ಬೀದರ್: ‘ಜೀವಂತ ಇರುವ ವ್ಯಕ್ತಿಯನ್ನು ಸತ್ತಿದ್ದಾನೆ ಎಂದು ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಬಿತ್ತರಿಸಿದ್ದರಿಂದ ನಮಗೆ ಬಹಳ ನೋವಾಗಿದೆ. ವಿಷಯ ತಿಳಿದು ನಮ್ಮ ಕುಟುಂಬದ ಸದಸ್ಯರೆಲ್ಲರೂ ಆಘಾತಕ್ಕೆ ಒಳಗಾಗಿದ್ದರು’
ನಗರದ ಎಸ್‌ಬಿಐ ಕಚೇರಿ ಎದುರು ಗುರುವಾರ (ಜ.16) ನಡೆದ ದರೋಡೆ ಘಟನೆಯಲ್ಲಿ ದರೋಡೆಕೋರರ ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಲ್ಲಿನ ಲಾಡಗೇರಿ ನಿವಾಸಿ ಶಿವಕುಮಾರ (32) ಅವರ ಭಾಮೈದ ಶಿವಯೋಗಿ ಅವರ ಮಾತುಗಳಿವು.
‘ನಗರದ ಬ್ರಿಮ್ಸ್‌ನಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಶಿವಕುಮಾರ ಅವರನ್ನು ನಾನು ಆಂಬುಲೆನ್ಸ್‌ನಲ್ಲಿ ಹೈದರಾಬಾದ್‌ಗೆ ಕರೆದೊಯ್ಯುತ್ತಿದ್ದೆ. ಶಿವಕುಮಾರ ಚಿಕಿತ್ಸೆಗೆ ಸ್ಪಂದಿಸುತ್ತಿದ್ದರು. ಆದರೆ, ಮಾಧ್ಯಮಗಳಲ್ಲಿ ಶಿವಕುಮಾರ ಮೃತಪಟ್ಟಿದ್ದಾರೆ ಎಂದು ಸುದ್ದಿಗಳನ್ನು ಬಿತ್ತರಿಸಲಾಯಿತು. ಮನೆಯಲ್ಲಿದ್ದ ನಮ್ಮ ಕುಟುಂಬದವರು ಇದರಿಂದ ತೀವ್ರ ಆಘಾತಕ್ಕೆ ಒಳಗಾದರು’ ಎಂದು ಘಟನೆಯನ್ನು ‘ಪ್ರಜಾವಾಣಿ’ಗೆ ವಿವರಿಸಿದರು.
‘ಹೈದರಾಬಾದ್ ಆಸ್ಪತ್ರೆಗೆ ಸೇರಿಸಿ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿತ್ತು. ಈ ವೇಳೆಯೂ ಮಾಧ್ಯಮಗಳಲ್ಲಿ ಅದೇ ರೀತಿಯ ಸುದ್ದಿ ಪ್ರಸಾರವಾಗುತ್ತಿತ್ತು. ಒಂದು ಚಾನೆಲ್‌ನವರಂತೂ ಸಹೋದರ ಮೃತಪಟ್ಟಿದ್ದನ್ನು ಅವರ ಸಹೋದರಿ ಖಚಿತಪಡಿಸಿದ್ದಾರೆ ಎಂದು ಸುದ್ದಿ ಪ್ರಸಾರ ಮಾಡಿದ್ದರು. ಸತ್ಯಾಂಶ ತಿಳಿಯದೆ ಇನ್ನೊಬ್ಬರ ಬಗ್ಗೆ ಕಪೋಲಕಲ್ಪಿತ ವರದಿ ಮಾಡಿ, ಬೇರೆಯವರನ್ನು ಸಂಕಷ್ಟಕ್ಕೆ ಸಿಲುಕಿಸುವುದು ಎಷ್ಟರಮಟ್ಟಿಗೆ ಸರಿ’ ಎಂದು ಪ್ರಶ್ನಿಸಿದರು.
‘ಶಿವಕುಮಾರ ಅವರ ತಂದೆ ಕಾಶಿನಾಥ ಅವರು ಪ್ಯಾರಾಲಿಸಿಸ್‌ನಿಂದ ಹಾಸಿಗೆ ಹಿಡಿದಿದ್ದಾರೆ. ಅವರ ಕಣ್ಣೆರೆಡು ಕಾಣಿಸುವುದಿಲ್ಲ. ಅವರ ಆರೋಗ್ಯ ಲೆಕ್ಕಿಸದೆ ಮಾಧ್ಯಮದವರು ಅವರೊಂದಿಗೆ ಮಾತನಾಡಲು ಪ್ರಯತ್ನಿಸಿದ್ದಾರೆ. ಕಾಶಿನಾಥ ಅವರಿಗೆ ಮೂವರು ಹೆಣ್ಣು ಮಕ್ಕಳು, ಶಿವಕುಮಾರ ಒಬ್ಬನೇ ಮಗ. 32 ವಯಸ್ಸಿನ ಶಿವಕುಮಾರ ಸಿಎಂಎಸ್ ಕಂಪನಿಯಲ್ಲಿ ‘ಕ್ಯಾಶ್ ಕಸ್ಟೋಡಿಯನ್’ ಆಗಿ ಕೆಲಸ ಮಾಡುತ್ತಿದ್ದಾರೆ. ಬ್ಯಾಂಕಿನಿಂದ ಹಣ ಕೊಂಡೊಯ್ದು ಎಟಿಎಂಗಳಿಗೆ ಹಣ ತುಂಬುವ ಕೆಲಸ ಮಾಡುತ್ತಾರೆ. ತಿಂಗಳಿಗೆ ಅವರಿಗೆ ₹13 ಸಾವಿರ ಸಂಬಳ ಕೊಡುತ್ತಾರೆ. ಇಡೀ ಕುಟುಂಬ ಶಿವಕುಮಾರ ಅವರನ್ನೇ ಅವಲಂಬಿಸಿದೆ. ಗುಂಡಿನ ದಾಳಿಯಲ್ಲಿ ಅವರು ಸತ್ತಿದ್ದಾರೆ ಎಂದು ಮಾಧ್ಯಮಗಳು ತೋರಿಸಿದಾಗ ಇಡೀ ಕುಟುಂಬದ ಜಂಘಾಬಲವೇ ಅಡಗಿ ಹೋಗಿತ್ತು. ಈ ರೀತಿ ಯಾರೂ ಮಾಡಬಾರದು. ಯಾರಿಗಾದರೂ ಕನಿಷ್ಠ ಮನುಷ್ಯತ್ವ ಎನ್ನುವುದು ಇರಬೇಕು’ ಎಂದು ನೋವಿನಿಂದ ಹೇಳಿದರು.
‘ಎಸ್‌ಬಿಐ ಕಚೇರಿಯೊಳಗಿಂದ ನೋಟಿನ ಕಂತೆಗಳಿರುವ ಟ್ರಂಕ್ ತೆಗೆದುಕೊಂಡು ಜೀಪಿನಲ್ಲಿ ಇರಿಸುವಾಗ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಟ್ರಂಕ್ ಕಿತ್ತುಕೊಳ್ಳುವಾಗ ನಡೆದ ತಳ್ಳಾಟದಲ್ಲಿ ದರೋಡೆಕೋರನೊಬ್ಬ ಸುಮಾರು ಎರಡು ಅಡಿ ದೂರದಿಂದ ಶಿವಕುಮಾರ ಅವರ ಎದೆಗೆ ಗುಂಡು ಹಾರಿಸಿದ್ದಾನೆ.
ಈ ಗುಂಡು ಹೃದಯದಿಂದ 12 ಎಂಎಂ ದೂರದಿಂದ ಒಳಹೊಕ್ಕು ಸೊಂಟದ ಹಿಂಭಾಗದಿಂದ ಹೊರಗೆ ಹೋಗಿದೆ ಎಂದು ಶಸ್ತ್ರಚಿಕಿತ್ಸೆ ನಡೆಸಿರುವ ವೈದ್ಯ ಮುಸ್ತಫಾ ಅವರು ವಿವರಿಸಿದ್ದಾರೆ’ ಎಂದು ಶಿವಕುಮಾರ ಅವರ ಭಾಮೈದ ಶಿವಯೋಗಿ ವಿವರಿಸಿದರು. ‘ತಳ್ಳಾಟದ ಸಂದರ್ಭದಲ್ಲಿ ಶಿವಕುಮಾರ ಕೆಳಗೆ ಬಾಗಿದ್ದಾರೆ. ಹೀಗಾಗಿ ಗುಂಡು ನೇರವಾಗಿ ತಾಗಲಿಲ್ಲ. ಬಹಳ ಹತ್ತಿರದಿಂದ ಗುಂಡು ಹಾರಿಸಿದ್ದರಿಂದ ಗುಂಡು ಅವರ ದೇಹ ಹೊಕ್ಕು ಹೊರ ಹೋಗಿದೆ. ಶಸ್ತ್ರಚಿಕಿತ್ಸೆ ನಂತರ ಶಿವಕುಮಾರ ಪ್ರಾಣಾಪಾಯದಿಂದ ಹೊರಬಂದಿದ್ದಾರೆ. ಆಕ್ಸಿಜನ್ ಅಳವಡಿಸಿದ್ದಾರೆ. ಆಗಾಗ ಕೆಲವೊಮ್ಮೆ ಮಾತು ಕೂಡ ಆಡುತ್ತಿದ್ದಾರೆ’ ಎಂದು ತಿಳಿಸಿದರು.
‘ಹೈದರಾಬಾದ್‌ನ ‘ಕೇರ್’ ಆಸ್ಪತ್ರೆಯಲ್ಲಿ ದಾಖಲಾಗಿರುವ ಶಿವಕುಮಾರ ಅವರನ್ನು ಈಗಾಗಲೇ ಎರಡು ಸಲ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿದೆ. ಇನ್ನೂ ಎರಡ್ಮೂರು ದಿನಗಳಲ್ಲಿ ಇನ್ನೊಂದು ಶಸ್ತ್ರಚಿಕಿತ್ಸೆ ನಡೆಯಲಿದೆ. ಬಡ ಕುಟುಂಬ ಆರ್ಥಿಕವಾಗಿ ಸದೃಢವಾಗಿಲ್ಲ. ಶಸ್ತ್ರಚಿಕಿತ್ಸೆಗೆ ಹಣ ಹೊಂದಿಸಬೇಕಿದೆ. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಆಸ್ಪತ್ರೆಗೆ ಭೇಟಿ ಕೊಟ್ಟು ನಾವು ನಿಮ್ಮೊಂದಿಗಿದ್ದೇವೆ ಎಂದು ಭರವಸೆ ಕೊಟ್ಟಿದ್ದಾರೆ. ಈಗ ತುರ್ತಾಗಿ ಆರ್ಥಿಕ ನೆರವಿನ ಅಗತ್ಯವಿದೆ.
ಸಚಿವರೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿರುವೆ. ಅವರು ಸಿಗುತ್ತಿಲ್ಲ. ಇಂಥ ಕಠಿಣ ಸಂದರ್ಭದಲ್ಲಿ ಸರ್ಕಾರದ ನೆರವಿನ ತುರ್ತು ಅಗತ್ಯವಿದೆ’ ಎಂದು ಶಿವಕುಮಾರ ಅವರ ಭಾಮೈದ ಶಿವಯೋಗಿ ತಿಳಿಸಿದರು. ‘ಗುಂಡೇಟಿನಿಂದ ಶಿವಕುಮಾರ ಅವರ ಶ್ವಾಸಕೋಶ ಸೇರಿದಂತೆ ಹಲವು ಭಾಗಗಳಲ್ಲಿ ನರಗಳು ತುಂಡರಿಸಿವೆ. ಶಸ್ತ್ರಚಿಕಿತ್ಸೆ ಮುಗಿದ ನಂತರ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಮೊದಲಿನಂತೆ ಓಡಾಡಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಘಟನೆಯಲ್ಲಿ ಗುಂಡೇಟಿಗೆ ಮೃತಪಟ್ಟಿರುವ ಗಿರಿ ವೆಂಕಟೇಶ ಅವರಿಗೆ ಸರ್ಕಾರ ₹18 ಲಕ್ಷ ಪರಿಹಾರ ಘೋಷಿಸಿದೆ. ಆದರೆ ಶಿವಕುಮಾರ ಅವರಿಗೆ ಯಾವುದೇ ಪರಿಹಾರ ಘೋಷಿಸಿಲ್ಲ.
ಸರ್ಕಾರ ಬಡ ಕುಟುಂಬದ ಕಡೆಗೆ ಗಮನ ಹರಿಸಬೇಕು. ಪರಿಹಾರ ಬೇಕಾದರೆ ನಂತರ ಕೊಡಲಿ. ಕನಿಷ್ಠ ಆಸ್ಪತ್ರೆಯ ಖರ್ಚಾದರೂ ತುರ್ತಾಗಿ ಭರಿಸಬೇಕು. ಸುಮಾರು ₹11ರಿಂದ ₹12 ಲಕ್ಷ ಖರ್ಚು ಬರುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಸಿಎಂಎಸ್ ಕಂಪನಿಯವರು ಎರಡು ಕಂತುಗಳಲ್ಲಿ ಒಟ್ಟು ₹4.50 ಲಕ್ಷ ಕೊಟ್ಟಿದ್ದಾರೆ. ಇನ್ನೂ ಮಿಕ್ಕುಳಿದ ಹಣ ಹೊಂದಿಸಬೇಕಿದೆ’ ಎಂದು ಹೇಳಿದರು.
‘ಗುಂಡೇಟಿನಿಂದ ರಕ್ತಸಿಕ್ತಗೊಂಡಿದ್ದ ಶಿವಕುಮಾರ ಅವರಿಗೆ ಬ್ರಿಮ್ಸ್‌ನಲ್ಲಿ ಅಲ್ಲಿನ ವೈದ್ಯರು ಸೂಕ್ತ ಉಪಚಾರ ಮಾಡಲಿಲ್ಲ. ಅಲ್ಲಿ ಸರ್ಜನ್ ಕೂಡ ಇರಲಿಲ್ಲ. ಹೀಗಾದರೆ ಆತನನ್ನು ಉಳಿಸಿಕೊಳ್ಳುವುದು ಕಷ್ಟ ಎಂದು ಭಾವಿಸಿ ‘ನಾನು ಇವರನ್ನು ಹೈದರಾಬಾದ್‌ಗೆ ಕೊಂಡೊಯ್ಯುತ್ತೇನೆ.
ಆಂಬುಲೆನ್ಸ್ ಮತ್ತು ನರ್ಸ್ ಒಬ್ಬರನ್ನು ಕಳಿಸಿಕೊಡಿ’ ಎಂದು ಮನವಿ ಮಾಡಿದ್ದೆ. ಆದರೆ ಈಗ ಆಂಬುಲೆನ್ಸ್ ಇಲ್ಲ. ನರ್ಸ್ ಕೂಡ ಯಾರೂ ಇಲ್ಲ ಎಂದು ಹೇಳಿದರು. ಬೇರೆಯವರ ಜೀವಕ್ಕೆ ಬೆಲೆಯಿಲ್ಲವೇ’ ಎಂದು ಶಿವಯೋಗಿ ಪ್ರಶ್ನಿಸಿದರು. ‘ಬ್ರಿಮ್ಸ್‌ನವರು ಆಂಬುಲೆನ್ಸ್ ಹಾಗೂ ನರ್ಸ್ ವ್ಯವಸ್ಥೆ ಮಾಡದ ಕಾರಣ ನಾನು ₹6500 ಪಾವತಿಸಿ ಖಾಸಗಿ ಆಂಬುಲೆನ್ಸ್ ಪ್ರೈವೇಟ್ ನರ್ಸ್ ವ್ಯವಸ್ಥೆ ಮಾಡಿಕೊಂಡು ಹೈದರಾಬಾದ್‌ಗೆ ಹೋದೆ. ಮಾರ್ಗದಲ್ಲಿ ನಿರಂತರವಾಗಿ ಶಿವಕುಮಾರ ಅವರ ದೇಹದಿಂದ ರಕ್ತ ಹೊರ ಹೋಗುತ್ತಿತ್ತು. ನರ್ಸ್ ಉತ್ತಮ ರೀತಿಯಲ್ಲಿ ಉಪಚಾರ ಮಾಡಿದ್ದರಿಂದ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಯಿತು. ಅವರು ನಮ್ಮ ಪಾಲಿನ ದೇವರು’ ಎಂದು ಭಾವುಕರಾದರು.
ಗುಂಡಿನ ದಾಳಿ ನಡೆಸಿ ₹83 ಲಕ್ಷ ದರೋಡೆ ಮಾಡಿರುವ ಇಬ್ಬರು ಆರೋಪಿಗಳ ಬಂಧನಕ್ಕೆ ಬೀದರ್ ಜಿಲ್ಲಾ ಪೊಲೀಸರು ಶತಃಪ್ರಯತ್ನ ನಡೆಸಿದ್ದಾರೆ. ಈಗಾಗಲೇ ಎಂಟು ತಂಡಗಳನ್ನು ರಚಿಸಲಾಗಿದ್ದು ಹೆಚ್ಚುವರಿ ಪೊಲೀಸ್ ಅಧಿಕಾರಿ ಸಿಬ್ಬಂದಿಯನ್ನು ಹೈದರಾಬಾದ್‌ಗೆ ಕಳಿಸಿದ್ದಾರೆ.
ಹೈದರಾಬಾದ್ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆ ಕೈಗೊಂಡಿರುವ ಪೊಲೀಸರು ಇಬ್ಬರು ಆರೋಪಿಗಳ ಹೆಡೆಮುರಿ ಕಟ್ಟಲು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ‘ಆರೋಪಿಗಳ ಗುರುತು ಪತ್ತೆಯಾಗಿದ್ದು ಅವರನ್ನು ಬಂಧಿಸಲಾಗುವುದು’ ಎಂದು ಅಪರಾಧ ವಿಭಾಗದ ಎಡಿಜಿಪಿ ಪಿ. ಹರಿಶೇಖರನ್ ಅವರು ಶುಕ್ರವಾರ ಮಾಧ್ಯಮಗಳಿಗೆ ತಿಳಿಸಿದ್ದರು. ಇನ್ನು ಕಲಬುರಗಿ ವಲಯ ಐಜಿಪಿ ಅಜಯ್ ಹಿಲೋರಿ ಅವರು ಬೀದರ್‌ನಲ್ಲೇ ಬೀಡು ಬಿಟ್ಟಿದ್ದು ಪ್ರತಿಯೊಂದು ಕ್ಷಣದ ಮಾಹಿತಿ ಪಡೆಯುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.