ಬಸವಕಲ್ಯಾಣ: ಮಳೆಗಾಗಿ ಮುಗಿಲು ನೋಡುತ್ತಿರುವಾಗಲೇ ಸೋಮವಾರ ರಾತ್ರಿ ದಿಢೀರನೆ ಸುರಿದ ವರುಣಾರ್ಭಟಕ್ಕೆ ತಾಲ್ಲೂಕಿನ ಕೊಹಿನೂರ ಹೋಬಳಿ ವ್ಯಾಪ್ತಿಯಲ್ಲಿನ ಬೆಳೆ ನಾಶವಾಗಿದ್ದು ರೈತವರ್ಗ ತತ್ತರಿಸುವಂತಾಗಿದೆ.
ಕೇವಲ ಅರ್ಧ ಗಂಟೆ ಸುರಿದ ಮಳೆಗೆ ಹಳ್ಳಕೊಳ್ಳಗಳು ಭೋರ್ಗರೆದಿವೆ. ಬಟಗೇರಾದಿಂದ ಪಹಾಡಗೆ ಹೋಗುವ ರಸ್ತೆ ಹಾಗೂ ಲಾಡವಂತಿವಾಡಿ ರಸ್ತೆಯಲ್ಲಿನ ಸೇತುವೆಗಳು ಮುಳುಗಿದ್ದರಿಂದ ಕೆಲ ಗಂಟೆಗಳವರೆಗೆ ಅದನ್ನು ದಾಟಲಾಗದೆ ವಾಹನಗಳು ವಾಪಸು ಹೋಗಿವೆ. ಈ ಸೇತುವೆಗಳಿಗೆ ಹಾನಿ ಆಗಿದ್ದರಿಂದ ಬೆಳಿಗ್ಗೆಯೂ ವಾಹನ ಸಂಚಾರ ಸ್ಥಗಿತಗೊಂಡು ಶಾಲಾ ಕಾಲೇಜುಗಳಿಗೆ ಹೋಗುವ ಮಕ್ಕಳು ಮತ್ತು ತುರ್ತು ಕೆಲಸದವರು ಪರದಾಡಬೇಕಾಯಿತು.
‘ಲಾಡವಂತಿ ವಾಡಿಯಿಂದ ವಿವಿಧ ಶಾಲೆಗಳಿಗೆ 30 ಮಕ್ಕಳು ಹೋಗುತ್ತಾರೆ. ಸೇತುವೆಗೆ ಹಾನಿ ಅಗಿದ್ದರಿಂದ ವಾಹನಗಳ ಸಂಚಾರಕ್ಕೆ ಅಡೆತಡೆ ಆಯಿತು. ಗ್ರಾಮಸ್ಥರು ತಕ್ಷಣ ಧಾವಿಸಿ ಕಲ್ಲುಗಳನ್ನು ತೆಗೆದು ದಾರಿಮಾಡಿಕೊಟ್ಟಿದ್ದರಿಂದ ತುರ್ತಾಗಿ ಸಮಸ್ಯೆ ಬಗೆಹರಿದಿದೆ. ಲಾಡವಂತಿ, ರಾಮತೀರ್ಥ ವ್ಯಾಪ್ತಿಯ ಹೊಲಗಳಲ್ಲಿನ ಬೆಳೆ ಹಾಳಾಗಿದೆ’ ಎಂದು ಗ್ರಾಮದ ಮುಖಂಡ ವಿಲಾಸ ತರಮೂಡೆ ತಿಳಿಸಿದ್ದಾರೆ.
‘ಕೊಹಿನೂರ ಸಮೀಪದ ಹಳ್ಳ ಕೂಡ ಉಕ್ಕಿ ಹರಿದಿದ್ದರಿಂದ ಪಕ್ಕದ ಜಮೀನುಗಳಲ್ಲಿ ನೀರು ನುಗ್ಗಿದೆ. ನೂರಾರು ಎಕರೆಯಲ್ಲಿನ ಸೋಯಾ ಅವರೆ, ತೊಗರಿ ಮತ್ತಿತರೆ ಬೆಳೆ ಕೊಚ್ಚಿಕೊಂಡು ಹೋಗಿದೆ. ಕೆಲ ಜಮೀನುಗಳಲ್ಲಿ ಬರೀ ಕಲ್ಲು ಮಣ್ಣು ಕಾಣುತ್ತಿದೆ’ ಎಂದು ರೈತ ಪ್ರಶಾಂತ ಲಕಮಾಜಿ ಹೇಳಿದ್ದಾರೆ.
‘ಬಟಗೇರಾ, ಅಟ್ಟೂರ್, ಪಹಾಡ ಗ್ರಾಮಗಳ ವ್ಯಾಪ್ತಿಯ ಹೊಲಗಳಲ್ಲಿ ನೀರು ಸಂಗ್ರಹಗೊಂಡಿರುವುದನ್ನು ಕಂಡಿದ್ದೇನೆ. ಹಾನಿಗೊಳಗಾದ ಸೇತುವೆಗಳ ದುರುಸ್ತಿ ಕಾರ್ಯ ಶೀಘ್ರ ನಡೆಸಿ ಬಸ್ ಹಾಗೂ ಇತರೆ ವಾಹನಗಳ ಸಂಚಾರಕ್ಕೆ ಸಂಬಂಧಿತರು ಅನುಕೂಲತೆ ಒದಗಿಸಬೇಕು’ ಎಂದು ಮುರ್ತುಜಾ ಪಟೇಲ್ ಆಗ್ರಹಿಸಿದ್ದಾರೆ.
ಉಪ ತಹಶೀಲ್ದಾರ್ ಶ್ರೀನಿವಾಸ ಕುಲಕರ್ಣಿ, ಕಂದಾಯ ನಿರೀಕ್ಷಕ ಆಕಾಶ, ಗ್ರಾಮ ಸಹಾಯಕ ವಿಜಯಕುಮಾರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣಾ ಅವರು ಲಾಡವಂತಿ ಸೇತುವೆ ಹಾಗೂ ವಿವಿಧ ಗ್ರಾಮಗಳ ಜಮೀನುಗಳಿಗೆ ಭೇಟಿನೀಡಿ ಪರಿಶೀಲಿಸಿದ್ದಾರೆ.
‘ಈ ಭಾಗದಲ್ಲಿ ರಾತ್ರಿ 110 ಮೀಮೀ ನಷ್ಟು ಮಳೆಯಾದ ಬಗ್ಗೆ ವರದಿಯಾಗಿದೆ. ಇದರಿಂದ ಹೊಲಗಳಲ್ಲಿನ ಬೆಳೆ ನೆಲಕಚ್ಚಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬರಬೇಕಿದೆ’ ಎಂದು ತಹಶೀಲ್ದಾರ್ ದತ್ತಾತ್ರೇಯ ಜೆ.ಗಾದಾ ತಿಳಿಸಿದ್ದಾರೆ.
ಹೆಲಿಕಾಪ್ಟರ್ ಮೂಲಕ ಹಾನಿ ಸಮೀಕ್ಷೆ ನಡೆಸಿದ್ದುಂಟು...
ಈ ಭಾಗದಲ್ಲಿ ವರ್ಷವರ್ಷವೂ ಅತಿವೃಷ್ಟಿಯಿಂದ ಹಾನಿ ಆಗುತ್ತಿದೆ. ಜುಲೈ- ಆಗಸ್ಟ್ ತಿಂಗಳ ಮಧ್ಯದಲ್ಲಿ ಈ ಹಳ್ಳಿಗಳ ವ್ಯಾಪ್ತಿಯಲ್ಲಷ್ಟೇ ಭಾರಿ ಮಳೆ ಸುರಿಯುವುದು ವಾಡಿಕೆಯಾಗಿದೆ. ಶಿರಗಾಪುರ ಕೆರೆ ಒಡೆದು ಹಾನಿಯಾದಾಗ ಆಗ ಶಾಸಕರಾಗಿದ್ದ ಮಲ್ಲಿಕಾರ್ಜುನ ಖೂಬಾ ಅವರು ಹೆಲಿಕಾಪ್ಟರ್ ಮೂಲಕ ಹಾನಿ ಸಮೀಕ್ಷೆ ನಡೆಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಉಮಾಶ್ರೀ ಅವರು ಸಹ ಈ ಗ್ರಾಮಗಳಿಗೆ ಭೇಟಿ ನೀಡಿದ್ದರು. ನಂತರದಲ್ಲಿ ಖೇರ್ಡಾ-ಲೇಂಗಟಿ ಮಧ್ಯದ ನಾಲಾ ಉಕ್ಕಿ ಹರಿದಿದ್ದರಿಂದ ಸಾವಿರಾರು ಎಕರೆ ಜಮೀನು ಹಾಳಾಗಿತ್ತು. ಆಲಗೂಡ ಮತ್ತು ಬಟಗೇರಾ ವಾಡಿ ಕೆರೆಯೂ ಒಡೆದಿತ್ತು. ವರ್ಷದ ಹಿಂದೆ ಭೋಸ್ಗಾ ಮತ್ತು ಅಟ್ಟೂರ್ ಕೆರೆ ಒಡೆದು ಹಾನಿಯಾಗಿದೆ.
ಬಟಗೇರಾ ಸಮೀಪದ ಜೀರ್ಗಿ ಹಳ್ಳ ತುಂಬಿ ಹರಿದಿದ್ದರಿಂದ ಸೇತುವೆಗೆ ಹಾನಿಯಾಗಿದ್ದು ಅನೇಕ ಹೊಲಗಳಲ್ಲಿ ನೀರು ನುಗ್ಗಿ ಬೆಳೆ ಕೊಚ್ಚಿಕೊಂಡು ಹೋಗಿದೆ.ಮುರ್ತುಜಾ ಪಟೇಲ್, ಬಟಗೇರಾ ಗ್ರಾಮಸ್ಥ
ಲಾಡವಂತಿ ಗ್ರಾಮದ ಸುತ್ತಲಿನಲ್ಲಿ ಭಾರಿ ಮಳೆ ಸುರಿದಿದ್ದರಿಂದ ರೈತರಿಗೆ ಹಾನಿಯಾಗಿದ್ದು ಕಂದಾಯ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ಸಮೀಕ್ಷೆ ನಡೆಸಿದ್ದಾರೆ.ವಿಲಾಸ ತರಮೂಡೆ, ಮುಖಂಡ ಲಾಡವಂತಿವಾಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.