ADVERTISEMENT

ಗ್ಯಾರಂಟಿಗಳಿಂದ ಜನರ ಜೀವನಮಟ್ಟ ಸುಧಾರಣೆ: ಅಮೃತರಾವ್‌ ಚಿಮಕೋಡೆ

ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 7:31 IST
Last Updated 17 ಡಿಸೆಂಬರ್ 2025, 7:31 IST
ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಮೃತರಾವ್‌ ಚಿಮಕೋಡೆ ಮಾತನಾಡಿದರು. ಜಿಪಂ ಸಿಇಒ ಡಾ.ಗಿರೀಶ್‌ ಬದೋಲೆ ಹಾಜರಿದ್ದರು
ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಮೃತರಾವ್‌ ಚಿಮಕೋಡೆ ಮಾತನಾಡಿದರು. ಜಿಪಂ ಸಿಇಒ ಡಾ.ಗಿರೀಶ್‌ ಬದೋಲೆ ಹಾಜರಿದ್ದರು   

ಬೀದರ್‌: ‘ಗ್ಯಾರಂಟಿಗಳಿಂದ ಜನರ ಜೀವನಮಟ್ಟ ಬಹಳಷ್ಟು ಸುಧಾರಣೆಯಾಗಿದೆ’ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಮೃತರಾವ್‌ ಚಿಮಕೋಡೆ ತಿಳಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಪಂಚ ಗ್ಯಾರಂಟಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿಗಳನ್ನು ಸೂಕ್ತವಾಗಿ ಜನರಿಗೆ ತಲುಪಿಸಬೇಕು. ಪಂಚ ಗ್ಯಾರಂಟಿಗಳಿಂದ ಜನರ ಜೀವನಮಟ್ಟ ಸುಧಾರಣೆ ಹಾಗೂ ಮಹಿಳಾ ಸಬಲೀಕರಣಕ್ಕೆ ದಾರಿಯಾಗಿದೆ. ಗ್ಯಾರಂಟಿ ಯೋಜನೆಗಳ ಬಗ್ಗೆ ಅಧಿಕಾರಿಗಳು ನಿಷ್ಕಾಳಜಿ ತೋರಿಸಬಾರದು. ಸಾಮಾನ್ಯ ಜನರಿಗೆ ಗ್ಯಾರಂಟಿಗಳು ಯಾವುದೇ ತೊಂದರೆಯಾಗದಂತೆ ತಲುಪಬೇಕು’ ಎಂದರು.

ADVERTISEMENT

‘ಜಿಲ್ಲೆಯ ಒಟ್ಟು ಕುಟುಂಬದ ಮಹಿಳಾ ಮುಖ್ಯಸ್ಥೆಯ ಹೆಸರಿನಲ್ಲಿರುವ ಪಡಿತರ ಚೀಟಿಗಳ ಸಂಖ್ಯೆ 3,81,970 ಇವರಲ್ಲಿ ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ 3,56,041 ಫಲಾನುಭವಿಗಳು ನೋಂದಣಿ ಮಾಡಿಸಿರುತ್ತಾರೆ. ಮಾಸಿಕ ₹2,000 ದಂತೆ ₹1,438.77 ಕೋಟಿ ಹಣವನ್ನು ಡಿಬಿಟಿ ಮೂಲಕ ವರ್ಗಾಯಿಸಲಾಗುತ್ತಿದೆ. ಐಟಿ, ಜಿಎಸ್‌ಟಿ ಸಮಸ್ಯೆ ನಿವಾರಣೆ ಆದವರಿಗೆ ಮತ್ತೆ ಅರ್ಜಿ ಸಲ್ಲಿಸಲು ತಿಳಿಸಬೇಕು’ ಎಂದು ಹೇಳಿದರು.

‘ಅನ್ನಭಾಗ್ಯ ಯೋಜನೆ ಅಡಿಯಲ್ಲಿ 13,13,305 ಫಲಾನುಭವಿಗಳಿದ್ದು, ₹333.28 ಕೋಟಿ ಅನುದಾನ ಬಳಕೆಯಾಗಿದೆ. ಜುಲೈ 2023ರಿಂದ ಜನವರಿ 2025ರವರೆಗೆ 5 ಕೆಜಿ ಅಕ್ಕಿ ಮತ್ತು ಉಳಿದ 5 ಕೆಜಿ ಅಕ್ಕಿಯ ಮೊತ್ತವನ್ನು ಡಿಬಿಟಿ ಮೂಲಕ ವರ್ಗಾಯಿಸಲಾಗಿತ್ತು. ಆದರೆ, ಫೆಬ್ರುವರಿ 2025ರಿಂದ 10 ಕೆಜಿ ಅಕ್ಕಿ ನೀಡಲಾಗುತ್ತಿದೆ. ಜುಲೈಯಿಂದ ಅಕ್ಕಿ ಜೊತೆಗೆ ಜೋಳ ಸೇರಿಸಿ ಒಟ್ಟು 10 ಕೆಜಿ ಆಹಾರಧಾನ್ಯ ನೀಡಲಾಗುತ್ತದೆ. ಅಕ್ಟೋಬರ್ ಮಾಹೆಯಿಂದ ಒಟ್ಟು 10 ಕೆಜಿ ಅಕ್ಕಿ ಮಾತ್ರ ವಿತರಿಸಲಾಗಿದೆ. ಪಡಿತರ ಅಕ್ಕಿಯು ಕಾಳಸಂತೆಯಲ್ಲಿ ಮಾರಾಟ ಆಗದಂತೆ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.

‘ಕೆಲವು ಹಳ್ಳಿ ಮತ್ತು ತಾಂಡಾಗಳಲ್ಲಿ ನ್ಯಾಯ ಬೆಲೆ ಅಂಗಡಿ ಇಲ್ಲ. ಬೇರೆ ಗ್ರಾಮಕ್ಕೆ ಹೋಗಿ ತರಬೇಕಾಗಿದೆ. ಜನರಿಗೆ ಇಂತಹ ತೊಂದರೆಯಾಗದಂತೆ ರೇಷನ್ ಉಪ ಕೇಂದ್ರ ಸ್ಥಾಪಿಸಿ, ರೇಷನ್ ನೀಡಬೇಕು. ಥಂಬ್‌ ತೆಗೆದುಕೊಂಡ ಕೂಡಲೇ ರೇಷನ್ ನೀಡಬೇಕು’ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ಯುವನಿಧಿ ಯೋಜನೆ ಅಡಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 14,120 ನೋಂದಣಿಯಾಗಿದ್ದು, ಅದರಲ್ಲಿ 10,539 ಪದವಿ ಅಭ್ಯರ್ಥಿಗಳು ಮತ್ತು 239 ಡಿಪ್ಲೊಮಾ ಫಲಾನುಭವಿಗಳಿಗೆ ₹30.10 ಕೋಟಿ ಅನುದಾನ ಬಳಕೆಯಾಗಿದೆ. ಯುವನಿಧಿ ಯೋಜನೆ ಬಗ್ಗೆ ಅಧಿಕಾರಿಗಳು ಹೆಚ್ಚಿನ ರೀತಿಯಲ್ಲಿ ಪ್ರಚಾರ ಮತ್ತು ತಾಲ್ಲೂಕು ಮಟ್ಟದಲ್ಲೂ ಕೂಡ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಯುವನಿಧಿ ಪ್ಲಸ್ ಕಾರ್ಯಕ್ರಮದ ಅಡಿ ತರಬೇತಿ ನೀಡಲು ಹೆಚ್ಚಿನ ಕ್ರಮ ಕೈಗೊಳ್ಳಬೇಕು. ಪದವಿ ಮತ್ತು ಡಿಪ್ಲೊಮಾ ಕೋರ್ಸ್‌ ಮುಗಿಸಿದವರ ಪಟ್ಟಿ ಪಡೆದು ಯುವನಿಧಿ ಯೋಜನೆಯಡಿ ನೋಂದಣಿಯಾಗುವಂತೆ ಕ್ರಮ ವಹಿಸಬೇಕು’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ ಒಟ್ಟು 3,48,617 ಫಲಾನುಭವಿಗಳಿದ್ದು, ₹444.47 ಕೋಟಿ ಹಣ ಬಳಕೆಯಾಗಿದೆ. ಶಕ್ತಿ ಯೋಜನೆ ಅಡಿಯಲ್ಲಿ ಜಿಲ್ಲೆಯಲ್ಲಿ 2023ರ ಜೂನ್‌ 11ರಿಂದ 2025ರ ನವೆಂಬರ್‌ 30ರೊಳಗೆ ಮಹಿಳೆಯರು ಮತ್ತು ಬಾಲಕಿಯರು ಒಟ್ಟು ಸೇರಿ ₹10.39 ಕೋಟಿ ಫಲಾನುಭವಿಗಳು ಸೌಲಭ್ಯ ಪಡೆದಿದ್ದಾರೆ. ವಿಭಾಗದ ವಾಹನದಲ್ಲಿ ಪ್ರತಿ ದಿನ ಸರಾಸರಿ 1.15 ಲಕ್ಷ ಮಹಿಳೆಯರು ಪ್ರಯಾಣಿಸುತ್ತಿದ್ದಾರೆ. ಇದಕ್ಕೆ ₹304.35 ಕೋಟಿ ಸಂದಾಯವಾಗಿದೆ. ಪ್ರತಿ ದಿನ ಪ್ರಯಾಣಿಕರಿಂದ ಸರಾಸರಿ 33.70 ಲಕ್ಷ ಸಾರಿಗೆ ಆದಾಯವಾಗುತ್ತಿದೆ. ಕಳೆದ ಸಭೆಯ ಬೇಡಿಕೆಯಂತೆ ಬಸ್ ಸಮಸ್ಯೆ ಇರುವ ಕಡೆಗೆ ಬಸ್‌ನ ವ್ಯವಸ್ಥೆ ಮಾಡಲಾಗಿದೆ’ ಎಂದರು.

ಜಿ.ಪಂ ಸಿಇಒ ಡಾ.ಗಿರೀಶ್‌ ಬದೋಲೆ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಕಿಶೋರಕುಮಾರ ದುಬೆ, ಇಲಾಖೆ ಅಧಿಕಾರಿಗಳು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

‘ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಿ’

‘ಕೆಲವು ಕಡೆ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಬಸ್ ನಿಲ್ಲಿಸುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿವೆ. ಸಮಸ್ಯೆ ತಕ್ಷಣ ಪರಿಹರಿಸಬೇಕು. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು’ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಅಮೃತರಾವ್‌ ಚಿಮಕೋಡೆ ಸೂಚನೆ ನೀಡಿದರು. ‘ಗ್ಯಾರಂಟಿ ಯೋಜನೆಗಳಿಗೆ ಸಂಬಂಧಪಟ್ಟ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಗೆ ಲಿಖಿತ ರೂಪದಲ್ಲಿ ದೂರ ಸಲ್ಲಿಸಿ ಒಂದು ವೇಳೆ ಅವರು ಸಮಸ್ಯೆಗೆ ಸ್ಪಂದಿಸದಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಡಿ. 30ರಂದು ‘ಗ್ಯಾರಂಟಿ ಉತ್ಸವ’

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ‍್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ ಮಾತನಾಡಿ ಡಿ. 30ರಂದು ಬೀದರ್‌ನಲ್ಲಿ ‘ಗ್ಯಾರಂಟಿ ಕಾರ‍್ಯಾಗಾರ’ ಮತ್ತು ‘ಗ್ಯಾರಂಟಿ ಉತ್ಸವ’ ಕಾರ‍್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಸಂಬಂಧಿಸಿದವರು ಪೂರ್ವ ತಯಾರಿ ಮಾಡಿಕೊಳ್ಳಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಆಗಮಿಸಿ ಕಾರ‍್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.