
ಬೀದರ್: ‘ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿ ಭಾಗ್ಯ ಎಂದು ವಿರೋಧಿಸುವವರು ಸಂವಿಧಾನ ಹಾಗೂ ಬಸವ ಪರಂಪರೆಯ ವಿರೋಧಿಗಳು’ ಎಂದು ಹಿರಿಯ ಪತ್ರಕರ್ತ ವಾಸು ಎಚ್.ವಿ. ಹೇಳಿದರು.
ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿಯಿಂದ ಇಲ್ಲಿನ ಪ್ರತಾಪ್ ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತ ಜಿಲ್ಲಾಮಟ್ಟದ ಗ್ಯಾರಂಟಿ ಕಾರ್ಯಾಗಾರ ಮತ್ತು ಗ್ಯಾರಂಟಿ ಉತ್ಸವದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಶ್ರೀಮಂತರಿಗೆ ಕೋಟಿ, ಕೋಟಿ ಹಣ ಕೊಟ್ಟರೆ ಅದು ಬಿಟ್ಟಿ ಅನಿಸಿಕೊಳ್ಳುವುದಿಲ್ಲ. ಆದರೆ, ಬಡವರಿಗೆ ಕೊಟ್ಟರೆ ಅದನ್ನು ಬಿಟ್ಟಿ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಇಂತಹ ಅಪಪ್ರಚಾರದ ವಿರುದ್ಧ ಗಟ್ಟಿ ಧ್ವನಿಯಲ್ಲಿ ಮಾತನಾಡಬೇಕು. ಅದರಲ್ಲೂ ಹೆಣ್ಣು ಮಕ್ಕಳು ಇದು ತಮಗೆ ಮಾಡುತ್ತಿರುವ ಅಪಮಾನ ಎಂದು ಬಗೆದು ಅದರ ವಿರುದ್ಧ ಮಾತನಾಡಬೇಕು ಎಂದು ಹೇಳಿದರು.
ಗ್ಯಾರಂಟಿ ಸಮರ್ಥಿಸಬೇಕಾದವರು ಸಮರ್ಥಿಸುತ್ತಿಲ್ಲ. ಮಾಧ್ಯಮಗಳಲ್ಲಿ ಅಪಪ್ರಚಾರ ನಡೆಯುತ್ತಿದೆ. ದೊಡ್ಡ ದೊಡ್ಡ ಕಟ್ಟಡಗಳು, ರಸ್ತೆಗಳು ನಿರ್ಮಾಣಗೊಂಡರೆ ಅಭಿವೃದ್ಧಿ ಎಂಬ ಭ್ರಮೆ ಸೃಷ್ಟಿಸಲಾಗುತ್ತಿದೆ. ಅದು ಅಲ್ಲ, ಜನರ ಜೀವನ ಮಟ್ಟ ಬದಲಾಗಬೇಕು. ಗ್ಯಾರಂಟಿ ಯೋಜನೆಗಳಿಂದ ಕರ್ನಾಟಕದ ಜನರ ಜೀವನ ಮಟ್ಟ ಬಹಳಷ್ಟು ಸುಧಾರಿಸಿದೆ. ಅನೇಕ ಆರ್ಥಿಕ ತಜ್ಞರೇ ಇದನ್ನು ಹೇಳಿದ್ದಾರೆ ಎಂದರು.
ಸಂಪತ್ತು ಕೆಲವೇ ಜನರಲ್ಲಿ ಕ್ರೋಢೀಕರಣ ಆಗಬಾರದು. ಸಂಪತ್ತಿನ ಹಂಚಿಕೆಯಾಗಬೇಕು. ಸಂವಿಧಾನದ ರಾಜ್ಯ ನಿರ್ದೇಶಕ ತತ್ವಗಳಲ್ಲಿಯೇ ಇದರ ಉಲ್ಲೇಖವಿದೆ. ಗ್ಯಾರಂಟಿ ಜಾರಿಗೆ ಬಂದ ನಂತರ ತಲಾ ಆದಾಯದಲ್ಲಿ ಕರ್ನಾಟಕವು ತಮಿಳುನಾಡು, ಮಹಾರಾಷ್ಟ್ರವನ್ನು ಮೀರಿಸಿದೆ. ಇಡೀ ದೇಶದ ತಲಾ ಆದಾಯಕ್ಕಿಂತ ಎರಡು ಪಟ್ಟು ಆದಾಯ ಹೆಚ್ಚಳವಾಗಿದೆ. ಮಹಿಳೆಯರಲ್ಲಿ ಖರೀದಿ ಸಾಮರ್ಥ್ಯ ಹೆಚ್ಚಾಗಿದೆ. ಶ್ರೀಮಂತರಿಗೆ ಹಣ ಬಂದರೆ ಸಂಗ್ರಹಿಸುತ್ತಾರೆ. ಅದು ಬಡವರ ಕೈಯಲ್ಲಿದ್ದರೆ ಖರ್ಚಾಗುತ್ತದೆ. ವಿವಿಧ ರೀತಿಯ ವಸ್ತುಗಳ ಖರೀದಿಗೆ ಹಣ ಖರ್ಚು ಮಾಡಿದರೆ ಸರ್ಕಾರದ ತೆರಿಗೆ ಕೂಡ ಹೆಚ್ಚಾಗುತ್ತದೆ. ಕರ್ನಾಟಕದಲ್ಲಿ ಇದೇ ಆಗಿದ್ದು ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ, ಕರ್ನಾಟಕ ರಾಜ್ಯದ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ. ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ರಾಜ್ಯದ 4 ಕೋಟಿಗೂ ಹೆಚ್ಚು ಜನರು ಫಲಾನುಭವಿಗಳಾಗಿದ್ದಾರೆ. ಪ್ರತಿ ಪಕ್ಷಗಳು, ಬಂಡವಾಳಶಾಹಿಗಳು ಗ್ಯಾರಂಟಿಗಳನ್ನು ವಿರೋಧಿಸುವರು, ಟೀಕಿಸುವರು, ಅವರೇ ಈಗ ದೇಶದ ಇತರೆ ರಾಜ್ಯಗಳಲ್ಲಿ ಗ್ಯಾರಂಟಿಗಳನ್ನು ಘೋಷಣೆ ಮಾಡುತ್ತಿದ್ದಾರೆ ಎಂದರು.
ಬೀದರ್ ಜಿಲ್ಲೆಯಲ್ಲಿ ಗೃಹ ಲಕ್ಷ್ಮೀ ಯೋಜನೆಯಡಿ 3,44,855 ಮಹಿಳೆಯರು ಫಲಾನುಭವಿಗಳು ಇದ್ದು, ಇದುವರೆಗೆ ಯಾವುದೇ ಮದ್ಯವರ್ತಿಗಳಿಲ್ಲದೆ ಮಾಸಿಕ ₹2000 ದಂತೆ ₹1,552 ಕೋಟಿ ನೇರ ಖಾತೆಗೆ ಜಮೆ ಮಾಡಲಾಗಿದೆ. ಗೃಹ ಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ 3,48,617 ಫಲಾನುಭವಿಗಳಿದ್ದು, 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುತ್ತಿದೆ. ₹447 ಕೋಟಿ ಬಳಸಲಾಗಿದೆ. ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿ 13,13,355 ಜನರು ಫಲಾನುಭವಿಗಳಾಗಿದ್ದಾರೆ. ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ 11 ಕೋಟಿಗೂ ಹೆಚ್ಚು ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಇದರಿಂದಾಗಿ ಸರ್ಕಾರ ಕೆಕೆಆರ್‌ಟಿಸಿಗೆ ₹315 ಕೋಟಿ ಪಾವತಿಸಿದೆ ಎಂದು ತಿಳಿಸಿದರು.
ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷರಾದ ಪುಷ್ಪ ಅಮರನಾಥ, ಎಸ್. ಆರ್ ಮೆಹರೂಜ್ ಖಾನ್, ಸೂರಜ್ ಹೆಗಡೆ, ಜಿಲ್ಲಾಧ್ಯಕ್ಷ ಅಮೃತರಾವ್ ಚಿಮಕೋಡೆ, ಎಂಎಲ್‌ಸಿ ಭೀಮರಾವ್ ಬಿ. ಪಾಟೀಲ, ಕಾಡಾ ಅಧ್ಯಕ್ಷ ಬಾಬು ಹೊನ್ನ ನಾಯ್ಕ, ಬಿಡಿಎ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಪಾಲಿಕೆ ಅಧ್ಯಕ್ಷ ಮುಹಮ್ಮದ್ ಗೌಸ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿ ಸಿಇಒ ಡಾ. ಗಿರೀಶ್ ಬದೋಲೆ, ಡಿಎಫ್‌ಒ ಆಶೀಶ್ ರೆಡ್ಡಿ ಮತ್ತಿತರರು ಇದ್ದರು.
ಗ್ಯಾರಂಟಿಗಳಿಂದ ಸರ್ಕಾರ ದಿವಾಳಿಯಾಗಿಲ್ಲ. ಒಂದುವೇಳೆ ಸರ್ಕಾರ ದಿವಾಳಿಯಾಗಿದ್ದರೆ ಸರ್ಕಾರಿ ನೌಕರರಿಗೆ ಸಂಬಳ ಕೊಡುತ್ತಿರಲಿಲ್ಲ. ಹೊಸ ಯೋಜನೆಗಳಿಗೆ ಅನುದಾನ ಬಿಡುಗಡೆಯಾಗುತ್ತಿರಲಿಲ್ಲ. ಆಶಾ, ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನ ಹೆಚ್ಚಿಸುತ್ತಿರಲಿಲ್ಲ.–ವಾಸು ಎಚ್.ವಿ., ಹಿರಿಯ ಪತ್ರಕರ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.