ಹುಲಸೂರ: ನೆರೆಯ ಮಹಾರಾಷ್ಟ್ರದ ಧನೇಗಾಂವ್ ಜಲಾಶಯದಿಂದ ಬಿಡಲಾದ ನೀರಿನಿಂದಾಗಿ ನದಿಯ ಪಕ್ಕದ ನೂರಾರು ಎಕರೆ ಬೆಳೆ ಆಹುತಿ ಪಡೆದುಕೊಂಡ ಹಿನ್ನೆಲೆಯಲ್ಲಿ ಬೀದರ್ ಜಿಲ್ಲಾ ನವ ಚೈತನ್ಯ ಸಮಿತಿಯಿಂದ ಸೋಮವಾರ ಹುಲಸೂರ ಸಮೀಪದ ಕೊಂಗಳಿ ಗ್ರಾಮದಲ್ಲಿ ಮಳೆ ಹಾನಿ ಪ್ರದೇಶಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.
ಈ ವೇಳೆ ಯುವ ಮುಖಂಡ ಡಿ.ಕೆ.ಸಿದ್ರಾಮ ಅವರು ಎದುರು ರೈತರು ತಮ್ಮ ಅಳಲು ತೋಡಿಕೊಂಡರು. ಬಳಿಕ ಮಾತನಾಡಿದ ಅವರು, ‘ಜಿಲ್ಲೆಯ ಔರಾದ, ಕಮಲನಗರ ಹಾಗೂ ಭಾಲ್ಕಿ ತಾಲ್ಲೂಕಿನ ಮಾಂಜ್ರಾ ನದಿ ಪಾತ್ರದ ಗ್ರಾಮಗಳಾದ ಹಲಸಿ ತುಗಾಂವ, ಕೊಂಗಳಿ, ವಾಂಜರಖೇಡ, ಮೆಹಕರ, ಬೋಳೆಗಾಂವ್, ನಾರದಾ ಸಂಗಮ, ಅಟ್ಟರಗಾ, ಸಾಯಗಾಂವ ಸೇರಿ ವಿವಿಧ ಗ್ರಾಮಗಳಲ್ಲಿ ಮುಂಗಾರು ಹಂಗಾಮಿನಲ್ಲಿ ರೈತರು ಅತಿ ಹೆಚ್ಚು ಬಿತ್ತನೆ ಮಾಡಿದ ಉದ್ದು, ಹೆಸರು, ತೊಗರಿ ಹಾಗೂ ಸೊಯಾ ಅವರೆ ಬೆಳೆಗಳು ಜಲಾವೃತವಾಗಿದ್ದು ತೇವಾಂಶ ಹೆಚ್ಚಳದಿಂದ ಕೊಳೆಯುತ್ತಿದ್ದು, ರೈತರಿಗೆ ದಿಕ್ಕು ತೋಚದಂತಾಗಿದೆ.
‘ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹಾಗೂ ಸಂಸದ ಸಾಗರ ಖಂಡ್ರೆ ಅವರು ಈ ಹಿಂದೆ ಮಾಜಿ ಸಂಸದ ಭಗವಂತ ಖೂಬಾ ಅವರ ವಿರುದ್ಧ ಬೇಳೆ ವಿಮೆಗೆ ಸಂಬಂಧಿಸಿದಂತೆ ತೀವ್ರ ವಾಗ್ದಾಳಿ ನಡೆಸಿದ್ದರು. ಆದರೆ ಈಗ ತಂದೆ ಸಚಿವ ಹಾಗೂ ಮಗ ಸಂಸದರಾಗಿದ್ದು, ಕೂಡಲೇ ರಾಜ್ಯ ಸರ್ಕಾರದಿಂದ ಪ್ರಕೃತಿ ವಿಕೋಪದಡಿ ಪ್ರತಿ ಎಕರೆಗೆ ₹30 ಸಾವಿರ ರೂಪಾಯಿ ಹಾಗೂ ಬೆಳೆ ವಿಮೆ ಹಣ ರೈತರ ಖಾತೆಗೆ ನೇರ ವರ್ಗಾವಣೆ ಮಾಡಿ ರೈತರ ಕೂಗು ಕೇಳಬೇಕು’ ಎಂದರು.
‘ಈ ಹಿಂದೆ ನಮ್ಮ ಹೋರಾಟದ ಫಲವಾಗಿ ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರು ₹32 ಕೋಟಿ ವೆಚ್ಚದಲ್ಲಿ ಸಾಯಗಾಂವ, ಹಲಸಿ ತುಗಾಂವ, ಕೊಂಗಳಿ ಗ್ರಾಮದ ಸೇತುವೆ ನಿರ್ಮಾಣಗೊಂಡಿದೆ. ಈಗ ಮತ್ತೆ ಮಳೆ ಹೆಚ್ಚಾದಲ್ಲಿ ಭಾಲ್ಕಿ ತಾಲ್ಲೂಕಿನ ದಾಡಗಿ, ಇಂಚೂರ, ನಿಡೆಬಾನ ಗ್ರಾಮಗಳಿಗೆ ಸಂಪರ್ಕ ಕಡಿತಗೊಳ್ಳುತಿದ್ದು, ಮುಂದಿನ ಮಳೆಗಾಲ ಆರಂಭಕ್ಕೂ ಮೊದಲೇ ಸೇತುವೆ ಎತ್ತರಿಸುವ ಕೆಲಸ ಮಾಡಬೇಕು’ ಎಂದರು.
ಬೀದರ್ ಜಿಲ್ಲಾ ನವ ಚೈತನ್ಯ ಸಮಿತಿಯ ಜಿಲ್ಲಾಧ್ಯಕ್ಷ ಶರದ ದುರ್ಗಾಳೆ, ‘ಬೆಳೆ ಹಾನಿಯಾದ ಹಿನ್ನೆಲೆಯಲ್ಲಿ ಪರಿಹಾರ ನೀಡಲು ಬರುವ ಸೆ.10ರಂದು ಭಾಲ್ಕಿಯಲ್ಲಿ ‘ತಹಶೀಲ್ದಾರ್ ಕಚೇರಿ ಚಲೋ’ ಪ್ರತಿಭಟನೆ ಜೊತೆಗೆ ಮನವಿ ಸಲ್ಲಿಸಲಾಗುತ್ತಿದ್ದು, ತಾಲ್ಲೂಕಿನ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು’ ಎಂದರು.
ಈ ವೇಳೆ ಪ್ರಮುಖರಾದ ಜಯರಾಜ ಕೊಳ್ಳ, ಕೈಲಾಸ ಪಾಟೀಲ, ಕನಕ ಮಲ್ಲೇಶಿ, ಸಂಗಮೇಶ ಭುರೆ, ಸಂಗಮೇಶ ಟೆಂಕಾಳೆ, ಶಿವಾಜಿ ದೇಶಮುಖ, ಬ್ರಹ್ಮಾನಂದ ದೇಶಮುಖ, ಬಾಲಾಜಿ ಮೊರೆ, ಶೇಷೇರಾವ ಢೋಬಳೆ, ಏಕನಾಥ ಕಾರಬಾರಿ, ಭಗವಾನ ಡಾಂಗೆ, ದತ್ತಾ ನವಾಡೆ, ಯುವರಾಜ ಢೋಬಳೆ, ಮಲ್ಲಪ್ಪಾ ದೇಶಮುಖ, ಮಾರುತಿ ಮೇತ್ರೆ, ಯೋಗಾಜಿ ಕಾರಬಾರಿ ಸೇರಿ ಹಲವರು ಉಪಸ್ಥಿತರಿದ್ದರು.
ತಹಶೀಲ್ದಾರ್ ಸೇರಿ ವಿವಿಧ ಇಲಾಖೆ ಅಧಿಕಾರಿಗಳ ಭೇಟಿ
ಭಾರಿ ಮಳೆಯಿಂದಾಗಿ ಹಾಗೂ ನೆರೆಯ ರಾಜ್ಯದ ಜಲಾಶಯದಿಂದ ಬಿಡಲಾದ ನೀರಿನಿಂದಾಗಿ ನದಿ ಪಕ್ಕದ ನೂರಾರು ಎಕರೆ ಬೆಳೆ ಆಹುತಿಯಾಗಿದ್ದು ಸ್ಥಳಕ್ಕೆ ಭಾಲ್ಕಿ ತಹಶೀಲ್ದಾರ್ ಮಲ್ಲಿಕಾರ್ಜುನ ವಡ್ಡನಕೆರೆ ಕೃಷಿ ನಿರ್ದೇಶಕ ಮಲ್ಲಿಕಾರ್ಜುನ್ ಇಒ ಸೂರ್ಯಕಾಂತ ಬಿರಾದಾರ ಕೃಷಿ ಅಧಿಕಾರಿ ರಾಜೇಂದ್ರ ಎದ್ಲಾಪುರೆ ಭೇಟಿ ನೀಡಿ ಪರಿಶೀಲಿಸಿದರು. ತದನಂತರ ಮಾತನಾಡಿ ‘ಈಗಾಗಲೆ ನದಿ ಪಾತ್ರದ ಹೊಲಗಳಲ್ಲಿ ನದಿ ನೀರಿನಿಂದ 13 ಸಾವಿರ ಹೆಕ್ಟೇರ್ ಬೆಳೆ ಸಂಪೂರ್ಣ ಹಾಳಾಗಿದ್ದು ಹೆಸರು ಉದ್ದು ಕಾಳು ಮೊಳಕೆ ಒಡೆಯುತ್ತಿದ್ದು ಮಳೆಯಿಂದ ರೈತರು ಮತ್ತು ನಾಗರಿಕರು ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ. ಭಾಲ್ಕಿ ತಾಲ್ಲೂಕಿನ ಒಟ್ಟು 85 ಮನೆಗಳ ಗೋಡೆ ಕುಸಿದಿದ್ದು ಇದರಲ್ಲಿ ಈಗಾಗಲೇ 45 ಮನೆಗಳ ಪರಿಹಾರದ ಹಣ ಫಲಾನುಭವಿಗಳ ಖಾತೆಗೆ ನೇರ ವರ್ಗಾವಣೆ ಮಾಡಲಾಗಿದೆ.
‘ತಾಲ್ಲೂಕು ಆಡಳಿತ ಕೂಡಲೇ ಮಳೆ ಹಾನಿ ಸಮೀಕ್ಷೆ ನಡೆಸಿ ವೈಜ್ಞಾನಿಕವಾಗಿ ಪರಿಹಾರ ನೀಡಲು ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು’ ಎಂದು ಪ್ರಜಾವಾಣಿಗೆ ತಿಳಿಸಿದರು. ಸಹಾಯಕ ಕೃಷಿ ನಿರ್ದೇಶಕ ಮಲ್ಲಿಕಾರ್ಜುನ್ ಮೇತ್ರೆ ಮಾತನಾಡಿ ‘2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ಪ್ರಕೃತಿ ವಿಕೋಪಕ್ಕೆ ನಷ್ಟದ ಪರಿಹಾರ ಇತ್ಯರ್ಥಪಡಿಸಲು ಬೆಳೆವಿಮೆ ನೋಂದಾಯಿತರು 72 ಗಂಟೆಯೊಳಗೆ ನೇರವಾಗಿ ಟೋಲ್ ಫ್ರೀ ಸಂಖ್ಯೆ 1800-200-5142 ಅಥವಾ 0803-804-3106ಗೆ ಕರೆ ಮಾಡುವುದು. ಟೋಲ್ ಫ್ರೀ ನಂಬರ್ ಕಾರ್ಯ ನಿರ್ವಹಿಸದ ವೇಳೆ ರೈತರು ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಬೆಳೆ ನಷ್ಟದ ಬಗ್ಗೆ ಲಿಖಿತವಾಗಿ ದೂರು ನೀಡುವುದು ಅಥವಾ ಯೂನಿವರ್ಸಲ್ ಸೋಂಪೋ ಜನರಲ್ ಇನ್‌ಶೂರೆನ್ಸ್ ಕಂಪನಿ ಲಿಮಿಟೆಡ್ ತಾಲ್ಲೂಕುವಾರು ನೇಮಿಸಿರುವ ಪ್ರತಿನಿಧಿಗಳನ್ನು ಸಂಪರ್ಕಿಸಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.