ADVERTISEMENT

ಮರಣ ಪತ್ರ ಸಚಿನ್‌ ಬರೆದಿದ್ದು: ಎಫ್‌ಎಸ್‌ಎಲ್‌ ಪರೀಕ್ಷೆಯಿಂದ ದೃಢ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2024, 23:30 IST
Last Updated 31 ಡಿಸೆಂಬರ್ 2024, 23:30 IST
ಸಚಿನ್‌ ಪಾಂಚಾಳ್‌
ಸಚಿನ್‌ ಪಾಂಚಾಳ್‌   

ಬೀದರ್‌: ಆತ್ಮಹತ್ಯೆ ಮಾಡಿಕೊಂಡಿರುವ ಯುವ ಗುತ್ತಿಗೆದಾರ ಸಚಿನ್‌ ಮಾನಪ್ಪ ಪಾಂಚಾಳ್‌ (26) ಅವರ ಮರಣ ಪತ್ರವನ್ನು ಅವರೇ ಬರೆದಿದ್ದು ಎಂಬುದು ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ (ಎಫ್‌ಎಸ್‌ಎಲ್‌) ನಡೆಸಿರುವ ಪರೀಕ್ಷೆಯಿಂದ ಮಂಗಳವಾರ ದೃಢಪಟ್ಟಿದೆ.

ಬೀದರ್‌ ರೈಲ್ವೆ ಪೊಲೀಸರು ಸಚಿನ್‌ ಅವರ ಕೈಬರಹದ ಏಳು ಪುಟಗಳ ‘ಡೆತ್‌ನೋಟ್‌’ ಅನ್ನು ಹೈದರಾಬಾದ್‌ನ ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದರು. ಮರಣ ಪತ್ರ ಪರೀಕ್ಷೆಗೆ ಒಳಪಡಿಸಿದಾಗ ಸಚಿನ್‌ ಅವರ ಕೈಬರಹದಿಂದಲೇ ಬರೆದಿದ್ದಾರೆ ಎನ್ನುವುದು ದೃಢಪಟ್ಟಿದೆ ಎಂದು ಪೊಲೀಸ್‌ ಮೂಲಗಳು ‘ಪ್ರಜಾವಾಣಿ’ಗೆ ಖಚಿತಪಡಿಸಿವೆ.

ಸಚಿನ್‌ ಬ್ಯಾಂಕ್‌ ಖಾತೆಗಳ ಬಗ್ಗೆಯೂ ತನಿಖೆ ನಡೆಸಿದ್ದು, ಅವರು ಐದು ಖಾತೆಗಳನ್ನು ಹೊಂದಿದ್ದರು ಎಂಬುದು ಗೊತ್ತಾಗಿದೆ.

ADVERTISEMENT

ಸಚಿನ್‌ ಆತ್ಮಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿರುವುದರಿಂದ ಬೀದರ್‌ ರೈಲ್ವೆ ಪೊಲೀಸರು ಸಚಿನ್‌ ಅವರು ಬಳಸುತ್ತಿದ್ದ ಮೊಬೈಲ್‌ ಸೇರಿದಂತೆ ಘಟನೆಗೆ ಸಂಬಂಧಿಸಿದ ಅಗತ್ಯ ದಾಖಲೆ, ಕಲೆ ಹಾಕಿರುವ ಸಾಕ್ಷ್ಯಗಳನ್ನು ಬೆಂಗಳೂರಿನಲ್ಲಿ ಮಂಗಳವಾರ ಸಿಐಡಿ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.

ಸಚಿನ್‌ ಅವರು ಡಿ. 26ರಂದು ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದರು. ‘ಕಲಬುರಗಿ ಕಾಂಗ್ರೆಸ್‌ ಮುಖಂಡ ರಾಜು ಕಪನೂರ ಸೇರಿದಂತೆ ಇತರೆ ಎಂಟು ಜನ ಕೊಲೆ ಬೆದರಿಕೆ ಹಾಕಿದ್ದು, ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಸಚಿನ್‌ ಮರಣ ಪತ್ರದಲ್ಲಿ ಬರೆದುಕೊಂಡಿದ್ದರು. ರಾಜು ಕಪನೂರ ಅವರು ಸಚಿವ ಪ್ರಿಯಾಂಕ್‌ ಖರ್ಗೆ ಅವರ ಆಪ್ತರಾಗಿದ್ದು, ವಿರೋಧ ಪಕ್ಷದವರು ಪ್ರಿಯಾಂಕ್‌ ಅವರ ರಾಜೀನಾಮೆಗೆ ಪಟ್ಟು ಹಿಡಿದಿದ್ದಾರೆ.

ಸಚಿನ್‌ ನಿಗೂಢ ಸಾವಿನ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಬೀದರ್‌ ಜಿಲ್ಲಾ ಘಟಕದಿಂದ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಧನ್ನೂರ ಠಾಣೆಯ ಪಿಎಸ್‌ಐ ವರ್ಗಾವಣೆ
ಭಾಲ್ಕಿ ತಾಲ್ಲೂಕಿನ ಧನ್ನೂರ (ಎಚ್‌) ಪೊಲೀಸ್‌ ಠಾಣೆಯ ಪಿಎಸ್‌ಐ ವಿಶ್ವರಾಧ್ಯ ಅವರನ್ನು ಮಂಗಳವಾರ (ಡಿ.31) ವರ್ಗಾವಣೆ ಮಾಡಲಾಗಿದೆ. ಧನ್ನೂರ ಠಾಣೆಯಿಂದ ಕಲಬುರಗಿ ವಲಯ ಐ.ಜಿ ಕಚೇರಿಗೆ ಎತ್ತಂಗಡಿ ಮಾಡಲಾಗಿದ್ದು, ತಕ್ಷಣವೇ ಕಲಬುರಗಿಯಲ್ಲಿ ವರದಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ. ಸಚಿನ್‌ ಪಾಂಚಾಳ್‌ ಅವರ ಸಹೋದರಿಯರು ಧನ್ನೂರ ಠಾಣೆಗೆ ದೂರು ಕೊಡಲು ಹೋದಾಗ ವಿಶ್ವರಾಧ್ಯ ಅವರು ಅದನ್ನು ಸ್ವೀಕರಿಸಿ ಎಫ್‌ಐಆರ್‌ ದಾಖಲಿಸಿರಲಿಲ್ಲ. ‘ಘಟನೆ ಸಂಬಂಧ ಈಗಾಗಲೇ ಬೀದರ್‌ನ ಗಾಂಧಿಗಂಜ್‌ ಪೊಲೀಸ್‌ ಠಾಣೆಯ ಇಬ್ಬರು ಹೆಡ್‌ ಕಾನ್‌ಸ್ಟೆಬಲ್‌ಗಳನ್ನು ಅಮಾನತುಗೊಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.