ಪ್ರಧಾನಮಂತ್ರಿ ಫಸಲ್ ವಿಮೆ ಯೋಜನೆ ಕುರಿತ ಪ್ರಚಾರ ವಾಹನಗಳನ್ನು ಸಂಸದ ಸಾಗರ್ ಖಂಡ್ರೆ ಅವರು ಬೀದರ್ ಜಿಲ್ಲಾ ಪಂಚಾಯಿತಿಯಲ್ಲಿ ಮಂಗಳವಾರ ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು
ಬೀದರ್: ‘ನಮ್ಮಲ್ಲಿ ಯಾವುದೇ ಜಗಳವಿಲ್ಲ. ನಾವೆಲ್ಲ ಒಗ್ಗಟ್ಟಾಗಿದ್ದೇವೆ’ ಎಂದು ಸಂಸದ ಸಾಗರ್ ಖಂಡ್ರೆ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ದಿಶಾ ಸಮಿತಿ ಸಭೆಯಲ್ಲಿ ಭಾಗವಹಿಸಲು ಬಂದಿದ್ದ ಅವರು ಪತ್ರಕರ್ತರ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಜಗಳ ಇದೆ ಅಂತ ಮಾಧ್ಯಮದವರು ಹೇಳುತ್ತಿದ್ದೀರಿ. ಆದರೆ, ಆ ತರಹ ಯಾವುದೇ ಜಗಳವಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸೇರಿದಂತೆ ಎಲ್ಲರೂ ಚುನಾವಣೆ ಪೂರ್ವದಿಂದಲೂ ಒಗ್ಗಟ್ಟಾಗಿದ್ದೇವೆ. ಈಗಲೂ ಒಗ್ಗಟ್ಟಿನಿಂದ ಇದ್ದೇವೆ ಎಂದರು.
ನಮ್ಮ ಪಕ್ಷದಲ್ಲಿ ಸ್ವಾತಂತ್ರ್ಯ ಇದೆ. ಪ್ರಜಾಪ್ರಭುತ್ವ ಇದೆ. ಯಾವುದೇ ಕೆಲಸದಲ್ಲಿ ನೂರಕ್ಕೆ ನೂರರಷ್ಟು ಜನ ಖುಷಿಯಾಗಿರುವುದಿಲ್ಲ. ಶೇ 90ರಷ್ಟು ಜನ ಖುಷಿಯಾಗಿದ್ದರೆ, ಶೇ 10ರಷ್ಟು ಜನಕ್ಕೆ ಬೇಸರವಾಗಿರಬಹುದು. ಒಂದೇ ಪರಿವಾರದಲ್ಲಿ ಅಣ್ಣ ತಮ್ಮಂದಿರು ಏನಾದರೂ ಒಂದು ಸಮಸ್ಯೆಯಿಂದ ಜಗಳವಾಡುತ್ತಿರುತ್ತಾರೆ. ಇದು ಕೂಡ ಹಾಗೆನೇ. ಯಾವುದೋ ಒಂದು ರೀತಿಯಲ್ಲಿ ಅವರಿಗೆ ಸಮಸ್ಯೆ ಆಗಿರಬಹುದು. ಅದಕ್ಕೆ ಅವರು ದೂರು ಕೊಟ್ಟಿದ್ದಾರೆ. ಅವರ ಏನೇ ಸಮಸ್ಯೆ ಇದ್ದರೂ ನಮ್ಮ ಪಕ್ಷದ ವರಿಷ್ಠರು ಅದನ್ನು ಬಗೆಹರಿಸುತ್ತಾರೆ ಎಂದು ಬೀದರ್ ಜಿಲ್ಲಾ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿದರು.
ನಮ್ಮ ಪಕ್ಷದಲ್ಲಿ ಏನೂ ಬದಲಾವಣೆ ಆಗಿಲ್ಲ. ಈಗಲೂ ನಮ್ಮ ಪಕ್ಷದಲ್ಲಿ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಾಗಿದ್ದೇವೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.