
ಕಲಬುರ್ಗಿಯಲ್ಲಿ ನಡೆದ ಅಂತರಕಾಲೇಜು ಅಥ್ಲೆಟಿಕ್ಸ್ ಕ್ರೀಡಾಕೂಟದ ಭಲ್ಲೆ ಎಸೆತ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಗಳಿಸಿದ ಬೀದರ್‍ನ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ದಿಶಾ ನೆಲವಾಡೆ ಅವರಿಗೆ ಪದಕ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು.
ಬೀದರ್: ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಹಾಗೂ ಶರಣೇಶ್ವರ ರೇಷ್ಮೆ ಬಿ.ಇಡಿ. ಕಾಲೇಜು ವತಿಯಿಂದ ಕಲಬುರಗಿಯಲ್ಲ್ಲಿ ಶುಕ್ರವಾರ ನಡೆದ 19ನೇ ಅಂತರ ಕಾಲೇಜು ಅಥ್ಲೆಟಿಕ್ಸ್ ಕ್ರೀಡಾಕೂಟದ ಜಾವೆಲಿನ್ ಥ್ರೋನಲ್ಲಿ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ದಿಶಾ ನೆಲವಾಡೆ ಉತ್ತಮ ಪ್ರದರ್ಶನ ತೋರುವ ಮೂಲಕ ಕೂಟ ದಾಖಲೆ ನಿರ್ಮಿಸಿದರು. ಅಲ್ಲದೆ ತಮ್ಮದೇ ಹಿಂದಿನ ದಾಖಲೆಯನ್ನು ಮುರಿದರು.
2010-11ರ ಸ್ಪರ್ಧೆಯಲ್ಲಿ ದಿಶಾ ಎಂ. ಅವರು, 29.72 ಮೀಟರ್ ದೂರ ಎಸೆಯುವ ಮೂಲಕ ಸಾಧನೆ ಮಾಡಿದ್ದರು. ಈ ಕೂಟದಲ್ಲಿ 33.50 ಮೀಟರ್ ದೂರ ಎಸೆದು ಹಿಂದಿನ ದಾಖಲೆ ಮುರಿದರು. ಜತೆಗೆ ಪ್ರಥಮ ಸ್ಥಾನ ಬಾಚಿಕೊಂಡು, ಅಖಿಲ ಭಾರತಮಟ್ಟದ ಅಂತರ ವಿಶ್ವವಿದ್ಯಾಲಯ ಕ್ರೀಡಾಕೂಟಕ್ಕೆ ಅರ್ಹತೆ ಗಳಿಸಿದರು. ಹೊಸ ದಾಖಲೆ ನಿರ್ಮಿಸಿದ್ದಕ್ಕೆ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಿಂದ ದಿಶಾ ಅವರಿಗೆ ₹ 5 ಸಾವಿರ ನಗದು ಬಹುಮಾನ ವಿತರಿಸಲಾಯಿತು.
ದಿಶಾ ಅವರ ಸಾಧನೆಗೆ ಪ್ರಾಂಶುಪಾಲ ಪ್ರೊ.ಮನೋಜಕುಮಾರ, ದೈಹಿಕ ಶಿಕ್ಷಣ ನಿರ್ದೇಶಕ ರವಿ ನಾಯಕ ಹಾಗೂ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.