ಔರಾದ್: ಪರಿಸರ ಜಾಗೃತಿಗಾಗಿ ಸರ್ಕಾರದ ಹತ್ತಾರು ಕಾರ್ಯಕ್ರಮಗಳ ನಡುವೆಯೂ ಇಲ್ಲಿಯ ಯುವದಂಪತಿ ಪರಿಸರ ಸ್ನೇಹಿ ಸಗಣಿ ಗಣಪ ಪ್ರತಿಮೆ ಹಾಗೂ ವಿಭೂತಿ ತಯಾರಿಸಿ ಗಮನ ಸೆಳೆದಿದ್ದಾರೆ.
ಎಂಜಿನಿಯರ್ ಓದಿರುವ ಪಟ್ಟಣದ ನಿವಾಸಿ ವೀರೇಶ್ ಮುದ್ದಾ, ತನ್ನ ಖಾಸಗಿ ಕೆಲಸದ ಜತೆಗೆ ಬಿಡುವಿನ ವೇಳೆಯಲ್ಲಿ ಪತ್ನಿ ಕಾವೇರಿ ಜತೆ ಪರಿಸರ ಸ್ನೇಹಿ ಕೆಲಸದಲ್ಲಿ ತೊಡಗಿಸಿಕೊಂಡು ಮಾದರಿಯಾಗಿದ್ದಾರೆ.
ಇಲ್ಲಿಯ ಅಮರೇಶ್ವರ ಗೋಶಾಲೆಯ ಅಭಿಯಾನಿಯೂ ಆಗಿರುವ ವೀರೇಶ್, ಕಳೆದ ಎರಡು ವರ್ಷಗಳಿಂದ ಆಕಳು ಸಗಣಿಯಿಂದ ವಿಭೂತಿ ತಯಾರಿಸಿ ಯಶಸ್ವಿ ಕಂಡು ಈ ವರ್ಷ ಸಗಣಿಯಿಂದ ಗಣೇಶ ತಯಾರಿಸಿದ್ದಾರೆ. 5 ಇಂಚು ಎತ್ತರದ ಒಟ್ಟು 200 ಗಣೇಶ ಪ್ರತಿಮೆ ತಯಾರಿಸಿದ್ದು, ಇದರಲ್ಲಿ ಶೇ 90ರಷ್ಟು ಸಗಣೆ ಹಾಗೂ ಶೇ 10ರಷ್ಟು ಜಿಗಿ ಪೌಡರ್ ಹೊರತುಪಡಿಸಿದರೆ ಬೇರೆನೂ ಇಲ್ಲ. ಇದಕ್ಕಾಗಿ ಒಟ್ಟು ₹10 ರಿಂದ ₹12 ಸಾವಿರ ಖರ್ಚು ಬಂದಿದೆ.
‘ಈಗಾಗಲೇ ₹100 ಕ್ಕೆ ಒಂದರಂತೆ ನೂರು ಗಣೇಶ್ ಮೂರ್ತಿ ಮಾರಾಟ ಮಾಡಿದ್ದೇವೆ. 15 ದಿನಗಳಲ್ಲಿ ₹8 ರಿಂದ ₹10 ಸಾವಿರ ಬಂದರೂ ಖುಷಿ ಇದೆ. ಜನ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣೇಶ ಬಿಟ್ಟು ಇಂತಹ ಮಣ್ಣು, ಸಗಣಿಯಿಂದ ತಯಾರಿಸಿದ ಗಣೇಶ ಬಳಸಲು ಪ್ರೇರಣೆ ನೀಡುವುದು ನನ್ನ ಉದ್ದೇಶ ಎನ್ನುತ್ತಾರೆ’ ವೀರೇಶ್ ಮುದ್ದಾ.
‘ಆಕಳು ಸಗಣಿ, ಮಣ್ಣಿನಿಂದ ತಯಾರಿಸಿದ ಗಣಪ ಸೇರಿದಂತೆ ಯಾವುದೇ ವಸ್ತುಗಳು ನೈಸರ್ಗಿಕವಾಗಿರುವುದರಿಂದ ಬೇಗ ಕರಗುತ್ತವೆ. ಉತ್ತಮ ಗೊಬ್ಬರವಾಗಿ ಕಾರ್ಯನಿರ್ವಹಿಸುತ್ತದೆ. ಈ ಹಿನ್ನೆಲೆಯಲ್ಲಿ ನಾವು ಆಕಳು ಸಗಣಿಯಿಂದ ವಿಭೂತಿ, ಹಣತೆ, ದೇವರಿಗೆ ಅರ್ಪಿಸುವ ಧೂಪ ತಯಾರಿಸುತ್ತಿದ್ದೇವೆ. ನಮ್ಮ ವಿಭೂತಿಗೆ ಹೆಚ್ಚಿನ ಬೇಡಿಕೆ ಇದೆ.
ಕಳೆದ ವರ್ಷ ಕೂಡಲಸಂಗಮ ಹಾಗೂ ಹುಮನಾಬಾದ್‌ನಲ್ಲಿ 20 ಸಾವಿರ ವಿಭೂತಿ ಮಾರಾಟ ಮಾಡಿದ್ದೇವೆ. ಇನ್ನು 10 ಸಾವಿರ ಮನೆಯಲ್ಲಿ ಇವೆ. ಈ ಕೆಲಸದಲ್ಲಿ ನಮಗೆ ತುಂಬಾ ತೃಪ್ತಿ ಇದೆ. ನಮ್ಮ ಜತೆ ಇಬ್ಬರು ಮಹಿಳೆಯರು ಕೆಲಸ ಮಾಡುತ್ತಿದ್ದಾರೆ’ ಎಂದು ಕಾವೇರಿ ಮುದ್ದಾ ಪರಿಸರ ಸ್ನೇಹಿ ಗಣಪ ತಯಾರಿಕೆ ಬಗ್ಗೆ ತುಂಬಾ ಹೆಮ್ಮೆ ಪಡುತ್ತಾರೆ.
ನನಗೆ ಆಕಳು ಪರಿಸರ ಅಂದರೆ ತುಂಬಾ ಇಷ್ಟ. ಹೆಚ್ಚು ಕಾಲ ಗೋ ಶಾಲೆಯಲ್ಲಿ ಕಳೆಯುತ್ತೇನೆ. ಹೀಗಾಗಿ ಈ ವರ್ಷ ಸಗಣಿಯಿಂದ ಗಣೇಶ ಪ್ರತಿಮೆ ತಯಾರಿಸಿದ್ದೇವೆವೀರೇಶ ಮುದ್ದಾ
ಎಲ್ಲರೂ ಪರಿಸರ ಸ್ನೇಹಿ ಗಣೇಶ ಬಳಸುವ ಮೂಲಕ ಪರಿಸರ ರಕ್ಷಣೆಗೆ ಸಹಕಾರ ನೀಡಬೇಕು. ಸರ್ಕಾರ ಕೂಡ ಇಂತಹ ಕೆಲಸಕ್ಕೆ ಉತ್ತೇಜನ ನೀಡುತ್ತಿದೆಮಹೇಶ ಪಾಟೀಲ ತಹಶೀಲ್ದಾರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.