ADVERTISEMENT

ರಾಜ್ಯದಲ್ಲಿ ರಸಗೊಬ್ಬರದ ಕೃತಕ ಅಭಾವ: ಭಗವಂತ ಖೂಬಾ ಆರೋಪ

ಎಲ್ಲದಕ್ಕೂ ಮೋದಿ ಸರ್ಕಾರ ಟೀಕಿಸುವ ಹೀನ ಮನಃಸ್ಥಿತಿ ಎಂದು ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 5:08 IST
Last Updated 28 ಜುಲೈ 2025, 5:08 IST
ಭಗವಂತ ಖೂಬಾ 
ಭಗವಂತ ಖೂಬಾ    

ಬೀದರ್: ‘ಕೇಂದ್ರ ಸರ್ಕಾರವು ರಾಜ್ಯಕ್ಕೆ ಬೇಡಿಕೆಗೆ ತಕ್ಕಂತೆ ಮುಂಗಾರು ಹಂಗಾಮಿಗೆ ರಸಗೊಬ್ಬರ ಪೂರೈಸಿದೆ. ಆದರೆ, ರಾಜ್ಯದ ಕಾಂಗ್ರೆಸ್ ಸರ್ಕಾರವು ಕೃತಕ ಅಭಾವ ಸೃಷ್ಟಿಸಿ, ಹೆಚ್ಚಿನ ಬೆಲೆಗೆ ಕಾಳಸಂತೆಯಲ್ಲಿ ಗೊಬ್ಬರ ಮಾರಾಟ ಮಾಡಿ, ಹಣ ಲೂಟಿ ಹೊಡೆಯುವ ತಂತ್ರ ಮಾಡುತ್ತಿದೆ’ ಎಂದು ಕೇಂದ್ರದ ಮಾಜಿ ರಸಗೊಬ್ಬರ ಖಾತೆ ಸಚಿವ, ಬಿಜೆಪಿ ಮುಖಂಡ ಭಗವಂತ ಖೂಬಾ ಆರೋಪಿಸಿದರು.

ನಗರದಲ್ಲಿ ಭಾನುವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಯೂರಿಯಾ, ಡಿಎಪಿ ರಸಗೊಬ್ಬರ ಕೊರತೆ ಉಂಟಾಗಿ‌ ಹಾಹಾಕಾರ ಸೃಷ್ಟಿಯಾಗಿದೆ. ಕಾಂಗ್ರೆಸ್ ಸರ್ಕಾರದ ಈ ನಡವಳಿಕೆಯನ್ನು ಬಿಜೆಪಿ ದಿಕ್ಕರಿಸುತ್ತದೆ’ ಎಂದರು.

‘ಪ್ರತಿ ಕೆಜಿ ಗೊಬ್ಬರವನ್ನು ಕಾಳಸಂತೆಯಲ್ಲಿ ನೂರು ರೂಪಾಯಿ ಹೆಚ್ಚಿಗೆ ಪಡೆದು ಮಾರಾಟ ಮಾಡಲಾಗುತ್ತಿದೆ. ಅಗತ್ಯ ಪ್ರಮಾಣದಲ್ಲಿ ರಸಗೊಬ್ಬರವಿದ್ದರೂ ಕೃತಕ ಅಭಾವ ಸೃಷ್ಟಿಸಲಾಗಿದೆ. ಎಲ್ಲ ರಾಜ್ಯಗಳಿಗೆ ಕೇಂದ್ರ ಸರ್ಕಾರ ಕಾಲಕಾಲಕ್ಕೆ ಗೊಬ್ಬರ, ಅಗತ್ಯ ಅನುದಾನ ನೀಡುತ್ತಾ ಬಂದಿದೆ. ಆದರೆ, ಯಾವುದೇ ವಿಷಯವಿದ್ದರೂ ಮೋದಿ ಸರ್ಕಾರದ ವಿರುದ್ಧ ಬೊಟ್ಟು ಮಾಡಿ ತೋರಿಸಲಾಗುತ್ತಿದೆ. ಇದು ಕಾಂಗ್ರೆಸ್‌ನವರ ಹೀನ ಮನಃಸ್ಥಿತಿಗೆ ಸಾಕ್ಷಿ’ ಎಂದು ಹೇಳಿದರು.

ADVERTISEMENT

‘ನಾನು ಈ ಹಿಂದೆ ಕೇಂದ್ರದಲ್ಲಿ ರಸಗೊಬ್ಬರ ಖಾತೆ ಸಚಿವನಾಗಿ ಕೆಲಸ ಮಾಡಿದ್ದೇನೆ. ಅತ್ಯಂತ ಸಮರ್ಥವಾಗಿ ನಿಭಾಯಿಸಿ ಸಮಯಕ್ಕೆ‌ ಸರಿಯಾಗಿ ರಸಗೊಬ್ಬರ ಪೂರೈಸಿರುವೆ. ಇದರ ಬಗ್ಗೆ ರಾಜ್ಯದ ರೈತರಿಗೆ ತಿಳಿದಿದೆ. ಇಷ್ಟಿದ್ದರೂ ರಾಜ್ಯ ಸರ್ಕಾರ ಕೇಂದ್ರದ ಕಡೆಗೆ ಬೊಟ್ಟು ಮಾಡುತ್ತಿದೆ. ರಸಗೊಬ್ಬರದ ವಿಷಯದಲ್ಲಿ ಕಾಂಗ್ರೆಸ್‌ನವರು ಹೇಳುತ್ತಿರುವುದು ಸುಳ್ಳು. ಕೇಂದ್ರ ಸರ್ಕಾರ ಯಾವ ರಾಜ್ಯಕ್ಕೂ ತಾರತಮ್ಯ ಮಾಡಿಲ್ಲ. ಕರ್ನಾಟಕವೊಂದೇ ಅಲ್ಲ, ಯಾವ್ಯಾವ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆಯೋ‌ ಅಲ್ಲೆಲ್ಲಾ ರಸಗೊಬ್ಬರ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ’ ಎಂದು ಆರೋಪಿಸಿದರು.

‘ಮುಂಗಾರು ಹಂಗಾಮಿನಲ್ಲಿ ರಾಜ್ಯಕ್ಕೆ 11.17 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಬೇಕು. ಕೇಂದ್ರ ಸರ್ಕಾರ ಇದುವರೆಗೆ 8.73 ಲಕ್ಷ ಮೆಟ್ರಿಕ್ ಟನ್ ಕಳಿಸಿದೆ. ಇದರಲ್ಲಿ 7.08 ಲಕ್ಷ ಮೆಟ್ರಿಕ್ ಟನ್ ಮಾರಾಟವಾಗಿದೆ. ಇಂದಿಗೂ 1.65 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಲಭ್ಯವಿದೆ. ಕೇಂದ್ರದಿಂದ 7,121 ಮೆಟ್ರಿಕ್ ಟನ್ ಬರುತ್ತಿದೆ. ಇನ್ನೂ ರಾಜ್ಯಕ್ಕೆ 4 ಲಕ್ಷ ಮೆಟ್ರಿಕ್ ಟನ್ ಡಿಎಪಿ ಬೇಕಿದೆ. ಕೇಂದ್ರ ಸರ್ಕಾರ 2.95 ಲಕ್ಷ ಮೆಟ್ರಿಕ್ ಟನ್ ಕಳಿಸಿಕೊಟ್ಟಿದೆ. ಇದುವರೆಗೆ 2.24 ಲಕ್ಷ ಮೆಟ್ರಿಕ್ ಟನ್ ಮಾರಾಟವಾಗಿದೆ. ಈಗಲೂ 71 ಸಾವಿರ ಮೆಟ್ರಿಕ್ ಟನ್ ದಾಸ್ತಾನು ಇದೆ. 12 ಸಾವಿರ ಮೆಟ್ರಿಕ್ ಟನ್ ಕೇಂದ್ರ ಕಳಿಸಿಕೊಟ್ಟಿದ್ದು, ಶೀಘ್ರದಲ್ಲೇ ರಾಜ್ಯಕ್ಕೆ ತಲುಪಲಿದೆ. ಬೀದರ್ ಜಿಲ್ಲೆಯಲ್ಲೂ ಯೂರಿಯಾ ಹಾಗೂ ಡಿಎಪಿ ಗೊಬ್ಬರ ಲಭ್ಯವಿದೆ. ಜಿಲ್ಲಾಡಳಿತ ಎಲ್ಲ ರೈತರಿಗೂ ಸಮರ್ಪಕವಾಗಿ ರಸಗೊಬ್ಬರ ವಿತರಣೆಗೆ ಕ್ರಮ ಕೈಗೊಳ್ಳಬೇಕು’ ಎಂದು ಅಂಕಿ ಅಂಶ ಸಮೇತ ವಿವರಿಸಿ ಒತ್ತಾಯಿಸಿದರು.

ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಸೋಮನಾಥ ಪಾಟೀಲ್ ಮಾತನಾಡಿ, ‘ರಾಜ್ಯ ಸರ್ಕಾರ ರಸಗೊಬ್ಬರ ಅಷ್ಟೇ ಅಲ್ಲ, ಕೇಂದ್ರದ ಪ್ರತಿಯೊಂದು ಯೋಜನೆಗಳ ಬಗ್ಗೆ ಅಸಡ್ಡೆ ತೋರುತ್ತಿದೆ. ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಸಮಸ್ಯೆಗೀಡಾದ ರೈತರಿಗೆ ಪರಿಹಾರ ವಿತರಿಸಲು ಕೇಂದ್ರ ಅನುದಾನ ನೀಡಿದೆ. ಆದರೆ, ಇದುವರೆಗೆ ನಯಾ ಪೈಸೆ ಪರಿಹಾರ ನೀಡಿಲ್ಲ. ರೈತರ ಮಕ್ಕಳಿಗಾಗಿ ಜಾರಿಗೆ ತಂದಿದ್ದ ವಿದ್ಯಾನಿಧಿ ಯೋಜನೆ ನಿಲ್ಲಿಸಲಾಗಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿ‌ ರಾಜ್ಯದಿಂದ ನೀಡಲಾಗುತ್ತಿದ್ದ ನೆರವು ಕೂಡ ನಿಲ್ಲಿಸಲಾಗಿದೆ.‌ ಕಳೆದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ 3,400 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯ ಸರ್ಕಾರಾದ ತಪ್ಪು ನೀತಿಗಳೇ ಇದಕ್ಕೆ ಕಾರಣ’ ಎಂದು ಟೀಕಿಸಿದರು.

ಜಿಲ್ಲಾ ಬಿಜೆಪಿ ಯುವ ಘಟಕದ ಅಧ್ಯಕ್ಷ ಸಂತೋಷ ರೆಡ್ಡಿ, ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಶಿವರಾಜ ಅಲ್ಮಾಜೆ, ಜಿಲ್ಲಾ ಬಿಜೆಪಿ ಮಾಧ್ಯಮ ಸಂಚಾಲಕ ಶ್ರೀನಿವಾಸ್ ಚೌಧರಿ, ಮುಖಂಡ ಬಾಬುವಾಲಿ, ಫರ್ನಾಂಡಿಸ್ ಹಿಪ್ಪಳಗಾಂವ್ ಹಾಜರಿದ್ದರು. 

‘ನನ್ನ ಮೇಲಿನ ಆರೋಪಕ್ಕೆ ಸಂತ್ರಸ್ತ ಯುವತಿ ಉತ್ತರ’

‘ನನ್ನ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಸಂತ್ರಸ್ತ ಯುವತಿ ಉತ್ತರ ನೀಡಿದ್ದಾರೆ. ನನ್ನ ವಿರುದ್ಧದ ಆರೋಪ ಎಷ್ಟು ಗಂಭೀರವಾಗಿದೆ ಎನ್ನುವುದು ಜನರಿಗೂ ಗೊತ್ತಿದೆ’ ಎಂದು ಕೇಂದ್ರದ ಮಾಜಿಸಚಿವ ಭಗವಂತ ಖೂಬಾ ಪ್ರತಿಕ್ರಿಯಿಸಿದರು.

‘ಮಹಾರಾಷ್ಟ್ರದ ಸಂತ್ರಸ್ತ ಯುವತಿ ಹಾಗೂ ಕುಟುಂಬದವರನ್ನು ಭಗವಂತ ಖೂಬಾ ಎತ್ತಿ ಕಟ್ಟಿ ಕುತಂತ್ರ ಮಾಡುತ್ತಿದ್ದಾರೆ ಎಂದು ಸ್ವಪಕ್ಷೀಯ ಶಾಸಕ ಪ್ರಭು ಚವಾಣ್ ಆರೋಪ ಮಾಡಿದ್ದಾರಲ್ಲಾ ಎಂಬ ಪತ್ರಕರ್ತರ ಪ್ರಶ್ನೆಗೆ ಈ ಮೇಲಿನಂತೆ ಉತ್ತರಿಸಿದರು.ವ್ಯಕ್ತಿತ್ವದ ಅರ್ಹತೆ ಇದ್ದರೆ ಜನ ಅದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ’ ಎಂದು ಪ್ರಭು ಚವಾಣ್ ಅವರ ಹೆಸರು ಪ್ರಸ್ತಾಪಿಸದೆ ಕುಟುಕಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.