿದೇಶಿ ಶೌಚಾಲಯ ನಿರ್ಮಾಣ ಮಾಡಲಾಗಿತ್ತು. ಆ ಶೌಚಾಲಯ ಹಾಳಾಗಿದೆ. ಗ್ರಾಮ ವಾಸ್ತವ್ಯದಂದು ನಮ್ಮ ಹೊಲದಲ್ಲಿ ಕೃಷಿ ಚಟುವಟಿಕೆಗಾಗಿ ಕೊಳವೆ ಬಾವಿ ತೋಡಿಸಿ. ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ಹುದ್ದೆ ಕೊಡಿಸುತ್ತೇನೆ ಎಂದು ಅಂದು ಕುಮಾರಸ್ವಾಮಿ ಅವರು ಭರವಸೆ ನೀಡಿದ್ದರು. ಆದರೆ, ಆ ಭರವಸೆಗಳನ್ನು ನೀಡಿ 12 ವರ್ಷ ಕಳೆದರೂ ಕೊಳವೆ ಬಾವಿ ಹಾಗೂ ಸರ್ಕಾರಿ ನೌಕರಿ ಸಿಕ್ಕಿಲ್ಲ ಎಂದು ಮೃತ ರೈತನ ಪತ್ನಿ ಫರೀದಾ ’ಪ್ರಜಾವಾಣಿ‘ಯೊಂದಿಗೆ ಅಳಲು ತೋಡಿಕೂಂಡರು.

’ಕುಟುಂಬ ನಿರ್ವಹಣೆಗಾಗಿ ಬೇರೆಯವರ ಹೊಲದಲ್ಲಿ ನಿತ್ಯ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದೇನೆ. ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯಕ್ಕಾಗಿ ನಮ್ಮ ಮನೆಯನ್ನು ವಿಶೇಷ ರೀತಿಯಲ್ಲಿ ಶೃಂಗಾರ ಗೊಳಿಸಲಾಗಿತ್ತು. ಹೈಟೆಕ್ ಶೌಚಾಲಯ, ಐಷಾರಾಮಿ ವಸ್ತುಗಳು, ಎಸಿ ಕೂಡಿಸಲಾಗಿತ್ತು. ಆದರೆ, ವಾಸ್ತವ್ಯ ಮುಗಿದ ನಂತರ ಸಂಬಂಧಪಟ್ಟ ಅಧಿಕಾರಿಗಳು ಅದರಲ್ಲಿ ಒಂದು ಕೂಡ ಇಡದೇ ಎಲ್ಲಾ ವಸ್ತುಗಳನ್ನು ತೆಗೆದುಕೂಂಡು ಹೋಗಿದ್ದಾರೆ. ಅದರಲ್ಲಿ ಕೇವಲ ಶೌಚಾಲಯ ಮಾತ್ರ ಬಿಟ್ಟು ಹೋಗಿದ್ದಾರೆ. ಅದು ಕೂಡ ಕೆಟ್ಟು ಹೋಗಿದೆ‘ ಎಂದು ಆರೀಫಾ ಹೇಳಿದರು.

‘ಗ್ರಾಮ ವಾಸ್ತವ್ಯ ಮಾಡಿದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಗ್ರಾಮದಲ್ಲಿ ಕುಡಿಯುವ ನೀರು, ಚರಂಡಿ ನಿರ್ಮಾಣ, 9 ಕೊಳವೆ ಬಾವಿಗಳನ್ನು ಕೊರೆಸಿದ್ದರು. ಆದರೆ, ಅದರಲ್ಲಿ ಕೇವಲ ಒಂದು ಕೊಳವೆ ಬಾವಿಯಲ್ಲಿ ಮಾತ್ರ ನೀರು ಬರುತ್ತಿದೆ. ಇನ್ನುಳ್ಳಿದ 8 ಕೊಳವೆ ಬಾವಿಗಳು ನೀರಿಲ್ಲದೆ ಬತ್ತಿ ಹೋಗಿವೆ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಲೋಕೇಶ ಭೀಮರಡ್ಡಿ ತಿಳಿಸಿದರು.

*
ಕಳೆದ 12 ವರ್ಷಗಳ ಹಿಂದೆ ಮುಖ್ಯಮಂತ್ರಿ ಎಚ್‍.ಡಿ. ಕುಮಾರಸ್ವಾಮಿ ಅವರು ನೀಡಿರುವ ₹1 ಲಕ್ಷ ಪರಿಹಾರ ಹೊರತು ಪಡಿಸಿ ಬೇರೆ ಯಾವ ಸರ್ಕಾರಿ ಸೌಲಭ್ಯಗಳು ನಮ್ಮ ಕುಟುಂಬಕ್ಕೆ ಸಿಕ್ಕಿಲ್ಲ. ಮನೆಯ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದ ಕಾರಣ ದಿನನಿತ್ಯ ಬೇರೆಯವರ ಹೊಲದಲ್ಲಿ ಕೂಲಿ ಕೆಲಸ್ ಮಾಡಿಕೂಂಡು ಉಪಜೀವನ ನಡೆಸುತ್ತಿದ್ದೇನೆ. ನಮಗೆ ಯಾವುದೇ ಯೋಜನೆಯಲ್ಲಿ ಒಂದು ಮನೆ ಕೂಡ ಮಂಜೂರಾಗಿಲ್ಲ.
-ಆರೀಫಾ ಬಿ., ಹಣಕುಣಿ ಮೃತ ರೈತ ಶೇಖ್ ಫರೀದ್‍ನ ಪತ್ನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.