ADVERTISEMENT

ನ. 4,5ರಂದು ‘ಬಿದರಿ ಉತ್ಸವ’

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2023, 16:01 IST
Last Updated 12 ಸೆಪ್ಟೆಂಬರ್ 2023, 16:01 IST
ಬಿದರಿ ಉತ್ಸವ ಲೋಗೋ
ಬಿದರಿ ಉತ್ಸವ ಲೋಗೋ   

ಬೀದರ್‌: ‘ಪ್ರಸಕ್ತ ಸಾಲಿನ ‘ಬಿದರಿ ಉತ್ಸವ’ ನವೆಂಬರ್‌ 4, 5ರಂದು ನಗರದ ಡಾ. ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ಬೀದರ್‌ ಜಿಲ್ಲಾ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷೆ ರೇಖಾ ಸೌದಿ ತಿಳಿಸಿದ್ದಾರೆ.

ನಗರದ ರಂಗಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ವಿವಿಧ ಸಂಘಟನೆಯ ಪ್ರಮುಖರ ಸಭೆಯಲ್ಲಿ ದಿನಾಂಕ ನಿಗದಿಗೊಳಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಸಂಗೀತ, ಸಾಹಿತ್ಯ, ಚಿತ್ರಕಲೆ, ಕ್ರೀಡೆಗಳ ಮೂಲಕ ಸ್ಥಳೀಯರಿಗೆ ಮನರಂಜನೆ ಒದಗಿಸುವುದು. ಸ್ಥಳೀಯ ಕಲಾವಿದರು, ಲೇಖಕರು, ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.

ADVERTISEMENT

‘ಬಿದರಿ ಉತ್ಸವ’ವು ರಾಜ್ಯಕ್ಕೆ ಮಾದರಿಯಾಗಬೇಕು. ಆ ರೀತಿ ಕಾರ್ಯಕ್ರಮ ಹಮ್ಮಿಕೊಳ್ಳೋಣ ಎಂದು ಬಿಡಿಎ ಮಾಜಿ ಅಧ್ಯಕ್ಷ ಬಾಬುವಾಲಿ ಹೇಳಿದ್ದಾರೆ.

ಸಾಹಿತಿಗಳಾದ ಭಾರತಿ ವಸ್ತ್ರದ, ಸುಬ್ಬಣ್ಣ ಕರಕನಳ್ಳಿ, ಚಿತ್ರಕಲಾವಿದ ಯೋಗೇಶ ಮಠದ, ಕನ್ನಡ ಸಾಹಿತ್ಯ ಪರಿಷತ್ತಿನ ಖಜಾಂಚಿ ಶಿವಶಂಕರ ಟೋಕರೆ, ಪಿಡಿಒ ಸಂಘದ ರಾಜ್ಯ ಘಟಕದ ಪ್ರಮುಖ ಶರದ ಅಭಿಮಾನ, ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಸೋನಾರೆ, ಪ್ರಮುಖರಾದ ಟಿ.ಎಂ. ಮಚ್ಚೆ, ಶಿವಕುಮಾರ ಕಟ್ಟೆ, ಪೃಥ್ವಿರಾಜ, ನಾಗಶೆಟ್ಟಿ ಧರಂಪುರ, ಶಿವರಾಜ ಕಣಜಿ, ಶಿವಕುಮಾರ ಗಡ್ಡೆ, ಶಿವಕುಮಾರ ಸದ್ಲಾಪುರೆ, ಅನಿಲಕುಮಾರ, ರೇವಣಸಿದ್ದಪ್ಪ ಜಲಾದೆ, ಬಾಬುರಾಜ ದಾನಿ, ರಾಜಕುಮಾರ ಹೆಬ್ಬಾಳೆ, ಎಂ.ಪಿ. ಮುದಾಳೆ, ಸತ್ಯಮೂರ್ತಿ, ಕಾಮಶೆಟ್ಟಿ ಚಿಕ್ಕಬಸೆ, ರೋಹನ್‌, ಪಾಂಡುರಂಗ ಬೆಲ್ದಾರ ಇತರರು ಸಭೆಯಲ್ಲಿ ಭಾಗವಹಿಸಿ ಸಲಹೆಗಳನ್ನು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.