ADVERTISEMENT

ರೈತರ ಬೆನ್ನು ಮೂಳೆ ಮುರಿದ ಕಾಂಗ್ರೆಸ್ ಸರ್ಕಾರ: ಎನ್‌. ರವಿಕುಮಾರ್‌ ಆರೋಪ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 10:53 IST
Last Updated 25 ನವೆಂಬರ್ 2025, 10:53 IST
<div class="paragraphs"><p>ಎನ್‌. ರವಿಕುಮಾರ್‌</p></div>

ಎನ್‌. ರವಿಕುಮಾರ್‌

   

ಬೀದರ್‌: ‘ರಾಜ್ಯದ ಕಾಂಗ್ರೆಸ್‌ ಸರ್ಕಾರ ರೈತರ ಬೆನ್ನು ಮೂಳೆ ಮುರಿದಿದೆ. ಸಕಾಲಕ್ಕೆ ರೈತರ ನೆರವಿಗೆ ಬರದ ಈ ಸರ್ಕಾರ ರೈತ ವಿರೋಧಿ’ ಎಂದು ವಿಧಾನ ಪರಿಷತ್‌ ಮುಖ್ಯ ಸಚೇತಕ ಎನ್‌. ರವಿಕುಮಾರ್‌ ಆರೋಪಿಸಿದರು.

ಸಿದ್ದರಾಮಯ್ಯನವರು ಅನುಭವಿ ರಾಜಕಾರಣಿ, ಹಲವು ಸಲ ಬಜೆಟ್‌ ಮಂಡಿಸಿದವರು. ಆದರೆ, ಸಂಕಷ್ಟದಲ್ಲಿರುವ ರೈತರ ನೆರವಿಗೆ ಬಂದಿಲ್ಲ. ಇಡೀ ರಾಜ್ಯದಲ್ಲಿ ಮೆಕ್ಕೆಜೋಳ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಈಗಾಗಲೇ ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್‌ಗೆ ₹2,400 ಬೆಂಬಲ ಬೆಲೆ ನಿಗದಿಪಡಿಸಿದೆ. ಆದರೆ, ರಾಜ್ಯ ಸರ್ಕಾರ ಇದುವರೆಗೆ ಖರೀದಿ ಕೇಂದ್ರ ಆರಂಭಿಸಿಲ್ಲ ಎಂದು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ಸರ್ಕಾರ ಖಾಸಗಿ ಏಜೆನ್ಸಿ ಜೊತೆ ಶಾಮಿಲಾಗಿರುವ ಅನುಮಾನ ಬರುತ್ತಿದೆ. ಖಾಸಗಿಯಲ್ಲಿ ಪ್ರತಿ ಕ್ವಿಂಟಲ್‌ ಮೆಕ್ಕೆಜೋಳ ₹1,600 ಖರೀದಿಸುವ ಮನೆ ಮುರುಕ ಒಪ್ಪಂದ ಮಾಡಿಕೊಂಡಿದ್ದಾರೆ ಎಂದೆನಿಸುತ್ತಿದೆ. ಕೃಷಿ ಸಚಿವರು ಎಲ್ಲಿದ್ದಾರೆ? ಮೆಕ್ಕೆಜೋಳ ಖರೀದಿಸುತ್ತಿಲ್ಲ. ಆದರೆ, ಈ ಶಾಸಕನಿಗೆ ಇಷ್ಟು, ಮತ್ತೊಬ್ಬ ಶಾಸಕನಿಗೆ ಇಷ್ಟು ಎಂದು ಸಿಎಂ ಕುರ್ಚಿಗಾಗಿ ಬೆಲೆ ನಿಗದಿಪಡಿಸಿ ಖರೀದಿಸುತ್ತಿದ್ದಾರೆ ಎಂದು ಆರೋಪಿಸಿದರು.

ಸ್ವತಃ ಸಿದ್ದರಾಮಯ್ಯನವರು ಕಬ್ಬು ಬೆಳೆಗಾರರ ಸಭೆ ಕರೆದು, ಪ್ರತಿ ಟನ್‌ ಕಬ್ಬಿಗೆ ₹3,300 ಬೆಲೆ ನಿಗದಿಪಡಿಸಿದ್ದಾರೆ. ಹೀಗಿರುವಾಗ ಬೀದರ್‌ನಲ್ಲೇಕೆ ₹2,950 ಕೊಟ್ಟಿದ್ದಾರೆ. ಸಚಿವ ಈಶ್ವರ ಬಿ. ಖಂಡ್ರೆ ಏನು ಮಾಡುತ್ತಿದ್ದಾರೆ. ಅವರ ಸರ್ಕಾರವೇ ಮಾಡಿದ ನಿಯಮ ಅವರೇ ಮುರಿದರೆ ಹೇಗೆ? ಮುಖ್ಯಮಂತ್ರಿಯವರ ಮಾತು ಎಲ್ಲಾ ಜಿಲ್ಲೆಯವರು ಪಾಲಿಸಬೇಕಲ್ಲ. ಬೀದರ್‌ನಲ್ಲೇಕೆ ಮಾಡುತ್ತಿಲ್ಲ ಎಂದು ಕೇಳಿದರು.

ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಯಿಂದ ಅನೇಕ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ಖಂಡಿಸಿ ನ. 27ರಿಂದ 29ರ ವರೆಗೆ ರಾಜ್ಯದ 200 ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದಿಂದ ಹೋರಾಟ ನಡೆಸಲಾಗುವುದು. ಡಿ. 1,2ರಂದು ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

‘ಕೃಷಿ ಅಧಿಕಾರಿ ಕಚೇರಿಗೆ ಮುತ್ತಿಗೆ’

‘ಅತಿವೃಷ್ಟಿಯಿಂದ ಜಿಲ್ಲೆಯ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೇಂದ್ರದಿಂದ ₹8,500 ಕೋಟಿ ಎನ್‌ಡಿಆರ್‌ಎಫ್‌ ಹಣ ಬಿಡುಗಡೆಗೊಳಿಸಲಾಗಿದೆ. ಆದರೆ, ಜಿಲ್ಲೆಯ ಬೀದರ್‌, ಹುಮನಾಬಾದ್‌, ಬಸವಕಲ್ಯಾಣ ಹಾಗೂ ಹುಲಸೂರಿನ ರೈತರ ಖಾತೆಗೆ ಇದುವರೆಗೆ ಪರಿಹಾರ ಜಮೆ ಮಾಡಿಲ್ಲ. ಕೇಂದ್ರದ ಹಣವೇಕೆ ಕೊಟ್ಟಿಲ್ಲ? ಬೊಕ್ಕಸ ಖಾಲಿ ಆಗಿದೆಯಾ? ಇದರ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಉತ್ತರಿಸಬೇಕು. ರೈತ ವಿರೋಧಿ ನೀತಿ ಖಂಡಿಸಿ ನ. 29ರಂದು ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಕೃಷಿ ಅಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ’ ಎಂದು ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ತಿಳಿಸಿದರು.

‘ಪೊಲೀಸ್‌ ಇಲಾಖೆ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ದೂರು’

‘ವಿರೋಧ ಪಕ್ಷವಾಗಿ ಬಿಜೆಪಿ ರೈತರು, ಜನಸಾಮಾನ್ಯರ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದೆ. ಆದರೆ, ನಮ್ಮನ್ನು ಜಿಲ್ಲಾ ಪೊಲೀಸ್‌ ಇಲಾಖೆ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ವಿರೋಧ ಪಕ್ಷದವರು ಏನು ಮಾತನಾಡಬಾರದು ಎಂಬ ಭಯದ ವಾತಾವರಣ ಪೊಲೀಸರು ನಿರ್ಮಿಸುತ್ತಿದ್ದಾರೆ. ಕಾಂಗ್ರೆಸ್‌ ಕೈಗೊಂಬೆಗಳಾಗಿ ಕೆಲಸ ನಿರ್ವಹಿಸುತ್ತಿರುವ ಪೊಲೀಸ್‌ ಇಲಾಖೆ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಲು ನಿರ್ಧರಿಸಲಾಗಿದೆ’ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್‌ ತಿಳಿಸಿದರು.

ಪತ್ರಿಕಾಗೋಷ್ಠಿ ನಡೆಸಿರುವುದಕ್ಕೆ ಪೊಲೀಸರು ನನ್ನನ್ನು ಕರೆಸಿ, ದಾಖಲೆ ಕೇಳಿದ್ದಾರೆ. ಇದು ಸರಿಯಾದ ನಡೆಯೇ ಎಂದು ಪ್ರಶ್ನಿಸಿದರು.

‘ಕಮಾಂಡ್‌ ಇಲ್ಲದ ಅಧ್ಯಕ್ಷ’

‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಮಾಂಡ್‌ ಇಲ್ಲದ ಅಧ್ಯಕ್ಷರು. ಅವರಿಗೆ ರಾಜ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ’ ಎಂದು ವಿಧಾನ ಪರಿಷತ್‌ ಮುಖ್ಯ ಸಚೇತಕ ಎನ್‌. ರವಿಕುಮಾರ್‌ ಟೀಕಿಸಿದರು.

ಈ ಜಗತ್ತಿನಲ್ಲಿ ಮೊಟ್ಟ ಮೊದಲ ಬಾರಿಗೆ ಮತ ಕಳ್ಳತನ ಆರಂಭಿಸಿರುವುದು ಕಾಂಗ್ರೆಸ್‌ನವರು. ಅವರಿಗೆ ಇದರ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.