ಬೀದರ್: ‘ರೈತರು ಕೃಷಿಯ ಜೊತೆಯಲ್ಲಿ ಹೈನುಗಾರಿಕೆ, ಕೋಳಿ ಹಾಗೂ ಮೀನು ಸಾಕಾಣಿಕೆ ಕೂಡ ಮಾಡಿದರೆ ಆರ್ಥಿಕವಾಗಿ ಸಬಲರಾಗಬಹುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.
ತಾಲ್ಲೂಕಿನ ಕಮಠಾಣ ಸಮೀಪದ ನಂದಿನಗರದ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 20ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿರುವ ಮೂರು ದಿನಗಳ ಜಾನುವಾರು, ಕುಕ್ಕುಟ ಹಾಗೂ ಮತ್ಸ್ಯಮೇಳವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಪ್ರಕೃತಿ ವಿಕೋಪ, ಬದಲಾಗುತ್ತಿರುವ ಹವಾಮಾನ ವೈಪರೀತ್ಯದ ಸಂದರ್ಭದಲ್ಲಿ ಕೃಷಿಯೊಂದನ್ನೇ ನೆಚ್ಚಿಕೊಳ್ಳುವುದು ಸರಿಯಲ್ಲ. ಬೀದರ್ ಜಿಲ್ಲೆಯಲ್ಲಿ ಶೇ.70 ರಷ್ಟು ರೈತರು ಕೃಷಿ ಅವಲಂಬಿಸಿದ್ದಾರೆ. ರೈತರ ಬೆಳೆಗಳಿಗೆ ವೈಜ್ಞಾನಿಕೆ ಬೆಲೆ ಬರಬೇಕು. ಪ್ರಕೃತಿ ವಿಕೋಪದಂಥ ಪರಿಸ್ಥಿತಿಯಲ್ಲಿ ರೈತರಿಗೆ ಸಾಕಷ್ಟು ನಷ್ಟವಾಗುತ್ತದೆ. ರೈತರು ಕೃಷಿ ಜೊತೆ ಸಹ ಉತ್ಪಾದನೆಗಳಾದ ಪಶು ಸಂಗೋಪನೆಗೂ ಒತ್ತು ಕೊಡಬೇಕು ಎಂದರು.
ಜಿಲ್ಲೆಯಲ್ಲಿ ಕೃಷಿಗೆ ಪೂರಕವಾದ ಉತ್ತಮ ವಾತಾವರಣವಿದೆ. ನೈಸರ್ಗಿಕ ಸಂಪದ್ಭರಿತವಾಗಿದೆ. ಈ ಭಾಗದಲ್ಲಿ ಹೈನುಗಾರಿಕೆ, ಕೋಳಿ, ಕುರಿ ಮತ್ತು ಮೀನು ಸಾಕಾಣಿಕೆಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. 20 ವರ್ಷಗಳ ಹಿಂದೆ ಬೀದರ್ ಜಿಲ್ಲೆಯಲ್ಲಿ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಆರಂಭಿಸಲಾಗಿದೆ. ಈಗಿನ ಯುವಕರಿಗೆ ಹಾಗೂ ಯುವಜನಾಂಗಕ್ಕೆ ಈ ಬಗ್ಗೆ ತರಬೇತಿ ಕೊಟ್ಟು ಆರ್ಥಿಕವಾಗಿ ಸಬಲಗೊಳಿಸಬೇಕಿದೆ ಎಂದು ಹೇಳಿದರು.
ವಿಜ್ಞಾನ ತಂತ್ರಜ್ಞಾನ ಬದಲಾದಂತೆ ವಿಜ್ಞಾನಿಗಳು ಹೊಸ-ಹೊಸ ತಳಿಗಳನ್ನು ಬೆಳಕಿಗೆ ತರುತ್ತಿದ್ದಾರೆ. ರೈತರು ಯಾವ ತಳಿ ಬೆಳೆದರೆ ಹೆಚ್ಚಿನ ಲಾಭವಾಗುತ್ತದೆ ಎಂಬುದರ ಅಗತ್ಯ ತರಬೇತಿ ಪಡೆಯಬೇಕು. ಜಿಲ್ಲೆಯಲ್ಲಿ ಈಗಾಗಲೇ ಒಂದೂವರೆ ಲಕ್ಷ ಹಾಲು ಉತ್ಪಾದಿಸಲಾಗುತ್ತದೆ. ಇನ್ನೂ ಹೆಚ್ಚಿನ ಹಾಲು ಉತ್ಪಾದನೆಗೆ ಮಹಿಳೆಯರು ಒತ್ತು ನೀಡಬೇಕು. ಹಾಲಿನ ಉಪ ಉತ್ಪಾದನೆಗಳಿಗೂ ಸಹ ಮಾರುಕಟ್ಟೆ ಲಭ್ಯವಾಗಬೇಕಾಗಿದೆ. ಸರ್ಕಾರವು ಹೈನುಗಾರಿಕೆ ಸೇರಿದಂತೆ ಕೃಷಿಗೆ ಪೂರಕವಾದ ಚಟುವಟಿಕೆಗಳಿಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಬಡ್ಡಿ ರಹಿತ ಸಾಲ, ರೋಗಗಳನ್ನು ತಡೆಗಟ್ಟಲು ಜಾನುವಾರುಗಳಿಗೆ ಲಸಿಕೆ ನೀಡಲಾಗುತ್ತಿದೆ. ಉತ್ತಮ ಮೇವಿನ ಕಿಟ್‌ಗಳನ್ನು ನೀಡಲಾಗುತ್ತಿದೆ. ರೈತರು ಹಾಗೂ ವಿಜ್ಞಾನಿಗಳ ಜೊತೆ ಸಂವಾದ ನಡೆಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
‘ಸ್ವರ್ಣ ಸಂಚಿಕೆ’ ಬಿಡುಗಡೆಗೊಳಿಸಿದರು. ತಂತ್ರಜ್ಞಾನ ಆಧಾರಿತ ತಳಿ ಗುರುತಿಸುವ ಮೊಬೈಲ್ ಆ್ಯಪ್ ಉದ್ಘಾಟಿಸಿದರು. ರಾಜ್ಯದ 31 ಜಿಲ್ಲೆಗಳ ಸಾಧಕ ರೈತರು ಹಾಗೂ ರೈತ ಮಹಿಳೆಯರನ್ನು ಗೌರವಿಸಿದರು.
ಅಧ್ಯಕ್ಷತೆ ವಹಿಸಿದ್ದ ಬೀದರ್ ದಕ್ಷಿಣ ಶಾಸಕ ಡಾ. ಶೈಲೇಂದ್ರ ಕೆ.ಬೆಲ್ದಾಳೆ, ಮೇಳವು ಪಶುಪಾಲನೆ, ಮೀನುಗಾರಿಕೆ ಮತ್ತು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲು ಸಮಗ್ರ ಮಾಹಿತಿ ಕೊಡುತ್ತದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಹೇಳಿದರು.
ಪೌರಾಡಳಿತ ಸಚಿವ ರಹೀಂ ಖಾನ್, ಹಾರಕೂಡ ಮಠದ ಚನ್ನವೀರ ಶಿವಾಚಾರ್ಯರು, ಭಾಲ್ಕಿ ಹಿರೇಮಠದ ಗುರುಬಸವ ಪಟ್ಟದ್ದೇವರು, ಪಶು ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಆಯುಕ್ತೆ ರೂಪಾ, ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಸಿ.ವೀರಣ್ಣ, ವ್ಯವಸ್ಥಾಪಕ ಮಂಡಳಿ ಸದಸ್ಯರಾದ ಲತಾ ಡಿ.ಎಚ್., ಡಾ.ವೆಂಕಟಾಚಲ ವಿ.ಎಚ್., ಡಾ.ಎಚ್.ಎಂ.ಜಯಪ್ರಕಾಶ, ಸಂಗಪ್ಪ ದೊಡ್ಡಬಸಪ್ಪ ವಾಲೀಕಾರ, ಬಸವರಾಜ ಪಿ.ಭತಮುರ್ಗೆ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ನಿರ್ದೇಶಕ ಡಾ.ಮಂಜುನಾಥ ಪಾಳೇಗಾರ, ಮೀನುಗಾರಿಕೆ ಇಲಾಖೆಯ ನಿರ್ದೇಶಕ ದಿನೇಶ ಕುಮಾರ ಕಲ್ಲೇರ, ಕುಲಸಚಿವ ಡಾ.ಪಿ.ಟಿ.ರಮೇಶ, ಯದಲಾಪೂರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಪ್ನಾ ಸಂಜೀವಕುಮಾರ, ಡೀನ್ ಡಾ.ಎಂ.ಕೆ. ತಾಂದಳೆ, ವಿಸ್ತರಣಾ ಅಧಿಕಾರಿ ಬಸವರಾಜ ಅವಟಿ ಮತ್ತಿತರರು ಹಾಜರಿದ್ದರು.
‘ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಆಡಳಿತ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಅನುದಾನ ಮಂಜೂರಾತಿಗಾಗಿ ಮುಖ್ಯಮಂತ್ರಿ ಜೊತೆ ಚರ್ಚಿಸುತ್ತೇನೆ’ ಎಂದು ಸಚಿವ ಈಶ್ವರ ಬಿ. ಖಂಡ್ರೆ ಆಶ್ವಾಸನೆ ನೀಡಿದರು.
ತಾತ್ಕಾಲಿಕ ಬೋಧಕ-ಬೋಧಕೇತರ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು. ಕೆಕೆಆರ್‌ಡಿಬಿ ಅಡಿಯಲ್ಲಿ ಹೆಚ್ಚಿನ ಅನುದಾನ ನೀಡಲು ಸಹ ಯೋಜಿಸಲಾಗುವುದು ಎಂದು ತಿಳಿಸಿದರು.
‘ಪಶು ವಿ.ವಿಗೆ ಗ್ರಂಥಾಲಯ ಕಟ್ಟಡವೇ ಆಸರೆ’ ಶೀರ್ಷಿಕೆ ಅಡಿ ಜ. 15ರಂದು ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು.
ಮೇಳದ ಅಂಗವಾಗಿ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ ಎಲ್ಲರ ಗಮನ ಸೆಳೆಯುತ್ತಿದೆ. ಅದರಲ್ಲೂ 12 ಅಡಿ ಎತ್ತರದ ಹೂಗಳಿಂದ ಅಲಂಕೃತವಾದ ಭಗವಾನ ಗೌತಮ ಬುದ್ಧನ ಮೂರ್ತಿ ಆಕರ್ಷಿಸುತ್ತಿದೆ. ಬಿಳಿ, ನೇರಳೆ ಬಣ್ಣದ 30 ಕೆ.ಜಿ ಸೇವಂತಿ ಹೂಗಳಿಂದ ಅಲಂಕರಿಸಿರುವುದು ವಿಶೇಷ. ಬುದ್ಧನ ಮೂರ್ತಿ ಎದುರಿಗೆ ಗುಲಾಬಿ ಹೂಗಳಿಂದ ಹೃದಯದ ಆಕಾರದಲ್ಲಿ ನಿಲ್ಲಿಸಿರುವ ಸೆಲ್ಫಿ ಪಾಯಿಂಟ್ ಎದುರು ಛಾಯಾಚಿತ್ರ ತೆಗೆಸಿಕೊಳ್ಳಲು ಶುಕ್ರವಾರ ಜನ ಮುಗಿಬಿದ್ದಿದ್ದರು.
ಇನ್ನು, ಸಿರಿಧಾನ್ಯಗಳಲ್ಲಿ ಡಾ. ಮರಿಗೌಡ ಅವರ ಭಾವಚಿತ್ರ ತಯಾರಿಸಲಾಗಿದೆ. ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ, ಇತ್ತೀಚೆಗೆ ನಿಧನರಾದ ಮನಮೋಹನ್ ಸಿಂಗ್, ರತನ್ ಟಾಟಾ ಅವರ ಭಾವಚಿತ್ರಗಳು ರಂಗೋಲಿಯಲ್ಲಿ ಅರಳಿವೆ. ಇನ್ನು, ಕಲ್ಲಂಗಡಿಯಲ್ಲಿ ಬಸವಣ್ಣ, ಸಂಗೋಳ್ಳಿ ರಾಯಣ್ಣ, ಕುವೆಂಪು, ವಿಶ್ವೇಶ್ವರಯ್ಯ ಸೇರಿದಂತೆ ಹಲವರ ಭಾವಚಿತ್ರಗಳ ಕಲಾಕೃತಿಗಳು ಮನಸೂರೆಗೊಳಿಸುತ್ತಿವೆ.
ಮೇಳದ ಅಂಗವಾಗಿ ದೇಶಿ ತಳಿಯ ಜಾನುವಾರು ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ದೇವಣಿ ಮುರ್ರಾ ತಳಿ, ಪುಂಗನೂರ ಹಸು, ಕಿಲಾರಿ ಆಕಳು, ಜಾಫ್ರಾಬಾದಿ ಎಮ್ಮೆ, ಗಿನಿ, ಟರ್ಕಿ, ಆಸಿಲ್, ರಾಜ–2, ಸ್ವರ್ಣಧಾರ, ಗಿರಿರಾಜ, ನಾಟಿ ಕೋಳಿಗಳ ಪ್ರದರ್ಶನವೂ ಎಲ್ಲರ ಗಮನ ಸೆಳೆಯುತ್ತಿದೆ. ಪ್ರತಿಯೊಂದು ಜಾನುವಾರು, ಕೋಳಿಯ ಕೆಳಗೆ ಅದರ ಸಂಪೂರ್ಣ ವಿವರದ ಫಲಕವನ್ನು ಹಾಕಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.