
ಬೀದರ್: ಲೇಖಕರಿಗೆ ತನ್ನ ಕೃತಿಯ ಬಿಡುಗಡೆಯ ಪುಳಕ, ಓದುಗರಿಗೆ ಹೊಸತೊಂದು ಪುಸ್ತಕ ಖರೀದಿಸಿ ಅದನ್ನು ಓದುವ ತವಕ, ಸಂಭ್ರಮ...
ವೀರಲೋಕ ಬುಕ್ಸ್, ಭಾಲ್ಕಿ ಹಿರೇಮಠ ಸಂಸ್ಥಾನ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ನಗರದ ಸಾಯಿ ಶಾಲೆ ಮೈದಾನದಲ್ಲಿ ಹಮ್ಮಿಕೊಂಡಿರುವ ವೀರಲೋಕ ‘ಪುಸ್ತಕ ಸಂತೆ’ಯ ಎರಡನೇ ದಿನವಾದ ಭಾನುವಾರ ಕಂಡ ದೃಶ್ಯಗಳಿವು.
ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಪುಸ್ತಕ ಪ್ರಕಟಣೆಯ ಕನಸು ನನಸಾದ ಸಂಭ್ರಮದಲ್ಲಿ ಲೇಖಕರಿದ್ದರು. ಅವರ ಕನಸಿಗೆ ಇಂಬು ಕೊಟ್ಟಿದ್ದು ವೀರಲೋಕ ಬುಕ್ಸ್. ರಾಜಧಾನಿಯಿಂದ 700 ಕಿ.ಮೀ ದೂರದ ಲೇಖಕರನ್ನು ಗುರುತಿಸಿ, ಪುಸ್ತಕ ಪ್ರಕಟಿಸಿ, ವೇದಿಕೆ ಕಲ್ಪಿಸಿರುವುದಕ್ಕೆ ಕೃತಿಕಾರರಲ್ಲಿ ಧನ್ಯತಾ ಭಾವದ ಮಾತುಗಳು ಹೊರಹೊಮ್ಮಿದವು.
ಇನ್ನೊಂದೆಡೆ ಎರಡನೇ ದಿನವೂ ವಿವಿಧ ಕಡೆಗಳಿಂದ ಬಂದಿದ್ದ ಓದುಗರು ತಮಗಿಷ್ಟವಾದ ಪುಸ್ತಕಗಳನ್ನು ಖರೀದಿಸಿ, ಓದಿ ಮುಗಿಸುವ ಉಮೇದಿನೊಂದಿಗೆ ಹೆಜ್ಜೆ ಹಾಕಿದರು. ಎಲ್ಲ ವಯೋಮಾನದವರು ಪುಸ್ತಕ ಮಳಿಗೆಗಳಿಗೆ ಭೇಟಿ ಕೊಟ್ಟು, ಅವರ ಆಸಕ್ತಿ, ಅಭಿರುಚಿಗೆ ತಕ್ಕುದಾದ ಕೃತಿಗಳನ್ನು ಖರೀದಿಸಿದರು.
ವೀರಲೋಕ ಬುಕ್ಸ್ ಪ್ರಕಟಿಸಿದ ಹತ್ತು ಕೃತಿಗಳನ್ನು ಸಂಸ್ಥೆಯ ಮುಖ್ಯಸ್ಥ ವೀರಲೋಕ ಶ್ರೀನಿವಾಸ ಬಿಡುಗಡೆಗೊಳಿಸಿದರು. ಪುಸ್ತಕ ಸಂತೆ ಆಯೋಜಕ ಗುರುನಾಥ ರಾಜಗೀರಾ, ಕವಿ ರೋಹಿತ್ ನಾಗೇಶ್, ಕೆಎಸ್‌ಸಿಎ ರಾಯಚೂರು ವಲಯ ಸಂಚಾಲಕ ಕುಶಾಲ್ ಪಾಟೀಲ್ ಗಾದಗಿ, ವೈಜಿನಾಥ ಕಮಠಾಣೆ ಇದ್ದರು. ಟಿ.ಎಂ. ಮಚ್ಚೆ ನಿರೂಪಿಸಿದರೆ, ದೇವೇಂದ್ರ ಕರಂಜೆ ವಂದಿಸಿದರು. ಸಂಜೆ ಗಜಲ್ ಗಾಯನ ಕಾರ್ಯಕ್ರಮ ಜರುಗಿತು.
ಪುಸ್ತಕ ಓದಬೇಕು ಪ್ರೀತಿಸಬೇಕು: ‘ಸಾಹಿತ್ಯ ಕ್ಷೇತ್ರಕ್ಕೆ ಬಲವಾದ ಶಕ್ತಿಯಿದೆ. ಅದು ನಿಮ್ಮದಾಗಬೇಕಾದರೆ ಪುಸ್ತಕ ಓದಬೇಕು. ಅವುಗಳನ್ನು ಪ್ರೀತಿಸಬೇಕು’ ಎಂದು ಸಾಹಿತಿ ಸಿದ್ರಾಮಪ್ಪ ಮಾಸಿಮಾಡೆ ಹೇಳಿದರು. ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು ಪುಸ್ತಕಗಳಿಂದ ಬಾಳು ಹಸನಾಗುತ್ತದೆ. ಹೊಸ ತಲೆಮಾರಿನವರ ಕೈಗಳಲ್ಲಿ ಪುಸ್ತಕಗಳೇ ಕಾಣಿಸುತ್ತಿಲ್ಲ. ಅವರ ಆಸಕ್ತಿಗೆ ತಕ್ಕಂತೆ ಪುಸ್ತಕಗಳನ್ನು ಕೊಟ್ಟು ಓದಿಸುವ ಅಭಿರುಚಿ ಬೆಳೆಸಬೇಕು. ದಿನಕ್ಕೆ ಕನಿಷ್ಠ ಒಂದು ವಚನ ಹೇಳಿಕೊಟ್ಟರೂ ಸಾಕು. ತಾನಾಗಿಯೇ ಅವರಲ್ಲಿ ಆಸಕ್ತಿ ಮೂಡುತ್ತದೆ. ಸಾಹಿತ್ಯ ಅರಿತವರಿಂದ ಈ ಕೆಲಸವಾಗಬೇಕಿದೆ ಎಂದು ತಿಳಿಸಿದರು.
ಸಮಯ ಇಲ್ಲವೆಂಬ ನೆಪ ಬೇಡ: ‘ಸಮಯ ಇಲ್ಲವೆಂಬ ನೆಪ ಬೇಡ. ಸಮಯ ಇಲ್ಲವೆಂದು ನಮ್ಮನ್ನು ನಾವು ನಂಬಿಸಿಕೊಂಡಿದ್ದೇವೆ. ಅದು ತಪ್ಪು. ಅದರಿಂದ ಹೊರಬರಬೇಕು. ಪುಸ್ತಕಗಳನ್ನು ಓದಿದರೆ ಬ್ಯಾಂಕಿನಲ್ಲಿ ಯಾವ ರೀತಿ ಹಣ ಹೂಡಿಕೆ ಮಾಡುತ್ತೇವೆಯೊ ಅದೇ ರೀತಿ ಜ್ಞಾನದ ಹೂಡಿಕೆ ಆಗುತ್ತದೆ. ಅದರಿಂದ ಮರಳಿ ಬಹಳಷ್ಟು ವಾಪಸ್ ಬರುತ್ತದೆ’ ಎಂದು ಪತ್ರಕರ್ತ ನಟೇಶ್ ಅಭಿಪ್ರಾಯಪಟ್ಟರು. ಮೊಬೈಲ್‌ಗೆ ಗಂಟುಬಿದ್ದು ಅಮೂಲ್ಯ ಸಮಯ ಹಾಳು ಮಾಡಿಕೊಳ್ಳುತ್ತಿದ್ದೇವೆ. ಪುಸ್ತಕಗಳ ಓದಿನಿಂದ ದಿನ ಆರಂಭಿಸಿ ರಾತ್ರಿ ಕೂಡ ಪುಸ್ತಕ ಓದಿನೊಂದಿಗೆ ಕೊನೆಗೊಳ್ಳಬೇಕು. ಓದಿನ ಹಸಿವು ಬೆಳೆದರೆ ಇದೆಲ್ಲ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
‘ಪ್ರಕಾಶನ ಸಂಸ್ಥೆ ತಲುಪಲು 40 ವರ್ಷ’ ‘ಹಿಂದೆ ನಾನು ಪುಸ್ತಕ ಬರೆದಾಗ ಪ್ರಕಾಶಕರು ಗೊತ್ತಿರಲಿಲ್ಲ. ಈಗ ವೀರಲೋಕ ಬುಕ್ಸ್ ಆ ಅವಕಾಶ ಕಲ್ಪಿಸಿದೆ. ನನ್ನ ಪುಸ್ತಕ ಪ್ರಕಾಶನ ಸಂಸ್ಥೆ ತಲುಪಲು 40 ವರ್ಷಗಳೇ ಬೇಕಾಯಿತು’ ಎಂದು ಸಾಹಿತಿ ಗುರುನಾಥ ಅಕ್ಕಣ್ಣ ಭಾವುಕರಾದರು.
ಬಿಡುಗಡೆಗೊಂಡ ಪುಸ್ತಕಗಳಿವು...: ಸಾಹಿತಿಗಳಾದ ಗುರುನಾಥ ಅಕ್ಕಣ್ಣನವರ ‘ಕೊಂದವರುಳಿದರೇ..’ ಗಂಗಾಂಬಿಕಾ ಪಾಟೀಲ್ ಅವರ ‘ವೀರ ವೈರಾಗ್ಯ ಮಹಾದೇವಿ ಅಕ್ಕನವರ ಸಾಹಿತ್ಯ ದರ್ಶನ’ ಮಾಣಿಕ್ ನೇಳಗೆ ಅವರ ‘ಮಾತನಾಡು’ ರೂಪಾ ಪಾಟೀಲ್ ಅವರ ‘ಋತುಗಾನ ಸಿಂಚನ’ ಸಂತೋಷಕುಮಾರ ವಿ. ಸುಂಕದ ಅವರ ‘ಅಂತರಂಗದ ಅಲೆಗಳು’ ಎನ್.ಆರ್. ರಗಟೆ ಅವರ ‘ಕಷ್ಟಗಳಿಗೂ ಸಾವಿದೆ’ ಮೇನಕಾ ಪಾಟೀಲ್ ಅವರ ‘ಮೌನದೊಳಗಿನ ಮಾತು’ ಸಜ್ಜಾನಿ ನಿಂಗನಗೌಡ ಪಾಟೀಲ್ ಅವರ ‘ಅಪ್ಪನೇ ದೇವರು’ ಲಕ್ಷ್ಮೀಕಾಂತ ತಮ್ಮನೋರ ಅವರ ‘ಚಂದ್ರತಾರೆ’ ಹಾಗೂ ಶಾಂತಮ್ಮ ಅವರ ‘ಸಿರಿ’ ಪುಸ್ತಕಗಳನ್ನು ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.