ADVERTISEMENT

ಬ್ಯಾಂಕ್‍ಗಳಲ್ಲಿ ಕನ್ನಡ ಬಳಕೆ ಅಭಿಯಾನಕ್ಕೆ ಚಾಲನೆ

ಕನ್ನಡ ಬಳಸದಿದ್ದರೆ ನಾಮಫಲಕಗಳಿಗೆ ಮಸಿ: ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2020, 14:31 IST
Last Updated 29 ಡಿಸೆಂಬರ್ 2020, 14:31 IST
ಜಿಲ್ಲೆಯ ಎಲ್ಲ ಬ್ಯಾಂಕ್‍ಗಳಲ್ಲಿ ಕನ್ನಡದಲ್ಲೇ ವ್ಯವಹಾರ ಮಾಡಲು ಬ್ಯಾಂಕ್ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿ ಬೀದರ್‌ನಲ್ಲಿ ಮಂಗಳವಾರ ಕನ್ನಡ ಅನುಷ್ಠಾನ ಸಮಿತಿ ಸದಸ್ಯರು ಹಾಗೂ ಕಸಾಪ ಪದಾಧಿಕಾರಿಗಳು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಬಾಳಪ್ಪ ಕಮತಗಿ ಅವರಿಗೆ ಮನವಿಪತ್ರ ಸಲ್ಲಿಸಿದರು
ಜಿಲ್ಲೆಯ ಎಲ್ಲ ಬ್ಯಾಂಕ್‍ಗಳಲ್ಲಿ ಕನ್ನಡದಲ್ಲೇ ವ್ಯವಹಾರ ಮಾಡಲು ಬ್ಯಾಂಕ್ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿ ಬೀದರ್‌ನಲ್ಲಿ ಮಂಗಳವಾರ ಕನ್ನಡ ಅನುಷ್ಠಾನ ಸಮಿತಿ ಸದಸ್ಯರು ಹಾಗೂ ಕಸಾಪ ಪದಾಧಿಕಾರಿಗಳು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಬಾಳಪ್ಪ ಕಮತಗಿ ಅವರಿಗೆ ಮನವಿಪತ್ರ ಸಲ್ಲಿಸಿದರು   

ಬೀದರ್: ಬ್ಯಾಂಕ್‍ಗಳಲ್ಲಿ ಕನ್ನಡ ಬಳಕೆ ಅಭಿಯಾನಕ್ಕೆ ಕನ್ನಡ ಅನುಷ್ಠಾನ ಸಮಿತಿ ಸದಸ್ಯ ವಿಜಯಕುಮಾರ ಸೋನಾರೆ ನಗರದ ಕುಂಬಾರವಾಡದ ಭಾರತೀಯ ಸ್ಟೇಟ್ ಬ್ಯಾಂಕ್ ಎದುರು ಕನ್ನಡ ನಾಮಫಲಕ ಪ್ರದರ್ಶಿಸಿ ಚಾಲನೆ ನೀಡಿದರು.

ಜನವರಿ 4 ರ ಒಳಗೆ ಜಿಲ್ಲೆಯ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಇರುವ ಅಂಗಡಿ ಮುಂಗಟ್ಟುಗಳ ಮೇಲೆ ಕನ್ನಡದಲ್ಲಿ ನಾಮಫಲಕ ಬರೆಸಬೇಕು. ಇಲ್ಲವಾದಲ್ಲಿ ನಾಮಫಲಕಗಳಿಗೆ ಮಸಿ ಬಳಿಯಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜನವರಿ 5 ರಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಅವರು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಅವರೊಂದಿಗೆ ಕನ್ನಡ ನಾಮಫಲಕ ಅಳವಡಿಕೆ ಕುರಿತು ಅಂಗಡಿಗಳ ಮಾಲೀಕರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ತಿಳಿಸಿದರು.

ADVERTISEMENT

ಬ್ಯಾಂಕ್ ಸಿಬ್ಬಂದಿಗೆ ರಜೆ ದಿನಗಳಲ್ಲಿ ಕನ್ನಡ ಕಲಿಸಲು ಪರಿಷತ್ತಿನಿಂದ ಕನ್ನಡ ಕಲಿಕಾ ಕೇಂದ್ರ ಶುರು ಮಾಡಲಾಗುವುದು ಎಂದು ಹೇಳಿದರು.

ಜಿಲ್ಲೆಯ ಎಲ್ಲ ಬ್ಯಾಂಕ್‍ಗಳಲ್ಲಿ ಕನ್ನಡದಲ್ಲೇ ವ್ಯವಹಾರ ಮಾಡಲು ಆಯಾ ಬ್ಯಾಂಕ್ ಅಧಿಕಾರಿಗಳಿಗೆ ಸುತ್ತೋಲೆ ಕಳುಹಿಸಲಾಗುವುದು ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಬಾಳಪ್ಪ ಕಮತಗಿ ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಕನ್ನಡ ಅನುಷ್ಠಾನ ಸಮಿತಿ ಸದಸ್ಯರಾದಎಂ.ಪಿ. ಮುದಾಳೆ, ಬಸವರಾಜ ಜೋಜನಾ, ಜೈಕರವೇ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಮಂತ ಸಪಾಟೆ, ಕನ್ನಡ ಸಾಹಿತ್ಯ ಪರಿಷತ್ ನಗರ ಘಟಕದ ಅಧ್ಯಕ್ಷ ಸುನೀಲ್ ಭಾವಿಕಟ್ಟಿ, ಕರ್ನಾಟಕ ಸ್ವಾಭಿಮಾನಿ ವೇದಿಕೆಯ ಅಧ್ಯಕ್ಷ ಸಂತೋಷ ಏಣಕೂರು, ಶಶಿ ಹೊಸಳ್ಳಿ, ಸುಧಾಕರ ಎಲ್ಲಾನೋರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.