ADVERTISEMENT

ಬೀದರ್: ಶತಕ ಬಾರಿಸಿದ ಹಸಿ ಮೆಣಸಿನಕಾಯಿ

ಚಂದ್ರಕಾಂತ ಮಸಾನಿ
Published 12 ಮಾರ್ಚ್ 2022, 19:31 IST
Last Updated 12 ಮಾರ್ಚ್ 2022, 19:31 IST
ಬೀದರ್‌ನ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಡಲಾದ ತರಕಾರಿ  
ಬೀದರ್‌ನ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಡಲಾದ ತರಕಾರಿ     

ಬೀದರ್: ಬೇಸಿಗೆ ಬಿಸಿಲು ಗರಿಬಿಚ್ಚಿಕೊಳ್ಳುತ್ತಿದೆ. ಬಿಸಿಲು ತರಕಾರಿ ಮಾರುಕಟ್ಟೆಗೂ ಬಿಸಿಮುಟ್ಟಿಸುತ್ತಿರುವ ಕಾರಣ ಬಹುತೇಕ ತರಕಾರಿಗಳ ಬೆಲೆಯಲ್ಲಿ ಏರಿಕೆಯಾಗಿದೆ. ಹಸಿ ಮೆಣಸಿನಕಾಯಿ, ಡೊಣ ಮೆಣಸಿನಕಾಯಿ ಹಾಗೂ ಹಿರೇಕಾಯಿ ಬೆಲೆ ಪ್ರತಿ ಕೆಜಿಗೆ ಶತಕ ದಾಟಿದೆ. ಮೆಣಸಿನಕಾಯಿ ಖಾರ ಹೆಚ್ಚಿಸಿಕೊಂಡರೆ, ಹಿರೇಕಾಯಿ ಹಿರಿಹಿರಿ ಹಿಗ್ಗಿ ನಿಂತಿದೆ. ಕರಿಬೇವು ಸ್ವಾದ ಹೆಚ್ಚಿಸಿಕೊಂಡು ಘಮಘಮಿಸುತ್ತಿದೆ.

ಇಲ್ಲಿಯ ತರಕಾರಿ ಮಾರುಕಟ್ಟೆಯಲ್ಲಿ ಬೀಟ್‌ರೂಟ್‌, ಬೆಂಡೆಕಾಯಿ ಹಾಗೂ ಚವಳೆಕಾಯಿ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 2 ಸಾವಿರ ಹೆಚ್ಚಾಗಿದೆ. ಬದನೆಕಾಯಿ, ಬೆಳ್ಳುಳ್ಳಿ, ಗಜ್ಜರಿ, ಬೀನ್ಸ್‌, ಮೆಂತೆ ಸೊಪ್ಪು, ಹೂಕೋಸು, ಸಬ್ಬಸಗಿ, ತೊಂಡೆಕಾಯಿ, ಪಾಲಕ್‌, ಕೊತಂಬರಿ ಹಾಗೂ ಟೊಮೆಟೊ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 1 ಸಾವಿರ ಏರಿಕೆಯಾಗಿದೆ.

ನುಗ್ಗೆಕಾಯಿ ಬೆಲೆ ಎರಡು ಸಾವಿರ ರೂಪಾಯಿ ಕಡಿಮೆಯಾದರೂ ಗ್ರಾಹಕನ ಕೈಗೆಟಕುವ ಬೆಲೆಯಲ್ಲಿ ಇಲ್ಲ. ನುಗ್ಗೆಕಾಯಿ ಮಹಿಮೆ ತಿಳಿದವರು ಬೆಲೆ ಹೆಚ್ಚಾದರೂ ಸ್ವಾದ ಹೆಚ್ಚಿಸಿಕೊಳ್ಳಲು ಹಿಂದೇಟು ಹಾಕುತ್ತಿಲ್ಲ. ಹೀಗಾಗಿ ಆರು ತಿಂಗಳಿಂದ ನುಗ್ಗೆಕಾಯಿ ಬೆಲೆ ಶತಕದ ಮೇಲೆಯೇ ಏರಿ ಕುಳಿತಿದೆ. ಈರುಳ್ಳಿ, ಆಲೂಗಡ್ಡೆ ಹಾಗೂ ಎಲೆಕೋಸು ಬೆಲೆ ಮಾತ್ರ ಸ್ಥಿರವಾಗಿದೆ.

ADVERTISEMENT

‘ಈ ವಾರ ವಾತಾವರಣದಲ್ಲಿ ಏರುಪೇರಾಗಿದೆ. ಮೋಡದ ವಾತಾವರಣದಿಂದ ತರಕಾರಿಗೆ ಕೀಟಬಾಧೆ ಕಾಣಿಸಿಕೊಂಡಿದೆ. ಬೇಸಿಗೆಯೂ ಕಾಲಿಟ್ಟಿರುವ ಕಾರಣ ಸಹಜವಾಗಿ ಬಹುತೇಕ ತರಕಾರಿಗಳ ಬೆಲೆ ಹೆಚ್ಚಾಗಿದೆ. ಬದನೆಕಾಯಿ, ಬೆಂಡೆಕಾಯಿ, ಟೊಮೆಟೊ, ಕರಿಬೇವು ಹಾಗೂ ಕೊತಂಬರಿ ಬೆಲೆಯಲ್ಲಿ ಏರಿಕೆದೆ. ಮುಂದಿನ ವಾರ ಮದುವೆ ಮುಹೂರ್ತಗಳು ಇವೆ. ಹೀಗಾಗಿ ತರಕಾರಿ ಬೆಲೆ ಮತ್ತೆ ಹೆಚ್ಚಳವಾದರೆ ಆಶ್ಚರ್ಯವಿಲ್ಲ’ ಎಂದು ತರಕಾರಿ ವ್ಯಾಪಾರಿ ಶಿವಕುಮಾರ ಮಾಡಗೂಳ ವಿಶ್ಲೇಷಿಸುತ್ತಾರೆ.

ಹೈದರಾಬಾದ್‌ನಿಂದ ಚವಳೆಕಾಯಿ, ಹಿರೇಕಾಯಿ, ಡೊಣ ಮೆಣಸಿನಕಾಯಿ, ಗಜ್ಜರಿ, ಬೀಟ್‌ರೂಟ್‌ ಬೀದರ್‌ ತರಕಾರಿ ಮಾರುಕಟ್ಟೆಗೆ ಬಂದಿದೆ. ಸೋಲಾಪುರದಿಂದ ಈರುಳ್ಳಿ ಹಾಗೂ ಬೆಳ್ಳುಳ್ಳಿ ಆವಕವಾಗಿದೆ. ಹಸಿ ಮೆಣಸಿನಕಾಯಿ ಹಾಗೂ ಕೊತಂಬರಿ ಬೆಳಗಾವಿಯಿಂದ ಬಂದಿದೆ. ಚಿಟಗುಪ್ಪ, ಹುಮನಾಬಾದ್, ಭಾಲ್ಕಿ ಹಾಗೂ ಬೀದರ್ ತಾಲ್ಲೂಕಿನಿಂದ ಬದನೆಕಾಯಿ, ಹೂಕೋಸು, ಎಲೆಕೋಸು ಹಾಗೂ ಕರಿಬೇವು ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.