
ಹುಲಸೂರ: ತಾಲ್ಲೂಕಿನಲ್ಲಿ ಜಮೀನುಗಳಲ್ಲಿ ಬಿತ್ತನ ಮಾಡಿದ ಬೀಜ ಮೊಳಕೆಯೊಡೆದು ಬೆಳವಣಿಗೆ ಹಂತದಲ್ಲಿರುವಾಗ ಕೃಷ್ಣಮೃಗಗಳ ಹಾವಳಿ ಹೆಚ್ಚಾಗಿದೆ.
ಪ್ರಾಣಿಗಳು ಹೊಲಕ್ಕೆ ನುಗ್ಗಿ ಬೆಳೆ ಹಾನಿ ಮಾಡುತ್ತಿವೆ. ರೈತರು ಜಿಂಕೆ, ಕಾಡು ಹಂದಿಗಳ ಕಾಟದಿಂದ ಹೈರಾಣಾಗಿರುವ ರೈತರು ತಮ್ಮ ಹೊಲಗಳಿಗೆ ರಕ್ಷಣೆ ಒದಗಿಸಲು ಸೀರೆಗಳ ಮೊರೆ ಹೋಗಿದ್ದಾರೆ.
ತಾಲ್ಲೂಕಿನ ಮೀರಖಲ್, ಸೋಲ ದಾಪಕ, ಗುತ್ತಿ ಹಾಗೂ ಸಾಯಗಾಂವ ಹೋಬಳಿಯ ಮೆಹಕರ, ಅಟ್ಟರಗಾ, ಅಳವಾಯಿ ಸೇರಿ ಇನ್ನು ಹಲವು ಗ್ರಾಮಗಳಲ್ಲಿ ಹೆಚ್ಚಾಗಿ ಕಬ್ಬು ಬೆಳೆಯುತ್ತಾರೆ. ಬೆಳೆ ಉತ್ತಮವಾಗಿದ್ದು ಫಲ ನೀಡುವ ಮುನ್ನವೇ ಕಾಡುಹಂದಿಗಳ ಕಾಟ ಹೆಚ್ಚಾಗಿ ರೈತರು ಹೊಲದ ಸುತ್ತ ಸೀರೆಯ ಕವಚ ರಚಿಸಿಕೊಂಡಿದ್ದಾರೆ.
ರೈತ ಗಣೇಶ ಪಾಟಿಲ ಅವರ 1 ಎಕರೆ 10 ಗುಂಟೆ ಜಮೀನು ಅರಣ್ಯ ಪ್ರದೇಶಕ್ಕೆ ಹತ್ತಿವಿದೆ. ಕಳೆದ ವರ್ಷ ಕಾಡುಹಂದಿಗಳು ಹಾಗೂ ಜಿಂಕೆಗಳು ನುಗ್ಗಿ ಬೆಳೆ ತಿಂದು ಹಾಕಿದ್ದವು. ಹೀಗಾಗಿ ಅವರು ಈಚೆಗೆ ಬಸವಕಲ್ಯಾಣದ ಅಂಗಡಿಗಳಿಗೆ ಹೋಗಿ ಪ್ಲಾಸ್ಟಿಕ್ ಮೆಸ್ ಬಲೆ ಬಗ್ಗೆ ವಿಚಾರಿಸಿದ್ದಾರೆ. ಅಂಗಡಿಯವರು ಸುಮಾರು ₹17 ಸಾವಿರ ಆಗುತ್ತದೆ ಎಂದಾಗ ಗಣೇಶ ಅವರು ಬರಿಗೈಯಲ್ಲಿ ಹಿಂದಿರುಗಿ ಸುಲಭದ ದಾರಿ ಕಂಡುಕೊಂಡಿದ್ದಾರೆ.
‘ಊರಿನಲ್ಲಿ ಹಳೆಯ ಹತ್ತಾರು ಸೀರೆ ಸಂಗ್ರಹಿಸಿ ಹೊಲದ ಸುತ್ತ ಕಂಬ ನೆಟ್ಟು, ತಂತಿ ಬೇಲಿ ಬಳಸಿ ಅದಕ್ಕೆ ಕಟ್ಟಿದ್ದೇನೆ’ ಎಂದು ಗಣೇಶ ಪಾಟೀಲ ಪ್ರಜಾವಾಣಿಗೆ ತಿಳಿಸಿದರು.
ಕಾಡುಪ್ರಾಣಿಗಳು ಹೊಲಕ್ಕೆ ನುಗ್ಗಿ ಬೆಳೆ ತಿಂದು ಹಾಕುವುದರಿಂದ ಈ ಭಾಗದಲ್ಲಿ ತರಕಾರಿ ಬೆಳೆಯುವುದೂ ಕಷ್ಟವಾಗಿದೆ. ರಾತ್ರಿ ವೇಳೆ ಕಾಡುಹಂದಿಗಳು ಹಿಂಡುಹಿಂಡಾಗಿ ಬಂದು ಕಬ್ಬು, ಕಡಲೆ, ತರಕಾರಿ ತಿನ್ನುತ್ತವೆ. ರೈತರು ನಷ್ಟ ಅನುಭವಿಸುತ್ತಿದ್ದಾರೆ ಎಂದು ಸೋಲ ದಾಪಕ ಗ್ರಾಮದ ತಾನಾಜಿ ಹೇಳಿದರು.
ರೈತರಿಗೆ ಬೆಳೆ ರಕ್ಷಿಸುವುದೇ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಹೊಲಗಳಿಗೆ ಹಿಂಡಾಗಿ ನುಗ್ಗುವ ಜಿಂಕೆಗಳನ್ನು ಹೊಡೆಯಲು ಹಾಗೂ ಹಿಡಿಯಲು ಅವಕಾಶ ಇಲ್ಲದಿರುವದೂ ಮತ್ತೊಂದು ಸಂಕಷ್ಟಕ್ಕೆ ಕಾರಣವಾಗಿದೆ.
ಜಿಂಕೆಗಳ ಸಂತತಿ ಹೆಚ್ಚಾಗಿರುವ ಹಿನ್ನಲೆಯಲ್ಲಿ ಅರಣ್ಯ ಇಲಾಖೆಯಿಂದ ರೈತರಿಗೆ ಬೆಳೆಹಾನಿ ತಡೆಯಲು ಸೂಕ್ತ ಮಾರ್ಗದರ್ಶನ ನೀಡಲಾಗುತ್ತಿದೆ. ವನ್ಯ ಜೀವಿಗಳಿಂದ ಬೆಳೆ ರಕ್ಷಿಸಲು ಜಮೀನುಗಳಿಗೆ ತಂತಿಬೇಲಿ ಅಳವಡಿಸಲು ಶೇ50ರಷ್ಟು ಸಹಾಯಧನ ನೀಡಲಾಗುವುದು. ಬೆಳೆಹಾನಿ ಕುರಿತು ರೈತರು ಅರ್ಜಿ ಸಲ್ಲಿಸಿದರೆ ಸಮೀಕ್ಷೆ ಕೈಗೊಂಡು ಪರಿಹಾರ ನೀಡಲಾಗುವುದು’ ಎಂದು ಆರ್‌ಎಫ್‌ಒ ಸಂತೋಷ ಕುಮಾರ ಹಾಲಹಳ್ಳೇ ತಿಳಿಸಿದರು.
ಬೆಳೆ ನಾಶ ಮಾಡುವ ಪ್ರಾಣಿಗಳನ್ನು ತಡೆಯಲು ಮುಂದಾಗುವ ರೈತರ ವಿರುದ್ಧ ಸರ್ಕಾರ ಹಾಗೂ ಅಧಿಕಾರಿಗಳು ಕಾನೂನು ಮೂಲಕ ಶಿಕ್ಷೆಗೆ ಒಳಪಡಿಸುತ್ತಾರೆ. ಅನೇಕ ರೈತರಿಗೆ ಸಕಾಲಕ್ಕೆ ಪರಿಹಾರ ಬಂದಿಲ್ಲ, ಹಾಕಿದ ಅರ್ಜಿಗಳು ಅಲ್ಲಿಯೇ ಉಳಿದಿವೆ ಎನ್ನುತ್ತಾರೆ ರೈತರು.
ಕಾಡು ಹಂದಿ ಹಾಗೂ ಜಿಂಕೆಗಳು ಕಡಲೆ ಬಿತ್ತನೆ ಮಾಡಿದ ನಂತರ ಹೊಲದಲ್ಲಿನ ಬೀಜ ತಿಂದು ನಾಶ ಮಾಡುತ್ತಿದ್ದು ನಷ್ಟವಾಗುತಿತ್ತು. ಸೀರೆ ಕಟ್ಟಿ ಬೆಳೆ ರಕ್ಷಣೆ ಮಾಡಿಕೊಳ್ಳುತ್ತಿದ್ದೇನೆಗಣೇಶ ಪಾಟೀಲ ರೈತ ಮೀರಖಲ್
ಕಾಡು ಹಂದಿಗಳಿಂದ ಬೆಳೆ ಹಾನಿಯಾದ ಕುರಿತು ಪರಿಶೀಲಿಸಲಾಗುವುದು. ರೈತರು ಸರಿಯಾದ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಿದರೆ ಪರಿಹಾರ ನೀಡಲಾಗುವುದು. ಸರ್ಕಾರರಿಂದ ಸೋಲಾರ್ ತಂತಿಯ ಬೇಲಿ ಅಳವಡಿಸಿಕೊಳ್ಳಬಹುದುಸಂತೋಷಕುಮಾರ ಹಾಲಹಳ್ಳೇ ಆರ್‌ಎಫ್ಒ ಹುಲಸೂರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.