ADVERTISEMENT

ಏಸು ಕ್ರಿಸ್ತನ ಸ್ಮರಣೆ; ಚರ್ಚ್‌ಗಳಲ್ಲಿ ವಿಶೇಷ ಸಾಮೂಹಿಕ ಪ್ರಾರ್ಥನೆ

ಕ್ರಿಸ್‌ಮಸ್‌ ಸಂಭ್ರಮದಲ್ಲಿ ಮಿಂದೆದ್ದ ಕ್ರೈಸ್ತರು

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 13:06 IST
Last Updated 25 ಡಿಸೆಂಬರ್ 2025, 13:06 IST
   

ಬೀದರ್‌: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಕ್ರಿಸ್‌ಮಸ್‌ ಹಬ್ಬವನ್ನು ಗುರುವಾರ ಸಡಗರ, ಸಂಭ್ರಮ ಹಾಗೂ ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು.

ಹಬ್ಬದ ಸಂಭ್ರಮದಲ್ಲಿ ಇಡೀ ಕ್ರೈಸ್ತ ಧರ್ಮೀಯರು ಮಿಂದೆದ್ದರು. ಜಿಲ್ಲೆಯಾದ್ಯಂತ ಇರುವ ಚರ್ಚ್‌ಗಳಲ್ಲಿ ದಿನವಿಡೀ ಸಂಭ್ರಮದ ವಾತಾವರಣ ಇತ್ತು. ನಗರದ ಅತಿ ದೊಡ್ಡ ಹಾಗೂ ಪ್ರಧಾನ ಕಾರ್ಯಕ್ರಮ ನಡೆಯುವ ಸೇಂಟ್‌ ಪಾಲ್‌ ಮೆಥೋಡಿಸ್ಟ್‌ ಸೆಂಟ್ರಲ್‌ ಚರ್ಚ್‌ನಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಅಪಾರ ಸಂಖ್ಯೆಯ ಜನ ಪಾಲ್ಗೊಂಡರು. ಚರ್ಚ್‌ ಒಳಭಾಗದಲ್ಲಿ ಜನ ಕುಳಿತುಕೊಳ್ಳಲು ಜಾಗ ಸಾಲದ ಕಾರಣ ಪ್ರಾಂಗಣದಲ್ಲಿ ಶಾಮಿಯಾನ ಹಾಕಿ ಕೂರಲು ವ್ಯವಸ್ಥೆ ಮಾಡಲಾಗಿತ್ತು. ಚರ್ಚ್‌ ಹೊರಭಾಗದಲ್ಲಿ ದಿನವಿಡೀ ಜನರ ಓಡಾಟ ಇತ್ತು.

ಸೇಂಟ್‌ ಪಾಲ್‌ ಮೆಥೋಡಿಸ್ಟ್‌ ಸೆಂಟ್ರಲ್‌ ಚರ್ಚಿನ ಜಿಲ್ಲಾ ಮೇಲ್ವಿಚಾರಕ ಡಿಸೋಜ್‌ ಥಾಮಸ್‌ ಅವರು ಕೇಕ್‌ ಕತ್ತರಿಸಿ ಕ್ರಿಸ್‌ಮಸ್‌ ಹಬ್ಬಕ್ಕೆ ಚಾಲನೆ ನೀಡಿದರು. ಬಳಿಕ ಪ್ರಾರ್ಥನೆ ನಡೆಸಿಕೊಟ್ಟರು. ಏಸು ಕ್ರಿಸ್ತನ ತ್ಯಾಗ, ಬಲಿದಾನ ಸ್ಮರಿಸಿ, ಶುಭ ಸಂದೇಶ ನೀಡಿದರು. ಅಲ್ಲಿದ್ದವರು ಕೂಡ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ADVERTISEMENT

‘ಏಸು ಕ್ರಿಸ್ತ ಅವರು ಈ ಲೋಕಕ್ಕೆ ಶಾಂತಿದೂತರಾಗಿ ಬಂದಿದ್ದರು. ಜಗ ಬದುಕಲಿ, ಜನ ಬದುಕಲೆಂದು ಪ್ರಾಣ ತ್ಯಾಗ ಮಾಡಿದರು. ಪ್ರತಿಯೊಬ್ಬರೂ ಅವರಿಗೆ ಋಣಿ ಆಗಿರಬೇಕು’ ಎಂದು ಡಿಸೋಜ್‌ ಥಾಮಸ್‌ ಹೇಳಿದರು.

ಚರ್ಚ್‌ ಹಾಗೂ ಹೊರಭಾಗದಲ್ಲಿ ನಿರ್ಮಿಸಿದ್ದ ಗೋದಲಿ, ಕ್ರಿಸ್‌ಮಸ್‌ ಟ್ರೀ ಎದುರು ಜನ ಛಾಯಾಚಿತ್ರ, ಸೆಲ್ಫಿ ತೆಗೆದುಕೊಂಡರು. ದಿನವಿಡೀ ಗೆಳೆಯರೊಂದಿಗೆ ಚರ್ಚ್‌ ಆವರಣದಲ್ಲಿ ಸುತ್ತಾಡಿ ಸಂಭ್ರಮಿಸಿದರು. ಯುವತಿಯರು ಕ್ರಿಸ್ತನ ಗುಣಗಾನ ಮಾಡುವ ಹಾಡುಗಳನ್ನು ಹಾಡಿದರು. ಚರ್ಚ್‌ ಆವರಣದಲ್ಲಿ ಜಾತ್ರೆಯ ವಾತಾವರಣ ಇತ್ತು.

ಪಾಸ್ಟರ್‌ಗಳಾದ ರೆವರೆಂಡ್‌ ಸೈಮನ್‌ ಮಾರ್ಕ್‌, ರೆವರೆಂಡ್‌ ಎಸ್‌.ಎಲ್‌. ತುಕಾರಾಂ, ರೆವರೆಂಡ್‌ ಮಾರ್ಟಿನ್‌ ಅಭಿಷೇಕ್‌, ರೆವರೆಂಡ್‌ ಇಮ್ಯಾನುವೆಲ್‌ ಪ್ರದೀಪ್‌ ಕುಮಾರ್‌, ರೆವರೆಂಡ್‌ ಜಾನ್‌ ರೂಫಸ್‌, ಕಾರ್ಯದರ್ಶಿ ಬಿ.ಕೆ. ಸುಂದರರಾಜ್‌, ಖಜಾಂಚಿ ಜೈಪ್ರಕಾಶ್‌ ಎಸ್‌., ಮೈಕಲ್‌ ಜೋಸೆಫ್‌, ಪೌರಾಡಳಿತ ಸಚಿವ ರಹೀಂ ಖಾನ್‌, ಪಾಲಿಕೆ ಅಧ್ಯಕ್ಷ ಮುಹಮ್ಮದ್‌ ಗೌಸ್‌, ಜೆಡಿಎಸ್‌ ಜಿಲ್ಲಾಧ್ಯಕ್ಷ ರಮೇಶ ಪಾಟೀಲ್‌ ಸೋಲಪೂರ, ಮುಖಂಡ ಬಂಡೆಪ್ಪ ಕಾಶೆಂಪುರ್‌ ಅವರು ಕ್ರೈಸ್ತ ಧರ್ಮೀಯರಿಗೆ ಹಬ್ಬದ ಶುಭ ಕೋರಿದರು.

ನಗರದ ಶಹಾಪುರ ಗೇಟ್‌, ಗುಂಪಾ, ನಾವದಗೇರಿ, ಮೈಲೂರ, ಚಿದ್ರಿ, ಶಿವನಗರ, ನೌಬಾದ್‌ ಸೇರಿದಂತೆ ಜಿಲ್ಲೆಯಾದ್ಯಂತ ಇರುವ 200ಕ್ಕೂ ಹೆಚ್ಚು ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು. ಚರ್ಚ್‌, ಶಿಲುಬೆ ಹಾಗೂ ಅದರ ಮಾರ್ಗವನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿತ್ತು. ಕ್ರೈಸ್ತ ಧರ್ಮೀಯರ ಮನೆಗಳು ಹೊರತಾಗಿರಲಿಲ್ಲ. ಮನೆಗಳಲ್ಲಿ ಕೇಕ್‌ ಕತ್ತರಿಸಿ, ಬಂಧು ಬಾಂಧವರು, ಸ್ನೇಹಿತರನ್ನು ಕರೆದು, ಕೇಕ್‌, ಸಿಹಿ ತಿನಿಸು ಉಣಬಡಿಸಿ ಸೌಹಾರ್ದ ಮೆರೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.