ADVERTISEMENT

ಹುಲಸೂರ| ಶ್ರೀರಾಮನ ಅವಹೇಳನ ಆರೋಪ ಪ್ರಕರಣ: ಅಂಗಡಿ ಮುಂಗಟ್ಟು ಸ್ವಯಂ ಪ್ರೇರಿತ ಬಂದ್

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 3:46 IST
Last Updated 15 ಫೆಬ್ರುವರಿ 2026, 3:46 IST
ಹುಲಸೂರ ಸಮೀಪದ ಭಾಲ್ಕಿ ತಾಲ್ಲೂಕಿನ ಮೆಹಕರ ಗ್ರಾಮದಲ್ಲಿ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿ ಉಪತಹಶೀಲ್ದಾ‌ರ್ ಸಂಜೀವಕುಮಾರ ಭೈರೆ ಅವರಿಗೆ ಮನವಿ ಪತ್ರ ಸಲ್ಲಿಸಿದರು
ಹುಲಸೂರ ಸಮೀಪದ ಭಾಲ್ಕಿ ತಾಲ್ಲೂಕಿನ ಮೆಹಕರ ಗ್ರಾಮದಲ್ಲಿ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿ ಉಪತಹಶೀಲ್ದಾ‌ರ್ ಸಂಜೀವಕುಮಾರ ಭೈರೆ ಅವರಿಗೆ ಮನವಿ ಪತ್ರ ಸಲ್ಲಿಸಿದರು   

ಹುಲಸೂರ: ಸಾಮಾಜಿಕ ಜಾಲತಾಣದಲ್ಲಿ ಹಿಂದೂ ಆರಾಧ್ಯ ದೈವ ಶ್ರೀರಾಮಚಂದ್ರನ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ಆರೋಪಿಯನ್ನು ತಕ್ಷಣ ಬಂಧಿಸಿ, ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಮೆಹಕರ ಗ್ರಾಮದಲ್ಲಿ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಸುಮಾರು ಎರಡು ಗಂಟೆಗಳ ಕಾಲ ಮೆಹಕರ-ಭಾಲ್ಕಿ ರಸ್ತೆ ತಡೆದು ಆಕ್ರೋಶ ಹೊರ ಹಾಕಿದರು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಘಟನೆಗಳನ್ನು ಸಹಿಸಿಕೊಳ್ಳುವುದಿಲ್ಲ. ಆರೋಪಿಯನ್ನು ಎರಡು ದಿನಗಳಲ್ಲಿ ಬಂಧಿಸದಿದ್ದಲ್ಲಿ ಕೆಸರ ಜವಳಗಾ ಬಳಿಯ ರಾಷ್ಟ್ರೀಯ ಹೆದ್ದಾರಿ ತಡೆದು ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಗೆ ಬೆಂಬಲ ಸೂಚಿಸಿ ಗ್ರಾಮದಲ್ಲಿನ ಅಂಗಡಿ ಮುಂಗಟ್ಟುಗಳನ್ನು ವ್ಯಾಪಾರಸ್ಥರು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ ಸಹಕಾರ ನೀಡಿದರು.

ADVERTISEMENT

ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿ ರಾಜ್ಯಪಾಲರಿಗೆ ಬರೆದ ಪತ್ರವನ್ನು ಪ್ರತಿಭಟನಾಕಾರರು ಉಪ ತಹಶೀಲ್ದಾ‌ರ್ ಸಂಜೀವಕುಮಾರ ಭೈರೆ ಅವರಿಗೆ ಸಲ್ಲಿಸಿದರು.

‘ಸಾಮಾಜಿಕ ಸೌಹಾರ್ದ ಕದಡುವ ಹೇಳಿಕೆಗಳಿಗೆ ಅವಕಾಶ ನೀಡಬಾರದು ಹಾಗೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತ್ವರಿತ ಕ್ರಮ ಕೈಗೊಳ್ಳಬೇಕು’ ಎಂದು ಮನವಿಯಲ್ಲಿ ಆಗ್ರಹಿಸಿದರು.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ವಿಡಿಯೊದ ನೈಜತೆ ಸೇರಿದಂತೆ ಘಟನೆಯ ವಿವರಗಳನ್ನು ಪರಿಶೀಲನೆ ನಡೆಸುತ್ತಿದ್ದು, ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ಪೊಲೀಸರು ಮನವಿ ಮಾಡಿದರು.

ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು. ಪ್ರತಿಭಟನೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಂದೋಬಸ್ತ್ ಒದಗಿಸಿದ್ದರು.

ಪ್ರಮುಖರಾದ ಶಿವರಾಜ ತೋರಣೆ, ವೆಂಕಟ ಲಾಳೆ, ಅಣ್ಣರಾವ ಹಾಲಸೆ, ಭರತ ಪಾಟೀಲ, ಮಾರುತಿ ಲೋನೆ , ಪ್ರತಾಪ್ ಮೊರೆ, ಶಿವಾಜಿ ದೇಶಮುಖ್, ಜ್ಞಾನಬಾ ಮಲ್ಕಾಪುರೆ , ಕೈಲಾಸ್ ರೊಳೆ, ಸತ್ಯವಾನ್ ಕಾಂಬಳೆ, ಸಂಜೀವ ದುರ್ಗಾಳೆ, ರಾಹುಲ ಹಡಬೆ, ದತ್ತಾತ್ರಿ ಸೇರಿದಂತೆ ಹಲವರಿದ್ದರು.

ಸಾಮಾಜಿಕ ಸೌಹಾರ್ದ ಕಾಪಾಡುವುದು ಎಲ್ಲರ ಹೊಣೆ. ಕಾನೂನು ಕ್ರಮದ ಮೂಲಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು
ನವನಾಥ ಪಾಟೀಲ ಹಿಂದೂ ಸಂಘಟನೆ ಮುಖಂಡ 
ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಹೇಳಿಕೆಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಬೇಕು
ಅಶೋಕ ಪಾಟೀಲ ಗ್ರಾಮದ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.