ADVERTISEMENT

ಬಿಜೆಪಿಯಿಂದ ನೀತಿ ಸಂಹಿತೆ ಉಲ್ಲಂಘನೆ; ಆರೋಪ

ಕ್ರಮಕ್ಕೆ ಆಗ್ರಹಿಸಿ ಚುನಾವಣಾ ಆಯುಕ್ತರಿಗೆ ಶಾಸಕ ಖಂಡ್ರೆ ಪತ್ರ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2020, 10:41 IST
Last Updated 19 ಡಿಸೆಂಬರ್ 2020, 10:41 IST
ಚಿತ್ರ ಈಶ್ವರ ಖಂಡ್ರೆ, ಶಾಸಕ
ಚಿತ್ರ ಈಶ್ವರ ಖಂಡ್ರೆ, ಶಾಸಕ   

ಭಾಲ್ಕಿ: ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿ ಇದ್ದರೂ ಬಿಜೆಪಿ ಮುಖಂಡರು ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ಕೆಪಿಸಿಸಿ ಕಾಯಾ೯ಧ್ಯಕ್ಷ, ಶಾಸಕ ಈಶ್ವರ ಖಂಡ್ರೆ ಆರೋಪಿಸಿದ್ದಾರೆ.

ಈ ಸಂಬಂಧ ರಾಜ್ಯ ಚುನಾವಣಾ ಆಯುಕ್ತರಿಗೆ ದೂರು ನೀಡಿದ್ದಾರೆ. ಚುನಾವಣಾ ನೀತಿ ಸಂಹಿತೆಯು ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನವೆಂಬರ್‌ 30 ರಿಂದ ಡಿಸೆಂಬರ್‌ 31, 2020ರ ಸಂಜೆ 5-00 ಗಂಟೆವರೆಗೆ ಜಾರಿಯಲ್ಲಿರುತ್ತದೆ. ನೀತಿ ಸಂಹಿತೆಯನ್ನು ಯಾವುದೇ ರೀತಿಯಲ್ಲೂ ಉಲ್ಲಂಘನೆಯಾಗದಂತೆ ಜಿಲ್ಲಾಧಿಕಾರಿ ನೋಡಿಕೊಳ್ಳಬೇಕಾಗುತ್ತದೆ. ಆದರೆ, ಆಡಳಿತಾರೂಢ ಬಿಜೆಪಿ ಪಕ್ಷದ ಮುಖಂಡರು ಔರಾದ್‌-ಬೀದರ್ ನ 47.878 ಕಿ.ಮೀ ರಾಷ್ಟ್ರೀಯ ಹೆದ್ದಾರಿ, ಬೀದರ್ – ಹುಮನಾಬಾದ್ 47.03 ಕಿ.ಮೀ ರಾಷ್ಟ್ರೀಯ ಹೆದ್ದಾರಿ ಮತ್ತು ನೌಬಾದ್‌ ರೈಲ್ವೆ ಗೇಟ್ ಹತ್ತಿರದ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗಳ ಶಂಕು ಸ್ಥಾಪನೆ ಕಾರ್ಯಕ್ರಮವನ್ನು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಡಿಸೆಂಬರ್‌ 19, 2020 ರಂದು ನೆರವೇರಿಸುತ್ತಾರೆ ಎಂಬ ಬೃಹತ್ ಫಲಕಗಳನ್ನು ಚುನಾವಣೆ ನಡೆಯುವ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲೂ ಪ್ರದಶಿ೯ಸಿ, ಪ್ರಚಾರ ಮಾಡುತ್ತಿದ್ದಾರೆ. ಇದು ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ದೂರಿದ್ದಾರೆ.

ಈ ಫಲಕಗಳಲ್ಲಿ ಬಿಜೆಪಿಯ ಹಲವು ನಾಯಕರುಗಳು, ಸ್ಥಳೀಯರ ಭಾವಚಿತ್ರಗಳಿವೆ. ಸಂಸದ ಭಗವಂತ ಖೂಬಾ ಅವರೇ ಈ ಎಲ್ಲ ನಾಮ ಫಲಕಗಳನ್ನು ಹಾಕಿಸಿರುತ್ತಾರೆ ಎಂದು ಆರೋಪಿಸಿದ್ದಾರೆ. ನ್ಯಾಯ ಸಮ್ಮತ ಮತ್ತು ಮುಕ್ತ ಚುನಾವಣೆ ನಡೆಯಬೇಕಾದ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷದ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಲು ಮತ್ತು ಕೂಡಲೇ ಈ ಎಲ್ಲ ಫಲಕ ತೆರವುಗೊಳಿಸಲು ಕ್ರಮ ವಹಿಸಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.